ನಾಲ್ಕು ದಿನಗಳ ಕಾಲ ಮಳೆ ಸಂಭವ
ಮೈಸೂರು: ಜಿಲ್ಲೆಯಲ್ಲಿ ಜು.27 ರಿಂದ ನಾಲ್ಕು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ನಾಗನಹಳ್ಳಿಯ ಸಮಗ್ರ ಕೃಷಿ ಹವಾಮಾನ ವಿಭಾಗದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು ಹಾಗೂ ಸಹ ಸಂಶೋಧಕ ಎನ್. ನರೇಂದ್ರಬಾಬು ತಿಳಿಸಿದ್ದಾರೆ.
ಜು.27 ರಿಂದ 30 ರವರೆಗೆ ಮೋಡ ಕವಿದ ವಾತಾವರಣವಿದ್ದು, ಚದುರಿದಂತೆ ಅಲ್ಲಲ್ಲಿ ತುಂತುರುವಿನಿಂದ ಕೂಡಿದ ಸಾಧಾರಣ ಮಳೆ ಬರುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 27- 28 ಮತ್ತು ಕನಿಷ್ಠ ಉಷ್ಣಾಂಶ 18- 19 ದಾಖಲಾಗುವ ಸಾಧ್ಯತೆಯಿದೆ. ಬೆಳಗಿನ ಗಾಳಿಯ ತೇವಾಂಶ ಶೇ. 95 ರಿಂದ 96 ರವರೆಗೆ ಮತ್ತು ಮಧ್ಯಾಹ್ನದ ತೇವಾಂಶ ಶೇ.76 ರಿಂದ 87. ಗಾಳಿಯು ಗಂಟೆಗೆ ಸರಾಸರಿ 5- 6 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ ಎಂದಿದ್ದಾರೆ.
ಸಲಹೆ: ಬಾಳೆ ಬೆಳೆಯ ನಾಟಿಗಾಗಿ ಉಪಯೋಗಿಸುವ ಕಂದುಗಳು ಗೆಡ್ಡೆ ಕೊರೆಯುವ ಹುಳು, ಮೊಸಾಯಿಕ್ ನಂಜುರೋಗ, ಪನಾಮರೋಗ ಮತ್ತು ಸಸ್ಯ ಜಂತುಗಳಿಂದ ಮುಕ್ತವಾಗಿರಬೇಕು.ಮೆಣಸಿನಕಾಯಿಗೆ ತಗಲುವ ನುಸಿ ಮತ್ತು ಥಿಪ್ಸ್ ರೋಗದ ಹತೋಟಿಗೆ ರೋಗರ್ ಹಾಗೂ ಡೈಕೋಪಾಲ್ ಔಷಧ ಸಿಂಪಡಿಸುವುದು. ತೆಂಗು ಬೆಳೆಯ ಕಾಂಡ ಸೋರುವ ರೋಗದ ಬಾಧೆಯನ್ನು ತಡೆಯಲು ಬಾಧೆಯಿರುವ ಜಾಗವನ್ನು ಹರಿತವಾದ ಬಾಚಿಯಿಂದ ಕೆತ್ತಿ ಶೇ.1 ಬೋರ್ಡೊ ಮುಲಾಮು ಲೇಪಿಸಬೇಕು ಎಂದು ಕೃಷಿಕರಿಗೆ ಸಲಹೆ ನೀಡಿದ್ದಾರೆ. ಮಾಹಿತಿಗೆ ಮೊ. 8095227713 ಅಥವಾ 0821 2591267 ಸಂಪರ್ಕಿಸಬಹುದು.