ಮೆದುಳು ಜ್ವರ: ಬಾಲಕ ಸಾವು
ಮೈಸುರು: ಮೆದುಳು ಜ್ವರದಿಂದ ಬಳಲುತ್ತಿದ್ದ ಬಾಲಕನೊಬ್ಬ ನಗರ ಚೆಲುವಾಂಬ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಎಚ್.ಡಿ. ಕೋಟೆ ತಾಲೂಕು ಗೊಲ್ಲನಬೀಡು ನಿವಾಸಿ ಬೋರೇಗೌಡ ಎಂಬವರ ಪುತ್ರ ಪ್ರಶಾಂತ್ (9) ಮೃತಪಟ್ಟವನು. ಜ್ವರದಿಂದ ಕೆಲವು ದಿನಗಳ ಹಿಂದೆ ಚೆಲುವಾಂಬ ಆಸ್ಪತ್ರೆಗೆ ದಾಖಲಾಗಿದ್ದು, ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಡೆಂಘೀ ಜ್ವರ ಇರಬಹುದು ಎಂದು ಶಂಕಿಸಲಾಗಿತ್ತು. ಆದರೆ, ವೈದ್ಯರು ಮೆದುಳು ಜ್ವರದಿಂದ ಮೃತಪಟ್ಟಿರುವುದಾಗಿ ವರದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ದಲಿಂಗಪುರದ ಮಹಿಳೆ ನಾಪತ್ತೆ
ಮೈಸೂರು: ನಗರದ ಹೊರವಲಯದಲ್ಲಿರುವ ಸಿದ್ದಲಿಂಗಪುರ ಮಾರಿಗುಡಿ ರಸ್ತೆ ನಿವಾಸಿ ಕಮಲಮ್ಮ ಎಂಬವರು ಜೂ. 22ರಿಂದ ನಾಪತ್ತೆಯಾಗಿದ್ದಾರೆ. ಇವರು ಸಣ್ಣ- ಪುಟ್ಟ ಕೆಲಸ ಮಾಡಿಕೊಂಡಿದ್ದು, ಸಾಲ ತೀರಿಸಲು ಸಾಧ್ಯವಾಗದ ಕಾರಣ ಮನೆ ಬಿಟ್ಟು ಹೋಗಿದ್ದಾರೆ ಎಂದು ಕಮಲಮ್ಮ ಸಹೋದರ ರಘು ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮೊ. 8711088949 ಅಥವಾ ದೂ. 0821- 2418315 ಸಂಪರ್ಕಿಸಲು ಮೇಟಗಳ್ಳಿ ಠಾಣೆ ಪೊಲೀಸರು ಕೋರಿದ್ದಾರೆ.
ಅಪರಿಚಿತ ವೃದ್ಧ ಸಾವು
ಮೈಸೂರು: ಅಸ್ವಸ್ಥಗೊಂಡು ಕೆ.ಆರ್. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಚಹರೆ- 60 ವರ್ಷ, 5.3 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418306 ಸಂಪರ್ಕಿಸಲು ದೇವರಾಜ ಠಾಣೆ ಪೊಲೀಸರು ಕೋರಿದ್ದಾರೆ.
ದೊಡ್ಡಮನಿ ಸಿಂಡಿಕೇಟ್ ಸದಸ್ಯ
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಸಂಸ್ಕೃತ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಬಿ.ಎ. ದೊಡ್ಡಮನಿ ಅವರನ್ನು ಒಂದು ವರ್ಷದ ಅವಧಿಗೆ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಕುಲಸಚಿವರು ತಿಳಿಸಿದ್ದಾರೆ.
ಬಿಜೆಪಿಗೆ ನೇಮಕ
ಮೈಸೂರು: ನಗರದ ಕೆ.ಆರ್. ಕ್ಷೇತ್ರ 1ನೇ ವಾರ್ಡ್ನ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎನ್. ಅಗ್ರಹಾರ ನಿವಾಸಿ ಟಿ.ಎಸ್. ಅರುಣ್ ಅವರನ್ನು ನೇಮಿಸಲಾಗಿದೆ ಎಂದು ಕ್ಷೇತ್ರದ ಬಿಜೆಪಿ ಅಧ್ಯಕ್ಷ ವಿ. ಸೋಮಸುಂದರ್ ತಿಳಿಸಿದ್ದಾರೆ.