ನೌಕರರ ಸಂಘ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ
ಕೆ.ಆರ್. ನಗರ: ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳ ಸ್ಥಾನದ ಆಕಾಂಕ್ಷಿಗಳಾಗಿ ಗುರುವಾರ ಆರು ಮಂದಿ ತಮ್ಮ ನಾಮಪತ್ರ ಸಲ್ಲಿಸಿದರು.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಹಾಲಿ ಅಧ್ಯಕ್ಷ ಡಿಂಡಿಮ ಶಂಕರ್, ಹೊಸ ಅಗ್ರಹಾರ ಹೋಬಳಿಯ ಉಪ ತಹಸೀಲ್ದಾರ್ ಯದುಗಿರೀಶ್, ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಎ.ಸಿ. ಸುರೇಶ್, ಎಂ.ಸಿ. ಶ್ರೀಕಾಂತ್ ಮತ್ತು ಖಜಾಂಚಿ ಸ್ಥಾನದ ಆಯ್ಕೆ ಬಯಸಿ ಭಾಸ್ಕರ್, ಎಚ್.ಡಿ. ಮಂಜು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಶಿಕ್ಷಕ ಎ. ಕುಚೇಲ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಶಾಸಕರ ಸೂಚನೆಯಂತೆ ಅರ್ಜಿ ಸಲ್ಲಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಕಣದಲ್ಲಿರುವ ಡಿಂಡಿಮ ಶಂಕರ್ ಮತ್ತು ಯದುಗಿರೀಶ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದು, ಸತತ ನಾಲ್ಕು ಬಾರಿ ಅಧ್ಯಕ್ಷರಾಗಿದ್ದ ಡಿಂಡಿಮ ಶಂಕರ್ ಅವರಿಗೆ ಯದುಗಿರೀಶ್ ಸೆಡ್ಡು ಹೊಡೆದಿದ್ದಾರೆ. ಆ. ಒಂದರಂದು ಅಧ್ಯಕ್ಷ ಮತ್ತು ಇತರ ಪದಾಧಿಕಾರಿಗಳ ಸ್ಥಾನದ ಚುನಾವಣೆ ನಡೆಯಲಿದ್ದು, 34 ಮಂದಿ ನಿರ್ದೇಶಕರು ಪದಾಧಿಕಾರಿಗಳನ್ನು ಆಯ್ಕೆ ಮಾಡಲಿದ್ದಾರೆ.