ಕೆ.ವಿ. ಶಂಕರೇಗೌಡ ಇಂದಿನ ರಾಜಕಾರಣಿಗಳಿಗೆ ಮಾದರಿ
ಕ.ಪ್ರ.ವಾರ್ತೆ ಮೈಸೂರು ಜು. 27
ಇಂದಿನ ರಾಜಕಾರಣಗಳಿಗೆ ಕೆ.ವಿ. ಶಂಕರೇಗೌಡರ ಬದುಕು ಮಾದರಿ ಎಂದು ವಿಜಯನಗರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಪಿ. ಬೆಟ್ಟೇಗೌಡ ಹೇಳಿದರು.
ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಹಾಗೂ ಕುವೆಂಪು ವಿದ್ಯಾ ಪರಿಷತ್ತು ವಿವೇಕಾನಂದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ದಿವಂಗತ ಕೆ.ವಿ. ಶಂಕರೇಗೌಡ ಸ್ಮಾರಕೋಪನ್ಯಾಸ ಮಾಲೆಯಲ್ಲಿ ಕೆ.ವಿ. ಶಂಕರೇಗೌಡರ ಬದುಕು, ಬರಹ, ಪುನರಾವಲೋಕನ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಕೆ.ವಿ. ಶಂಕರೇಗೌಡ ಅವರು ಕೇವಲ ರಾಜಕಾರಣಿ ಮಾತ್ರವಲ್ಲ, ಅವರೊಬ್ಬ ಸಾಹಿತಿ, ಹೋರಾಟಗಾರ ಹಾಗೂ ಚಿಂತಕರಾಗಿದ್ದರು. ಅವರ ವಿಚಾರ ಹಾಗೂ ತತ್ವಗಳು ಪ್ರಸ್ತುತ ಅನುಕರಣೀಯ. ವರ್ತಮಾನದಲ್ಲಿ ಅವರೊಬ್ಬ ಮಾದರಿ ವ್ಯಕ್ತಿ ಎಂದರು.
ರಾಜಕೀಯ, ಸಹಕಾರ, ಶಿಕ್ಷಣ ಈ ಕ್ಷೇತ್ರಗಳಲ್ಲಿ ಅನೇಕ ಮಾದರಿ ಯೋಜನೆಗಳನ್ನು ತರುವ ಮೂಲಕ ಆದರ್ಶರಾಗಿದ್ದಾರೆ. ಆದರೆ ಅವರ ರಾಜಕಾರಣ ಕೇವಲ ಮಂಡ್ಯಕ್ಕೆ ಮಾತ್ರ ಸೀಮಿತವಾಗಿದ್ದು ದುರ್ದೈವದ ಸಂಗತಿ. ಎಸ್. ನಿಜಲಿಂಗಪ್ಪ ಅವರಂತೆ ರಾಜ್ಯವ್ಯಾಪಿ ತಮ್ಮ ಚಟುವಟಿಕೆ ವಿಸ್ತರಿಸಿದ್ದರೆ, ಅವರೊಬ್ಬ ರಾಷ್ಟ್ರಮಟ್ಟದಲ್ಲಿ ಬೆಳೆಯಬಹುದಾಗಿತ್ತು ಎಂದು ತಿಳಿಸಿದರು.
ಸೋಲು ಕಂಡಿದ್ದೆ ಹೆಚ್ಚು: ಸಚಿವರಾಗಿ ಅವರು ಮಾಡಿದ ಸಾಧನೆಯಿಂದ ಇಂದಿಗೂ ಅವರನ್ನು ನಿತ್ಯ ಸಚಿವ ಎಂದು ಪ್ರೊ.ದೇಜಗೌ ಸ್ಮರಿಸುತ್ತಾರೆ ಎಂದ ಅವರು, ಸ್ವಂತ ಊರಿನಿಂದ ರಾಜಕೀಯ ಹಾಗೂ ಸಾಮಾಜಿಕ ಹೋರಾಟ ಆರಂಭಿಸಿದ ಅವರು, ಚುನಾವಣೆಯಲ್ಲಿ ಗೆಲುವಿಗಿಂತ ಹೆಚ್ಚು ಬಾರಿ ಸೋಲು ಕಂಡವರು ಎಂದು ತಿಳಿಸಿದರು.
ಎಚ್.ಸಿ. ದಾಸಪ್ಪ ಅವರ ನಿರ್ದೇಶನದ ಮೇರೆಗೆ ರೈತರ ವಿವಿಧೋದ್ದೇಶ ಸಹಕಾರ ಸಂಘವನ್ನು ಸ್ಥಾಪಿಸಿದ ಕೀರ್ತಿ ಶಂಕರೇಗೌಡರಿಗೆ ಸಲ್ಲುತ್ತದೆ. ಆ ಸಂಘ ಮುಂದೆ ವಿವಿಧ ಹಂತಗಳಲ್ಲಿ ವಿಸ್ತಾರವಾಯಿತು. ಅನೇಕ ಸಂಸ್ಥೆಗಳನ್ನು ಬೆಳೆಸಿದ ಅವರಿಗೆ ಆ ಸಂಸ್ಥೆಯಲ್ಲಿಯೇ ಕೆಲಸ ಮಾಡುವವರು ಬೆನ್ನಿಗೆ ಚೂರಿ ಹಾಕಿ, ಅವರನ್ನು ಸಂಸ್ಥೆಯಿಂದಲೇ ಹೊರಗಟ್ಟಿದ್ದು ದುರಂತ ಸಂಗತಿ ಎಂದರು.
ವೈಯಕ್ತಿಕ ವಿಚಾರದಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಿದ್ದ ಅವರು ಹಣದ ದುರುಪಯೋಗದ ಆರೋಪ ಬಂದಾಗ ಸ್ವಂತ ಮನೆಯನ್ನೇ ಮಾರಿ ಸ್ವಾಭಿಮಾನ ಮೆರೆದವರು. ಗಾಂಧಿವಾದಿಯಾಗಿದ್ದ ಅವರು ತಮ್ಮ ಕುಟುಂಬದ ಹಿತಕ್ಕಾಗಿ ಹೆಚ್ಚು ಆಸಕ್ತಿ ವಹಿಸಲಿಲ್ಲ ಎಂದು ಅವರು ತಿಳಿಸಿದರು.
ಕುವೆಂಪು ವಿದ್ಯಾ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಎನ್. ರಾಮಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ. ಎಂ. ವೆಂಕಟೇಶ್ ನಿರೂಪಿಸದರು.