ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮೂಲ ಸೌಕರ್ಯ ನೀಡಿ: ಜಿಟಿಡಿ ಆಗ್ರಹ

Srinivasa Murthy VN
Updated On : 27 Jul 2013, 12:26 pm

ಕ.ಪ್ರ.ವಾರ್ತೆ ಮೈಸೂರು ಜು. 26
ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಗ್ರಾಮಗಳು ಹಾಗೂ ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಶಾಸಕ ಜಿ.ಟಿ. ದೇವೇಗೌಡ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಶುಕ್ರವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಕ್ಷೇತ್ರದ ದಟ್ಟಗಳ್ಳಿ, ಜನತಾನಗರ, ರಾಜರಾಜೇಶ್ವರಿ ನಗರ, ಬೋಗಾದಿ 2ನೇ ಹಂತ, ಗಿರಿದರ್ಶಿನಿ ಬಡಾವಣೆಗಳಿಗೆ ಸಂಬಂಧಿಸಿದಂತೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ ಮುಂತಾದವುಗಳನ್ನು ಕಲ್ಪಿಸಬೇಕು. ಕೆಆರ್ ಮತ್ತು ಕಬಿನಿ ಜಲಾಶಯಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ಬೆಳೆ ವಿಮೆ ಯೋಜನೆಯನ್ನು ಕನಿಷ್ಠ ಗ್ರಾಪಂ ಹಾಗೂ ಪ್ರತಿ ಹಳ್ಳಿ ಮಟ್ಟಕ್ಕೆ ಅನ್ವಯಿಸಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರು, ಎಸ್ಸಿ, ಎಸ್ಟಿ ರೈತರ ಬೆಳೆ ವಿಮಾ ಕಂತನ್ನು ಸರ್ಕಾರವೇ ಭರಿಸಿದಲ್ಲಿ ಬಹುತೇಕ ರೈತರಿಗೆ ಅನುಕೂಲವಾಗುತ್ತದೆ. ಇದು ಸರ್ಕಾರಕ್ಕೂ ಅಷ್ಟೇನು ಹೊರೆಯಾಗುವುದಿಲ್ಲ ಎಂದು ಆಗ್ರಹಿಸಿದರು.
ಗ್ರಾಮಸಭೆ ಮಸೂದೆ ವಾಪಸ್ ಪಡೆಯಿರಿ: ಗ್ರಾಪಂ ಅಧ್ಯಕ್ಷರು, ಸದಸ್ಯರು, ಪುರಸಭೆ, ಪಾಲಿಕೆ ಅಧ್ಯಕ್ಷರು, ಸದಸ್ಯರು ಗ್ರಾಮಸಭೆಗೆ ಗೈರು ಹಾಜರಾದರು ಎಂದು ಅವರನ್ನು ವಜಾ ಮಾಡುವ ಕಾನೂನು ಸರಿಯಲ್ಲ. ಹಳ್ಳಿಯಿಂದ ಚುನಾಯಿತರಾಗಿರುವವರೆಲ್ಲರೂ ವಿದ್ಯಾವಂತರಲ್ಲ. ಅಲ್ಲದೇ ಹಿಂದುಳಿದ ವರ್ಗ, ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿದ್ದಾರೆ. ಎಂಎಲ್‌ಎ, ಎಂಪಿಗಳೇ ಅನುದಾನ ಖರ್ಚು ಮಾಡದಿದ್ದಾಗ ಅಂತವರನ್ನೂ ಅನರ್ಹಗೊಳಿಸಬೇಕಲ್ಲವೇ? ಆದ್ದರಿಂದ ಈ ಮಸೂದೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು.
1950-60ನೇ ಇಸವಿಗಿಂತ ಹಿಂದೆ ಇದ್ದ ದಾಖಲಾತಿಗಳು ಕೆಲವು ವೇಳೆ ಸಿಗದಿದ್ದಾಗ ಅಂತಹ ರೈತರ ಜಮೀನನ್ನು ದುರಸ್ತಿ ಮಾಡುತ್ತಿಲ್ಲ. ರೈತ ಅನುಭವದಲ್ಲಿದ್ದು, ಕಾನೂನು ರೀತ್ಯಾ ಯಾವುದಾದರೊಂದು ದಾಖಲೆಯನ್ನು ಪಡೆದು ಅಥವಾ ಖಾಲಿ ಆರ್‌ಟಿಸಿಯಲ್ಲಿ ಇದ್ದಂತೆ, ದುರಸ್ತಿ ಮಾಡಲು ಸರ್ಕಾರ ಆದೇಶಿಸಿ ರೈತರ ನೆರವಿಗೆ ಕೂಡಲೇ ಸ್ಪಂದಿಸಬೇಕು.
ಒಬ್ಬ ವಿದ್ಯಾರ್ಥಿಗೆ ಒಂದು ದಿನಕ್ಕೆ ಬೆಳಗ್ಗೆ ತಿಂಡಿ, ಸಂಜೆ ಕಾಫಿ, ಬಿಸ್ಕೆಟ್ ಮತ್ತು ರಾತ್ರಿಯ ಊಟ ಸೇರಿ ದಿನಕ್ಕೆ 30 ಇರುವುದನ್ನು 50ಕ್ಕೆ ಏರಿಸಬೇಕು. ಮೈಸೂರಿನಲ್ಲಿ ಮಹಿಳಾ ಪೂರಕ ಆಹಾರ ಉತ್ಪಾದಕರ ತರಬೇತಿ ಕೇಂದ್ರ ಮತ್ತು ಸ್ತ್ರೀಶಕ್ತಿ ಸಂಘದ ಮಹಿಳೆಯರು ಅಂಗನವಾಡಿಗಳಿಗೆ ಆಹಾರವನ್ನು ಪೂರೈಸುತ್ತಿದ್ದಾರೆ. ಈ ವ್ಯವಸ್ಥೆ ಬೇರೆ ಜಿಲ್ಲೆಗಳಿಗೂ ವಿಸ್ತರಿಸಬೇಕು. ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಡಬೇಕು. ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಮಾಸಿಕ 2250 ನಿಡಲಾಗುತ್ತಿದೆ. ಈ ಮೊತ್ತವನ್ನು ಹೆಚ್ಚಿಸಬೇಕು ಎಂದು ಕೋರಿದರು.
ಅಕ್ರಮ ಮರಳುಗಾರಿಕೆ ತಡೆಯಿರಿ: ಲೋಕೋಪಯೋಗಿ ಸಚಿವರು ಪ್ರತಿನಿಧಿಸುವ ಟಿ.ನರಸೀಪುರ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಹೆಚ್ಚಾಗಿ ನಡೆಯುತ್ತಿದೆ. ಹಿಂದೆ ಒಂದು ಲೋಡ್ ಮರಳು 8000 ಇದ್ದಿದ್ದು, ಸದ್ಯ 15000 ರಿಂದ 20000 ವರೆಗೆ ಇದೆ. ಬೆಂಗಳೂರಿನಿಂದ ಟಿಪ್ಪರ್‌ಗಳ ಮೂಲಕ ಮರಳು ಸಾಗಣೆ ನಡೆಯುತ್ತಿದೆ. ಮುಖ್ಯಮಂತ್ರಿಗಳು ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ಕೈಗೊಂಡರು. ಈಗ ನಿಮ್ಮ ಕಣ್ಮುಂದೆ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ತಡೆಯಲು ಆಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಇದರ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೇವೇಗೌಡ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement