ಕಬ್ಬು ಬೆಳೆಗಾರರ ಸಭೆ ಕರೆಯಲು ಆಗ್ರಹ
ಕ.ಪ್ರ.ವಾರ್ತೆ ಮೈಸೂರು ಜು. 27
ಮಂಡ್ಯ ಲೋಕಸಭೆ ಮತ್ತು ಮೈಸೂರು- ಚಾಮರಾಜನಗರ ವಿಧಾನಪರಿಷತ್ ಉಪ ಚುನಾವಣೆ ಮುಗಿದ ಕೂಡಲೇ ಜಿಲ್ಲಾಡಳಿತ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ, ರೈತರು, ಕಬ್ಬು ಬೆಳೆಗಾರರ ಸಭೆ ಕರೆಯಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಆಗ್ರಹಿಸಿದೆ.
ಮೈಸೂರು ಜಲದರ್ಶಿನಿ ಆವರಣದಲ್ಲಿ ಶನಿವಾರ ಸಭೆ ಸೇರಿದ ರೈತ ಸಂಘದ ಪದಾಧಿಕಾರಿಗಳು, ಕಳೆದ ಎರಡು ವರ್ಷದ ಬಾಕಿ ಹಣ ಹಾಗೂ ಈ ವರ್ಷದ ಮುಂಗಡ ಹಣ ನಿಗದಿಪಡಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಬೇಕಿತ್ತು. ಆದರೆ, ಉಪ ಚುನಾವಣೆ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಚುನಾವಣೆ ಬಳಿಕ ಸಭೆ ಕರೆಯಬೇಕು ಎಂದು ನಿರ್ಣಯಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಚುನಾವಣೆ ಮುಗಿದ ನಂತರ ಸಭೆ ಕರೆದು ಬಾಕಿ ಹಣ ಕೊಡಿಸಬೇಕು ಹಾಗೂ ಮುಂಗಡ ಹಣ ನಿಗದಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ರೂಪಿಸಲು ತೀರ್ಮಾನಿಸಿದರು.
ಹೆಚ್ಚುವರಿ ಟಿಸಿ ಅಳವಡಿಸಿ: ಮುಂಗಾರು ಆರಂಭವಾಗಿದ್ದು ಜಿಲ್ಲಾಡಳಿತ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಕಾನೂನು ಪ್ರಕಾರ ಮಾರಾಟ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕೆಟ್ಟು ಹೋಗಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳನ್ನು ಕೂಡಲೇ ಸರಿಪಡಿಸಬೇಕು. ಅಗತ್ಯ ಇರುವ ಕಡೆ ಹೆಚ್ಚುವರಿ ಟಿಸಿ ಅಳವಡಿಸಬೇಕು ಎಂದು ಆಗ್ರಹಿಸಿದರು.
ಕೆ.ಆರ್. ನಗರದ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಶೀಘ್ರವಾಗಿ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ನಂಜನಗೂಡು ತಾಲೂಕು ಹುಲ್ಲಹಳ್ಳಿ, ರಾಂಪುರ ನಾಲೆ ಹೂಳು ತೆಗೆಯುವ ಕೆಲಸ ವಿಫಲವಾಗಿದೆ. ಇದಕ್ಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಒಳ ಒಪ್ಪಂದ ಕಾರಣ ಎಂದು ಆರೋಪಿಸಿದರು.
ಈ ಸಭೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡರಾದ ಕೆ.ಎಂ. ಪುಟ್ಟಸ್ವಾಮಿ, ಅಶ್ವತ್ಥನಾರಾಯಣರಾಜೇ ಅರಸ್, ಸಿದ್ದರಾಜು, ಎಚ್.ಆರ್. ಬಂಗಾರಸ್ವಾಮಿ, ವಿದ್ಯಾಸಾಗರ್, ಗುರುಲಿಂಗೇಗೌಡ, ರಾಜೇಂದ್ರ, ಶಿವನಾಗು, ಪ್ರಕಾಶ್ ಹುಲ್ಲಹಳ್ಳಿ, ಹೊಂಬಾಳೆಗೌಡ, ಮಹದೇವಸ್ವಾಮಿ, ನಾಗಣ್ಣ, ನಾಗರಾಜೇಗೌಡ ಭಾಗವಹಿಸಿದ್ದರು.
ಆಯೋಗ ಅನುಮತಿ ಪಡೆದು ಕಬ್ಬು ಸಮಸ್ಯೆ ಪರಿಹರಿಸಿ
ಮೈಸೂರು: ಕಬ್ಬು ಬೆಳೆಗಾರ ರೈತರು ತೀವ್ರ ಸಂಕಷ್ಟದಲ್ಲಿರುವ ಕಾರಣ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆದು ಸಮಸ್ಯೆ ಬಗೆಹರಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ.
ನಗರದ ಗನ್ಹೌಸ್ ಬಳಿ ನೀಲಕಂಠೇಶ್ವರ ಮಠದ ಬಳಿ ಇರುವ ಸಂಘದ ಕಚೇರಿಯಲ್ಲಿ ಕಬ್ಬು ಬೆಳೆಗಾರರ ಸಭೆ ಸೇರಿ ಬಳಿಕ ಜಿಲ್ಲಾಧಿಕಾರಿ ಸಿ.ಶಿಖಾ ಅವರನ್ನು ಭೇಟಿಯಾಗಿ, ಚುನಾವಣಾ ಆಯೋಗದ ಅನುಮತಿ ಪಡೆದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲೆ ಸಭೆ ನಡೆಸಿ ರೈತರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕಬ್ಬು ಬೆಳೆಗಾರರ ಮುಖಂಡರು ಆಗ್ರಹಿಸಿದರು.
ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಲು ಹಾಗೂ ದಸರಾ ಮಹೋತ್ಸವ ಪೂರ್ವಭಾವಿ ಸಭೆ ನಡೆಸಲು ಚುನಾವಣಾ ಆಯೋಗದ ಅನುಮತಿ ಪಡೆಯಲಾಗಿದೆ. ಇದೇ ರೀತಿ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ವಿವರಿಸಿದರು.
ಈ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಅನುಮತಿ ಕೋರಲಾಗುವುದು. ಆಯೋಗದಿಂದ ಅನುಮತಿ ದೊರೆತ ಕೂಡಲೇ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಧಿಕಾರಿ ಸಿ.ಶಿಖಾ ಭರವಸೆ ನೀಡಿದರು.
ಪ್ರತಿಭಟನೆ ಕೈಬಿಡಲು ನಿರ್ಧಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿವೇಶನ ಮುಗಿದ ಕೂಡಲೇ ಕಬ್ಬು ಖರೀದಿ ಮಂಡಳಿ ರಚಿಸುವುದು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಜು.30 ರಂದು ವಿಧಾನಸೌಧ ಮುಂದೆ ನಡೆಸಲು ಉದ್ದೇಶಿಸಲಾಗಿದ್ದ ಪ್ರತಿಭಟನೆ ಕೈಬಿಡಲು ಸಂಘದ ಸಭೆಯಲ್ಲಿ ನಿರ್ಧರಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮುಖಂಡರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಚಿಕ್ಕಲಿಂಗಯ್ಯ, ಕೆಂಡಗಣ್ಣಸ್ವಾಮಿ, ಬೀರಂಬಳ್ಳಿ ಪ್ರಭಾಕರ್, ಚೌಡಳ್ಳಿ ನಾಗರಾಜು, ಕುರುಬೂರು ಸಿದ್ದೇಶ್, ಗಂಗಾಧರಪ್ಪ, ಸತೀಶ್, ಅನಿಲ್, ಅಂದಾನಿಗೌಡ, ನಾರಾಯಣ್, ಕುಪ್ಯ ಜವರಯ್ಯ, ಆನಂದ್, ಗೌಡರ್ ಸಿದ್ದಲಿಂಗಪ್ಪ, ನಾಗಣ್ಣ, ಲಿಂಗೇಗೌಡ, ಪುಟ್ಟಸ್ವಾಮಿ, ನಂಜನಗೂಡು ರವಿ, ಮಂಜು, ರಾಜು, ಹಾಡ್ಯ ರವಿ, ತುಂಬಲ ರಾಜು, ಬಿ.ಎಂ. ನಂಜಪ್ಪ, ರಾಮಪ್ರಸಾದ್, ಕುಪ್ಯ ಪುಟ್ಟಸ್ವಾಮಿ, ಕೂಡನಹಳ್ಳಿ ಬಸವಣ್ಣ, ಹೊಮ್ಮ ಮಂಜು ಇದ್ದರು.