ಕಳ್ಳರ ಸೆರೆ: 750 ಕೆ.ಜಿ. ಅಲ್ಯೂಮಿನಿಯಂ ವಶ
ಮೈಸೂರು: ಮೈಸೂರು ದಕ್ಷಿಣ ಠಾಣೆ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿ, 70 ಸಾವಿರ ಮೌಲ್ಯದ 750 ಕೆ.ಜಿ. ಅಲ್ಯೂಮಿನಿಯಂ ವಶಪಡಿಸಿಕೊಂಡಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ. ಗಾಂಧಿನಗರ 1ನೇ ಕ್ರಾಸ್ ನಿವಾಸಿ ಮಕ್ಬೂಲ್ ಷರೀಫ್ ಎಂಬವರ ಪುತ್ರ ಉಮ್ಮರ್ ಷರೀಫ್ (32) ಮತ್ತು ಸತ್ಯನಗರ ಇಲಾಯಿ ಮಸೀದಿ ಹತ್ತಿರದ ನಿವಾಸಿ ಅಯಾಜ್ ಖಾನ್ ಎಂಬವರ ಪುತ್ರ ಅಬ್ಜಲ್ ಖಾನ್ (55) ಬಂಧಿತ ಆರೋಪಿಗಳು. ಡಿಸಿಐಬಿ ಶಾಖೆಯ ಇನ್ಸ್ಪೆಕ್ಟರ್ ಟಿ. ಅಶೋಕ್ಕುಮಾರ್ ಮತ್ತು ಸಿಬ್ಬಂದಿ ಪಾಂಡುರಂಗ, ಗೌರಿಶಂಕರ್, ಮಂಜುನಾಥ್ ಅವರು ರಾತ್ರಿ ಗಸ್ತಿನಲ್ಲಿದ್ದಾಗ ಭಾರತ್ನಗರದ ಬಳಿ 5 ಜನ ಗುಂಪಾಗಿ ಹೋಗುತ್ತಿದ್ದರು. ಪೊಲೀಸ್ ಜೀಪನ್ನು ನೋಡಿ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದಾಗ ಇಬ್ಬರನ್ನು ಹಿಡಿದು ದಕ್ಷಿಣ ಠಾಣೆ ಪೊಲೀಸರಿಗೆ ಒಪ್ಪಿಸಿದರು.ಆರೋಪಿಗಳನ್ನು ಕೂಲಂಕಷವಾಗಿ ವಿಚಾರಣೆ ಮಾಡಿದಾಗ ಕಳವು ಮಾಡಿರುವ ಒಪ್ಪಿಕೊಂಡಿದ್ದಾರೆ. ಜಯಪುರ ಠಾಣೆಯ ಉದ್ಬೂರು, ತಲಕಾಡು, ಕೌಲಂದೆ ಸೇರಿದಂತೆ ವಿವಿಧೆಡೆ ಕಳವು ಮಾಡಿದ್ದ 70 ಸಾವಿರ ಮೌಲ್ಯದ 750 ಕೆ.ಜಿ. ತೂಕದ ಅಲ್ಯೂಮಿನಿಯಂ ವೈರ್ಗಳನ್ನು ಕರಗಿಸಿ ಗಟ್ಟಿ ಮಾಡಿ ಇಟ್ಟಿದ್ದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಾಯಿ, ಇಬ್ಬರು ಮಕ್ಕಳು ನಾಪತ್ತೆ
ಕ.ಪ್ರ.ವಾರ್ತೆ ಮೈಸೂರು ಜು. 27
ಜಯನಗರ ಬಳಿಯ ಚಿಕ್ಕಹರದನಹಳ್ಳಿ ನಿವಾಸಿ ಹಾಗೂ ನಗರಪಾಲಿಕೆ ಗುತ್ತಿಗೆದಾರ ಎ. ಮಂಜು ಅವರ ಪತ್ನಿ ಗಾಯತ್ರಿ (34), ಪುತ್ರಿ ಅಂಜನಾ (11) ಮತ್ತು ಕಾಂತರಾಜು (8) ನಾಪತ್ತೆಯಾಗಿದ್ದಾರೆ. ಪಕ್ಕದ ಮನೆ ಉಷಾ ಎಂಬವರ ಬಳಿ ಜು.24 ರಂದು ಯಾರದೋ ಹುಟ್ಟು ಹಬ್ಬಕ್ಕಾಗಿ ಹೋಗುತ್ತಿರುವುದಾಗಿ ಹೇಳಿದ್ದಾರೆ. ಕಾಣೆಯಾಗಿರುವ ಪತ್ನಿ ಮತ್ತು ಮಕ್ಕಳನ್ನು ಪತ್ತೆ ಮಾಡಿಕೊಡುವಂತೆ ಮಂಜು ಪೊಲೀಸರಿಗೆ ದೂರು ನೀಡಿದ್ದಾರೆ. ಗಾಯತ್ರಿ ಚಹರೆ- 5 ಅಡಿ ಎತ್ತರ, ದೃಢಕಾಯ ಶರೀರ, ಎಣ್ಣೆಗೆಂಪು ಮೈಬಣ್ಣ. ಅಂಜನಾ ಚಹರೆ- 3.5 ಅಡಿ ಎತ್ತರ, ಸಾಧಾರಣ ಮೈಕಟ್ಟು. ಕಾಂತರಾಜು ಚಹರೆ- 3 ಅಡಿ ಎತ್ತರ, ಸಾಧಾರಣ ಮೈಕಟ್ಟು. ಮೂವರು ಕನ್ನಡ ಮಾತನಾಡುತ್ತಾರೆ. ಈ ಮೂವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.0821- 2418321, 521 ಸಂಪರ್ಕಿಸಲು ಅಶೋಕಪುರಂ ಠಾಣೆ ಪೊಲೀಸರು ಕೋರಿದ್ದಾರೆ.
ಪೇದೆಗೆ ಚಾಕುವಿನಿಂದ ಇರಿತ
ಮೈಸೂರು: ಅಮಾನತುಗೊಂಡಿರುವ ಪೇದೆ ಮನೆಗೆ ನುಗ್ಗಿದ ನಾಲ್ವರು ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಕೆ.ಆರ್. ಮೊಹಲ್ಲಾ ಲಕ್ಷ್ಮಿ ಚಿತ್ರಮಂದಿರ ಹಿಂಭಾಗ ನಿವಾಸಿ ರಾಜು ಇರಿತಕ್ಕೊಳಗಾದವರು. ಗಾಯಗೊಂಡಿರುವ ರಾಜು ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಡುವಾರಹಳ್ಳಿ ನಿವಾಸಿಗಳಾದ ಶ್ರೀನಿವಾಸನಾಯಕ, ಮಂಜೇಶ್, ಸಂಜು, ರವಿ, ನಿಖಿತ್ ಎಂಬವರು ರಾಜು ಮೇಲೆ ಹಲ್ಲೆ ನಡೆಸಿರುವುದಾಗಿ ಕೆ.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀನಿವಾಸನಾಯಕ, ಮಂಜೇಶ್ ಎಂಬವರಿಗೆ ರಾಜು ಚಾಕುವಿನಿಂದ ಇರಿದಿರುವುದಾಗಿ ಮತ್ತೊಂದು ಪ್ರಕರಣ ಸಹ ದಾಖಲಾಗಿದೆ. ಶ್ರೀನಿವಾಸನಾಯಕ ಬಿಎಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಕಾರುಗಳನ್ನು ಬಾಡಿಗೆಗೆ ನೀಡುವುದಾಗಿ ಮಾಲೀಕರಿಂದ ಪಡೆದು ಬೇರೆಯವರಿಗೆ ಅಡವಿಟ್ಟು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 1 ವರ್ಷದ ಹಿಂದೆ ಪೊಲೀಸರು ರಾಜುನನ್ನು ಬಂಧಿಸಿದ್ದರು. ವಾಹನ ಬಾಡಿಗೆಗೆ ಪಡೆಯಲು ಶ್ರೀನಿವಾಸನಾಯಕ ಮತ್ತು ಇತರರು ರಾಜುಗೆ ಮಧ್ಯವರ್ತಿಯಾಗಿದ್ದರು. ಹಣ ಕೊಡದಿದ್ದ ವಿಚಾರದಲ್ಲಿ ಇವರ ಮಧ್ಯೆ ಘರ್ಷಣೆ ಉಂಟಾಗಿತ್ತು. ರಾಜು ತನ್ನ ವಿರುದ್ಧ ದೂರು ನೀಡಿದವರೊಂದಿಗೆ ರಾಜಿ ಮಾಡಿಕೊಂಡು ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಂಡಿದ್ದಾನೆ. ಆದರೆ, ಅಮಾನತು ಮಾತ್ರ ತೆರವಾಗಿಲ್ಲ.
ಬಸ್ ಡಿಕ್ಕಿ: ದ್ವಿಚಕ್ರ ಸವಾರ ಸಾವು
ಮೈಸೂರು: ಸಾರಿಗೆ ಬಸ್ ಹಿಂಬದಿಯಿಂದ ಡಿಕ್ಕಿಯಾಗಿ ದ್ವಿಚಕ್ರವಾಹನ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಿಎನ್ ರಸ್ತೆಯಲ್ಲಿರುವ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಶನಿವಾರ ಸಂಜೆ ನಡೆದಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕು ಕೊಡಂಗಳ್ಳಿನಪುರ ನಿವಾಸಿ ಕೇಶವ (23) ಮೃತಪಟ್ಟವರು. ಇವರು ಟಾರ್ಪಲ್ ಬ್ಯಾಗ್ ವ್ಯಾಪಾರ ಮಾಡಿಕೊಂಡಿದ್ದು, ದ್ವಿಚಕ್ರವಾಹನದಲ್ಲಿ ಬ್ಯಾಗ್ ಕಟ್ಟಿಕೊಂಡು ಬರುತ್ತಿದ್ದಾಗ ಹಿಂಬದಿಯಿಂದ ಬಂದ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಲಷ್ಕರ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿಭಟನೆ: ಸಂಚಾರಿ ಪೊಲೀಸರು ಬಸ್ ನಿಲ್ದಾಣದ ಬಳಿ ಹೆಲ್ಮೆಟ್ ಇಲ್ಲದವರನ್ನು ಹಿಡಿಯುತ್ತಿದ್ದರು. ಹೆಲ್ಮೆಟ್ ಧರಿಸದ ಕೇಶವ ತಪ್ಪಿಸಿಕೊಂಡು ಬರುವಾಗ ಬಸ್ಸಿಗೆ ಸಿಕ್ಕಿ ಮೃತಪಟ್ಟಿರುವುದಾಗಿ ಸ್ಥಳೀಯರು ಆರೋಪಿಸಿ ಕೆಲಕಾಲ ಪ್ರತಿಭಟಿಸಿದರು. ಕೆಲವು ಕಿಡಿಗೇಡಿಗಳು 3-4 ಕೆಎಸ್ಆರ್ಟಿಸಿ ಬಸ್ಸುಗಳ ಮೇಲೆ ಕಲ್ಲು ತೂರಿ ಗಾಜುಗಳನ್ನು ಪುಡಿ ಮಾಡಿದರು. ಇದರಿಂದ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಲಷ್ಕರ್ ಮತ್ತು ನಜರ್ಬಾದ್ ಠಾಣೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.
ವೇಶ್ಯಾವಾಟಿಕೆ: ಇಬ್ಬರ ಸೆರೆ
ಮೈಸೂರು: ಕಾರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರನ್ನು ಕುವೆಂಪುನಗರ ಠಾಣೆ ಪೊಲೀಸರು ಶನಿವಾರ ಬೆಳಗ್ಗೆ ಬಂಧಿಸಿ, 5 ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ. ಮಂಡ್ಯ ಜಿಲ್ಲೆ ಡಿ. ಗೌಡಗೆರೆ ನಿವಾಸಿ ಸತೀಶ್ ಎಂಬವರ ಪುತ್ರ ಜಿ.ಎಸ್. ಮಧುಸೂದನ್ (27), ನಂಜನಗೂಡು ತಾಲೂಕು ದೇವಲಾಪುರ ನಿವಾಸಿ ಲೇ. ಜಯರಾಮು ಎಂಬವರ ಪತ್ನಿ ಸುಮ ಅ. ಸುಮಿ (38) ಬಂಧಿತ ಆರೋಪಿಗಳು. ಈ ಇಬ್ಬರು ಹೊರ ವರ್ತುಲ ರಸ್ತೆ ಕೆಇಬಿ ಜಂಕ್ಷನ್ ಬಳಿ ಆಲ್ಟೋ ಕಾರಿನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಲ್ಲದೆ, ಗಿರಾಕಿಗಳಿಗೆ ಮಹಿಳೆಯರನ್ನು ಸರಬರಾಜು ಮಾಡುತ್ತಿದ್ದರು.