ಎನ್‌ಟಿಎಂ ಶಾಲೆ ಉಳಿವಿಗಾಗಿ 29 ರಿಂದ ಧರಣಿ
ಕ.ಪ್ರ.ವಾರ್ತೆ ಮೈಸೂರು ಜು. 26
ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಮಹಾರಾಣಿ ಎನ್‌ಟಿಎಂ ಶಾಲೆ ಉಳಿಸುವಂತೆ ಒತ್ತಾಯಿಸಿ ಜು.29ರ ಬೆಳಗ್ಗೆ 11 ರಿಂದ 48 ಗಂಟೆಗಳ ನಿರಂತರ ಪ್ರತಿಭಟನೆ ನಡೆಸಲು ಭಾರತ ವಿದ್ಯಾರ್ಥಿ ಫೆಡರೇಷನ್ ನಿರ್ಧರಿಸಿದೆ.
ಮಹಾರಾಣಿ ಎನ್‌ಟಿಎಂ ಶಾಲೆ ಬಾಲಕಿಯರ ವಸತಿ ಶಾಲೆ ಆಗಬೇಕು. ಉದ್ದೇಶಿತ ವಿವೇಕಾನಂದರ ಸ್ಫೂರ್ತಿ ಕೇಂದ್ರವನ್ನು ರಾಮಕೃಷ್ಣ ಆಶ್ರಮದ ಆವರಣದಲ್ಲಿಯೇ ನಿರ್ಮಿಸಬೇಕು ಎಂದು ಆಗ್ರಹಿಸಿ ಜು.29ರ ಬೆಳಗ್ಗೆ 11 ರಿಂದ ಜು.31ರ ಬೆಳಗ್ಗೆ 11 ರವರೆಗೆ 48 ಗಂಟೆಗಳ ನಿರಂತರ ಪ್ರತಿಭಟನೆ ನಡೆಸುವುದಾಗಿ ಫೆಡರೇಷನ್‌ನ ಜಿಲ್ಲಾ ಅಧ್ಯಕ್ಷ ಜಗದೀಶ್ ಸೂರ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೂರಾರು ವರ್ಷಗಳ ಇತಿಹಾಸ ಇರುವ ಶಾಲೆಯನ್ನು ಮುಚ್ಚುವುದು ಸರಿಯಲ್ಲ. ಈ ಶಾಲೆಯಲ್ಲಿ ಬಡವರು, ಕೂಲಿ ಕಾರ್ಮಿಕರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲದೆ ಶಾಲೆಗೆ ಹೆಚ್ಚಿನ ದಾಖಲಾತಿ ಇರುವುದರಿಂದ ಶಾಲೆಯನ್ನು ಮುಚ್ಚಬಾರದು. ಅಲ್ಲದೆ ವಿವೇಕಾನಂದ ಸ್ಫೂರ್ತಿ ಕೇಂದ್ರ ತೆರೆಯಲು ನಮ್ಮ ಅಡ್ಡಿ ಇಲ್ಲ. ಆದರೆ ಕೇಂದ್ರವನ್ನು ರಾಮಕೃಷ್ಣ ಆಶ್ರಮದ ಆವರಣದಲ್ಲಿಯೇ ತೆರೆಯಲಿ. ಸ್ಫೂರ್ತಿ ಕೇಂದ್ರ ತೆರೆಯಲಿಕ್ಕಾಗಿ ನೂರಾರು ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಎಂದು ಹೇಳಿದರು.
ಜು. 29ರ ಬೆಳಗ್ಗೆ 11ಕ್ಕೆ ಮಹಾರಾಣಿ ಎನ್‌ಟಿಎಂ ಶಾಲೆ ಬಳಿ ಈ ಪ್ರತಿಭಟನೆಗೆ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಮತ್ತು ಅನೇಕ ಸಾಹಿತಿಗಳು ಚಾಲನೆ ನೀಡಲಿದ್ದಾರೆ. ಬಳಿಕ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ತಲುಪಿ, ಅಲ್ಲಿ ಹಗಲು ರಾತ್ರಿ ಪ್ರತಿಭಟಿಸಲಿದ್ದಾರೆ. ಜು.31ರ ಬೆಳಗ್ಗೆ 11ಕ್ಕೆ ಮತ್ತೆ ಎನ್‌ಟಿಎಂ ಶಾಲೆ ಎದುರು ಪ್ರತಿಭಟನೆ ಸಮಾರೋಪಗೊಳ್ಳಲಿದೆ. ಆಗ ಸಾಹಿತಿ ಡಾ.ಎಚ್.ಜೆ. ಲಕ್ಕಪ್ಪಗೌಡ ಅವರು ಸಮಾರೋಪ ಭಾಷಣ ಮಾಡುವುದಾಗಿ ವಿವರಿಸಿದರು.
ಫೆಡರೇಷನ್‌ನ ಜಿಲ್ಲಾ ಕಾರ್ಯದರ್ಶಿ ಮಹೇಶ್‌ಕುಮಾರ್, ಕೆ.ಎಸ್. ರವಿಕುಮಾರ್, ವಿನೋದ್ ಪಟೇಲ್ ಇದ್ದರು.