ಜನಸಂಖ್ಯೆ ಹೆಚ್ಚಳದಂತೆ ಅಭಿವೃದ್ಧಿ ಇಲ್ಲ
ಹುಣಸೂರು: ದೇಶದ ಜನಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಅಭಿವೃದ್ಧಿ ಹೊಂದುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಹೇಳಿದರು. ಪಟ್ಟಣದ ಶಾಸ್ತ್ರಿ ಸಂಸ್ಥೆಯ ಶಾಲಾ ಆವರಣದಲ್ಲಿ ನಡೆದ ಕ್ರೀಡಾಕೂಟವನ್ನು ವಿದ್ಯಾಭಾರತಿ ಕರ್ನಾಟಕ ಸಂಸ್ಥೆಯು ಹುಣಸೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾವಳಿಯನ್ನು ಶನಿವಾರ ಬೆಳಗ್ಗೆ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಭವಿಷ್ಯದ ಪ್ರಜೆಗಳಿಗೆ ಕ್ರೀಡೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾಭಾರತಿ ಹೆಚ್ಚು ಜವಾಬ್ದಾರಿ ಹೊರಬೇಕು ಎಂದರು. ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧೆಡೆಯಿಂದ 14, 17 ಮತ್ತು 19 ವರ್ಷದೊಳಗಿನ ವಾಲಿಬಾಲ್, ಥ್ರೋಬಾಲ್ನ ಬಾಲಕ-ಬಾಲಕಿಯರ 50 ತಂಡದಿಂದ ಒಟ್ಟು 540 ಕ್ರೀಡಾಪಟುಗಳು ಭಾಗವಹಿಸಿದ್ದು, ಶನಿವಾರ ನಾಲ್ಕು ಕಡೆ ನಿರ್ಮಿಸಿರುವ ಅಂಕಣಗಳಲ್ಲಿ ಮೊದಲ ಹಂತದ ಪಂದ್ಯ ನಡೆಯಿತು. ಜಿಪಂ ಸದಸ್ಯ ರಮೇಶ್, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸೋಮಶೇಖರ್, ಕ್ರೀಡಾಕೂಟದ ಸಂಚಾಲಕ ಎಸ್. ರಾಧಾಕೃಷ್ಣ, ಎಚ್.ಎಸ್. ಸಚ್ಚಿತ್, ರಘುವೀರ್, ಹನಗೋಡು ಮಂಜುನಾಥ್, ಮಹದೇವ್ ಹೆಗ್ಗಡೆ ಇದ್ದರು.
ಸಕ್ಕರೆ ಕಾರ್ಖಾನೆ ಭದ್ರತಾ ಸಿಬ್ಬಂದಿ ಧರಣಿ
ನಂಜನಗೂಡು: ತಾಲೂಕಿನ ಅಳಗಂಚಿಯಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಭದ್ರತೆಗೆ ಏಜೆನ್ಸಿಯನ್ನು ಬದಲಾಯಿಸಿರುವ ಕ್ರಮ ಖಂಡಿಸಿ ಜಿಡಿಎ ಏಜೆನ್ಸಿ ಭದ್ರತಾ ಸಿಬ್ಬಂದಿ ಶನಿವಾರ ಕಾರ್ಖಾನೆ ಮುಂಭಾಗ ಪ್ರತಿಭಟಿಸಿದರು.ಆಡಳಿತ ಮಂಡಳಿಯವರು ಏಕಾಏಕಿ ಜಿಡಿಎ ಏಜೆನ್ಸಿ ಬದಲಾಯಿಸಿ ಮೈಸೂರಿನ ಎಸ್ಎಂಎಸ್ ಏಜೆನ್ಸಿಯ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿರುವುದು ಸರಿಯಲ್ಲ ಎಂದು ಬೆಳಗ್ಗೆ ಕಾರ್ಖಾನೆಯ ಮುಂಭಾಗ ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು. ಜಿಡಿಎ ಮೇಲ್ವಿಚಾರಕ ಬಿ.ಎಸ್. ನಾಯಕ್ ಮಾತನಾಡಿ, ನಾವು ಕಾರ್ಖಾನೆ ನಿರ್ಮಾಣ ಹಂತದಿಂದ ಸುಮಾರು 20 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದೇವೆ. ಈಗ ಆಡಳಿತ ಮಂಡಳಿ ದಿಢೀರನೆ ಬೇರೆ ಭದ್ರತಾ ಏಜೆನ್ಸಿಗೆ ಅವಕಾಶ ನೀಡಿರುವುದರಿಂದ ನಮ್ಮ ಬದುಕು ಅತಂತ್ರವಾಗಿದೆ ಎಂದರು. ಕಾರ್ಖಾನೆಯ ಆಡಳಿತ ಅಧಿಕಾರಿ ಪಿ.ವೆಂಕಟಸ್ವಾಮಿ ಮಾತನಾಡಿ, ಕಾರ್ಖಾನೆಯ ಆಡಳಿತ ಮಂಡಳಿಯವರಿಗೆ ಭದ್ರತಾ ಸಿಬ್ಬಂದಿಗೂ, ನೇಮಕಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದರು. ಎನ್.ಎಂ. ರಾಜು, ಮಹದೇವು, ಶಂಕರಪ್ಪ, ಸಿ.ಎಂ. ಶೆಟ್ಟಿ, ನಾಗೇಂದ್ರ, ಶಿವಣ್ಣ, ನಾರಾಯಣ್ ಸೇರಿದಂತೆ ಹಲವು ಮಂದಿ ಇದ್ದರು.
ಮಳೆಗೆ ಮನೆ ಗೋಡೆ ಕುಸಿತ
ಹುಣಸೂರು: ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದ ಕಲ್ಕುಣಿಕೆಯ ಮೇದರ ಬೀದಿಯಲ್ಲಿ ಹೆಂಚಿನ ಮನೆಯೊಂದರ ಗೋಡೆ ಕುಸಿದು ಬಿದ್ದಿದೆ. ಪಟ್ಟಣದ ಕೂಲಿಕಾರ್ಮಿಕ ದಶರಥರಾವ್ ಪ್ರಸಾದ್ ಅವರಿಗೆ ಸೇರಿದ ಮನೆ ಹಿಂಭಾಗದ ಗೋಡೆ ಶುಕ್ರವಾರ ರಾತ್ರಿ ಬಿದ್ದುಹೋಗಿದೆ. ಉಳಿದ ಗೋಡೆ ಬಿರುಕು ಬಿಟ್ಟಿದೆ. ಮತ್ತಷ್ಟು ಮಳೆ ಬಂದರೆ ಇಡಿ ಮನೆಯೇ ಕುಸಿದು ಬೀಳುವ ಆತಂಕದಲ್ಲಿ ಕುಟುಂಬ ಬದುಕುತ್ತಿದೆ. ಸ್ಥಳಕ್ಕೆ ಲೆಕ್ಕಾಧಿಕಾರಿ ಜಯರಾಂ ಭೇಟಿ ನೀಡಿ ಮಹಜರು ನಡೆಸಿದರು. ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಹೊಸಮನೆ ಮಂಜೂರು ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಮಂಡ್ಯ ಮಹೇಶ್ ಶಾಸಕರಲ್ಲಿ ಮನವಿ ಮಾಡಿದ್ದಾರೆ.
ವೀರಶೈವ ಸಮಾಜ ಸಂಘಟನೆಯಾಗಲಿ
ನಂಜನಗೂಡು: ರಾಜ್ಯದಲ್ಲಿ ಬಹುದೊಡ್ದ ಸಮುದಾಯವಾದ ವೀರಶೈವ ಸಮಾಜದ ಯುವಕರು ಸಂಘಟನೆ ರೂಪಿಸಿಕೊಂಡಾಗ ಮಾತ್ರ ಸಮಾಜದ ಉನ್ನತಿಗೆ ದಾರಿಯಾಗುತ್ತದೆ ಎಂದು ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಹೇಳಿದರು. ತಾಲೂಕಿನ ಮಲ್ಲನಮೂಲೆ ಮಠದಲ್ಲಿ ಶ್ರೀಗುರು ಕಂಬಳೀಶ್ವರ ವಿದ್ಯಾರ್ಥಿನಿಲಯದ ಹಿರಿಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ವೀರಶೈವ ಧರ್ಮದ ಭಾವನಾತ್ಮಕ ಸಂಬಂಧ ಮಠಗಳಾದ ಸುತ್ತೂರು, ದೇವನೂರು, ಮಲ್ಲನಮೂಲೆ ಮಠಗಳ ತ್ರಿವೇಣಿ ಸಂಗಮವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಸಿಗದ ಪವಿತ್ರ ಕ್ಷೇತ್ರ ನಂಜನಗೂಡಿನಲ್ಲಿ ಒಂದುಗೂಡಿದೆ ಎಂದು ಬಣ್ಣಿಸಿದರು. ವೀರಶೈವ ಸಮಾಜದ ಬಗ್ಗೆ ಚಿಂತಿಸುವ ಪರ್ವಕಾಲ ಬಂದಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಂಘಟನೆ ಮೂಲಕ ಧರ್ಮ ವ್ಯಾಖ್ಯಾನ ಕಾಲಘಟ್ಟ ವ್ಯವಸ್ಥೆ ಆಗಬೇಕಾಗಿದೆ. ಆದ್ದರಿಂದ ಸಮಾಜದ ಮುಖಂಡರು ಸಮಾಜದ ಏಳಿಗೆ ಉಳುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.