ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹೆಬ್ಬಾಳಿನಲ್ಲಿ ಕಟ್ಟಡ ಒತ್ತುವರಿ ತೆರವು

Srinivasa Murthy VN
Updated On : 26 Jul 2013, 12:13 pm

ಕ.ಪ್ರ.ವಾರ್ತೆ ಕೆ.ಆರ್. ನಗರ ಜು. 25
ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ದಶಕಗಳಿಂದ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆ ಮತ್ತು ವಾಣಿಜ್ಯ ಮಳಿಗೆ ನಿರ್ಮಾಣ ಮಾಡಿಕೊಂಡಿದ್ದ ಕೆರೆಯ ಜಾಗವನ್ನು ಬುಧವಾರ ಸಂಜೆ ತಾಲೂಕು ಆಡಳಿತದ ವತಿಯಿಂದ ತೆರವುಗೊಳಿಸಲಾಯಿತು.
ಗ್ರಾಪಂನವರು ಅಕ್ರಮವಾಗಿ ಕೆರೆಯ ಜಾಗದಲ್ಲಿ ಮೂರು ವಾಣಿಜ್ಯ ಮಳಿಗೆಗಳು, ಎರಡು ಮನೆಗಳು ಹಾಗೂ ಬಸ್ ಶೆಲ್ಟರ್ ತೆರವುಗೊಳಿಸುವಂತೆ 15 ದಿನಗಳ ಹಿಂದೆಯೆ ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ಒತ್ತುವರಿದಾರರು ತೆರವುಗೊಳಿಸದ ಹಿನ್ನೆಲೆ ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ಬೆಳಗ್ಗೆಯಿಂದ ರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ, ಜಾಗ ತೆರವುಗೊಳಿಸುವುದರ ಜತೆಗೆ ಕಟ್ಟಡಗಳನ್ನು ನೆಲಸಮ ಮಾಡಿದರು.
ಅಕ್ರಮ ಒತ್ತುವರಿ ಬಗ್ಗೆ ಗ್ರಾಮಸ್ಥರು ಲೋಕಾಯುಕ್ತ ಪೊಲೀಸರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ ಒತ್ತುವರಿಯನ್ನು ಅಳತೆ ಮಾಡಿ ತೆರವಿಗೆ ಕ್ರಮ ಕೈಗೊಳ್ಳಲಾಗಿತ್ತು.
 ದಿಢೀರ್ ಕಾರ್ಯಾಚರಣೆಯಿಂದ ಕಂಗಾಲಾದ ಮನೆಯ ಮಾಲೀಕರು ಮತ್ತು ಮಳಿಗೆಗಳ ಬಾಡಿಗೆದಾರರು ಮಾತಿನ ಚಕಮಕಿ ನಡೆಸಿದರೂ ಅಧಿಕಾರಿಗಳು ಕಟ್ಟಡಗಳನ್ನು ಬಲವಂತವಾಗಿ ತೆರವುಗೊಳಿಸಿದರು.
ಒತ್ತುವರಿ ತೆರವು ಸಂದರ್ಭದಲ್ಲಿ ಸರ್ಕಾರಕ್ಕೆ ಸೇರಿದ ಗ್ರಾಪಂ ನಿರ್ವಹಣೆಯಲ್ಲಿದ್ದ ಮೂರು ಮಳಿಗೆಗಳು ಮತ್ತು ಸ್ಥಳಿಯ ದಿನ ಪತ್ರಿಕೆಯವರು ಗ್ರಾಮಸ್ಥರಿಗೆ ಸಹಾಯರ್ಥವಾಗಿ ನಿರ್ಮಿಸಿಕೊಟ್ಟಿದ್ದ ಬಸ್ ಶೆಲ್ಟರ್ ತೆರವುಗೊಳಿಸಿದ್ದ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದ್ದು, ಸಾರ್ವಜನಿಕ ಬಳಕೆಯ ಆಸ್ತಿ ಉಳಿಸಿಕೊಳ್ಳಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಯಿತಾದರೂ ಕಾರ್ಯಾಚರಣೆ ಸಂದರ್ಭದಲ್ಲಿ ಯಾರೂ ಪ್ರಬಲವಾಗಿ ವಿರೋಧಿಸಲಿಲ್ಲ. ಗ್ರಾಪಂ ಆಸ್ತಿಯನ್ನು ನೆಲಸಮ ಮಾಡಿದರೂ ಪ್ರಶ್ನಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಲಿ ಅಥವಾ ಚುನಾಯಿತ ಜನಪ್ರತಿನಿಧಿಗಳಾಗಲಿ ಇರದೆ ಇದ್ದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ನಾಗರಿಕರು, ಅಕ್ರಮ ಒತ್ತುವರಿಯಾದರೂ ಸರ್ಕಾರಕ್ಕೆ ಸೇರಿದ ಆಸ್ತಿ ನಾಶಪಡಿಸಿದ್ದು ಎಷ್ಟು ಸರಿಯೆಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement