ಕುಡುಕ ತಂದೆ ಕೊಂದ ಪುತ್ರ!
ಕ.ಪ್ರ.ವಾರ್ತೆ ಹುಣಸೂರು ಜು. 27
ಕುಡುಕ ತಂದೆಯ ಕಾಟ ತಾಳಲಾರದೆ ಮಗ ತನ್ನ ಚಿಕ್ಕಪ್ಪನೊಂದಿಗೆ ಸೇರಿ ಕೊಲೆ ಮಾಡಿ ಶವವನ್ನು ನದಿಗೆ ಎಸೆದಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.
ಬೊಮ್ಮರಾಯನಗೌಡ ಕೊಲೆಯಾದವರು. ಅವರ ಪುತ್ರ ಅನು ಹಾಗೂ ಆತನ ಚಿಕ್ಕಪ್ಪ ತಾಲೂಕಿನ ಹರಳಹಳ್ಳಿ ಗ್ರಾಮದ ಪಾಪೇಗೌಡ ಬಂಧಿತ ಆರೋಪಿಗಳು.
ಜು.8 ರಂದು ಹನಗೋಡು ಬಳಿಯ ಕಾಮಗೌಡನಹಳ್ಳಿ ಗೇಟ್ ಬಳಿ ಲಕ್ಷ್ಮಣತೀರ್ಥ ನದಿಯಲ್ಲಿ ಕತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿದ್ದ ಸ್ಥಿತಿಯಲ್ಲಿ ಶವ ಸಿಕ್ಕಿತ್ತು.
ನಂತರ ಶವವನ್ನು ಪಿರಿಯಾಪಟ್ಟಣ ತಾಲೂಕು ಬೆಕ್ಯಾ ಗ್ರಾಮದ ನಿವಾಸಿ ಬೊಮ್ಮರಾಯಗೌಡ ಎಂದು ಗುರುತಿಸಲಾಗಿತ್ತು.
ತಂದೆಯ ಬಗ್ಗೆ ಬೇಸರಗೊಂಡಿದ್ದ ಅನು ಮನೆಬಿಟ್ಟು ಹನಗೋಡು ಬಳಿಯ ಹರಳಹಳ್ಳಿ ಗ್ರಾಮದಲ್ಲಿದ್ದ ತನ್ನ ಚಿಕ್ಕಪ್ಪನ ಮನೆ ಸೇರಿಕೊಂಡಿದ್ದ. ಆದರೆ ಬೊಮ್ಮರಾಯನಗೌಡ ಅಲ್ಲಿಗೂ ಕುಡಿದು ಬಂದು ಮಗನಿಗೆ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಮನೆಯಲ್ಲಿ ತಾಯಿಗೂ ಕಿರುಕುಳ ನೀಡುತ್ತಿದ್ದ. ಇದರಿಂದ ಆಕ್ರೋಶಗೊಂಡಿದ್ದ ಅನು ಹಾಗೂ ಈತನ ಚಿಕ್ಕಪ್ಪ ಸೇರಿಕೊಂಡು ಊರ ಹೊರಗಿದ್ದ ಮನೆಯಲ್ಲೆ ಹಗ್ಗದಲ್ಲಿ ಕುತ್ತಿಗೆ ಬಿಗಿದು ಸಾಯಿಸಿ, ತಂದೆ ತಂದಿದ್ದ ಬೈಕಿನಲ್ಲೆ ಕಾಮಗೌಡನಹಳ್ಳಿ ಗೇಟ್ ಬಳಿಯಿರುವ ಲಕ್ಷ್ಮಣತೀರ್ಥ ನದಿಗೆ ಬೈಕ್ ಸಮೇತ ಎಸೆದು ಹೋಗಿದ್ದರು. ಕುತ್ತಿಗೆಗೆ ಹಗ್ಗ ಬಿಗಿದಿದ್ದರೂ ಶವದ ಕುತ್ತಿಗೆಯಲ್ಲಿ ಹಗ್ಗ ಕಂಡು, ಇದು ಕೊಲೆ ಮಾಡಿ ಬಿಸಾಡಿರಬಹುದೆಂದು ಪೊಲೀಸರು ಶಂಕಿಸಿದ್ದರು.
ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಆತನ ಮಗನ ಮೇಲೆ ಶಂಕೆ ಹೊಂದಿದ್ದರು. ಅಲ್ಲದೆ, ಆತನ ಚಲನವಲನಗಳ ಮೇಲೆ ಕಣ್ಣಿಟ್ಟು, ಕರೆತಂದು ವಿಚಾರಿಸಲಾಗಿ ತಾವು ಮಾಡಿದ್ದ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ನದಿಯಲ್ಲಿ ಪ್ರವಾಹವಿರುವುದರಿಂದ ಬೈಕ್ ಮೇಲೆತ್ತಲಾಗಿಲ್ಲ. ನದಿಪ್ರವಾಹ ಕಡಿಮೆಯಾದ ನಂತರ ಮೇಲೆತ್ತಲು ಕ್ರಮ ಕೈಗೊಳ್ಳಲಾಗುವುದು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಗಜೇಂದ್ರಪ್ರಸಾದ್ ತಿಳಿಸಿದರು.