ವಿದ್ಯುತ್ ಸಮಸ್ಯೆಗೆ ಇಲ್ಲಿ ಸಂಪರ್ಕಿಸಿ
ಮೈಸೂರು: ಗಾಳಿ ಮತ್ತು ಮಳೆ ಕಾರಣದಿಂದ ವಿದ್ಯುತ್ ಕಂಬ, ತಂತಿಗಳು ಮತ್ತು ಮರಗಳು ಮುರಿದು ವಿದ್ಯುತ್ ಅಡಚಣೆಯಾದಾಗ ಸಾರ್ವಜನಿಕರು ವಿದ್ಯುತ್ ಕಡಿಮೆ ಮಾಡಲು ಮತ್ತು ಅಪಘಾತ ತಡೆಗಟ್ಟಲು ಸೆಸ್ಕ್ನೊಂದಿಗೆ ಸಹಕರಿಸಿ ಈ ಕೆಳಕಂಡ ದೂರವಾಣಿಗೆ ಸಂಪರ್ಕಿಸುವಂತೆ ವಿ.ವಿ. ಮೊಹಲ್ಲಾ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ. ದೂರು ಕೇಂದ್ರ- ಮೊ. 9448994777, 9448994888,944899 4999 ಮತ್ತು ದೂ. 2416007.
ನಾಳೆ ಸೆಸ್ಕ್ನಿಂದ ಜನಸಂಪರ್ಕ ಸಭೆ
ಮೈಸೂರು: ಸೆಸ್ಕ್ ವತಿಯಿಂದ ಜು.29ರ ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರವರೆಗೆ ಜ್ಯೋತಿನಗರದ ಉಪವಿಭಾಗೀಯ ಕಚೇರಿಯಲ್ಲಿ ಜನಸಂಪರ್ಕ ಸಭೆ ನಡೆಯಲಿದೆ ಎಂದು ಎನ್.ಆರ್. ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದ್ದಾರೆ. ಉದಯಗಿರಿ, ಗೌಸಿಯಾನಗರ, ಗಾಯತ್ರಿಪುರಂ, ಶಕ್ತಿನಗರ, ಯರಗನಹಳ್ಳಿ, ರಾಜೀವ್ನಗರ, ಶಾಂತಿನಗರ, ರಾಘವೇಂದ್ರನಗರ ಹಾಗೂ ಕಲ್ಯಾಣಗಿರಿ ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರು ವಿದ್ಯುತ್ ಸ್ಥಾವರಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ, ಸಭೆಯಲ್ಲಿ ಭಾಗವಹಿಸಿ ಲಿಖಿತ ಅರ್ಜಿಗಳನ್ನು ಸಲ್ಲಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಅವರು ಕೋರಿದ್ದಾರೆ.
ರಸ್ತೆ ಕಾಮಗಾರಿ ವಿಳಂಬಕ್ಕೆ ಆಕ್ರೋಶ
ಮೈಸೂರು: ಇಲ್ಲಿನ ನಜರ್ಬಾದಿನಿಂದ ಸಿದ್ಧಾರ್ಥನಗರಕ್ಕೆ ಸಂಪರ್ಕ ಕಲ್ಪಿಸುವ ಮಲೆಮಹದೇಶ್ವರ ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬಕ್ಕೆ ಯುವ ಕಾಂಗ್ರೆಸ್ ಮುಖಂಡ ಕುರುಬಾರಳ್ಳಿ ಜೆ.ಪ್ರಕಾಶ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯಲ್ಲಿ ದಿನೇ ದಿನೇ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ದಿನನಿತ್ಯ ಅಪಘಾತ ಸಂಭವಿಸುತ್ತಿದೆ. ಇದನ್ನು ತಪ್ಪಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ರಸ್ತೆಯನ್ನು ವಿಸ್ತರಣೆ ಮಾಡುವಂತೆ ಅನೇಕ ಹೋರಾಟಗಳನ್ನು ನಡೆಸಿದ ಪರಿಣಾಮ ಕಾಮಗಾರಿಗೆ ಮಂಜೂರಾತಿ ದೊರಕಿದೆ. ಆದರೆ ಈವರೆಗೆ ಕಾಮಗಾರಿ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಆ ಕಾಮಗಾರಿಗೆ ನಿಯೋಜಿಸಲ್ಪಟ್ಟ ಎಂಡಿಎ ಎಂಜಿನಿಯರಗಳು ಇತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಮೂಗೂರಿನಲ್ಲಿ ವಿಶೇಷ ಪೂಜೆ
ಮೂಗೂರು: ಟಿ. ನರಸೀಪುರ ತಾಲೂಕಿನ ಮೂಗೂರಿನಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ತ್ರಿಪುರ ಸುಂದರಮ್ಮನವರಿಗೆ ಅಷಾಢಮಾಸದ ಮೂರನೇ ಶುಕ್ರವಾರದ ಅಂಗವಾಗಿ ವಿಶೇಷ ಪೂಜೆ, ಮಹಾಭಿಷೇಕ ಮತ್ತು ಹೂವಿನ ಅಲಂಕಾರ ಮಾಡಲಾಗಿತ್ತು. ಪ್ರತಿವರ್ಷ ಅಷಾಢಮಾಸದಲ್ಲಿ ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವಿಶೇಷ ಸಂದರ್ಭದಲ್ಲಿ ಮೂಗೂರಿನ ಸುತ್ತಮುತ್ತಲಿನ ಗ್ರಾಮದ ಭಕ್ತರು ಹಾಗೂ ಬೇರೆ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.
ಹಲ್ಲೆ ಪ್ರಕರಣ: ರಾಜಿಯಲ್ಲಿ ಅಂತ್ಯ
ಕೆ.ಆರ್. ನಗರ: ತಾಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ಜೂ. 6 ರಂದು ಗ್ರಾಪಂ ಸದಸ್ಯೆ ರೂಪಾ ಅವರ ಪತಿ ಶೇಖರ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ ರಾಜಿ ಸಂಧಾನದಲ್ಲಿ ಅಂತ್ಯಗೊಂಡಿತು. ಶಾಸಕ ಸಾ.ರಾ. ಮಹೇಶ್ ಅವರು ಹಲ್ಲೆಗೊಳಗಾದ ಶೇಖರ್ ಮತ್ತು ಆರೋಪಿತ ಮಲ್ಲೇಶ್ ಅವರು ಪರಸ್ಪರ ನೀಡಿದ್ದ ದೂರನ್ನು ಹಿಂಪಡೆಯುವಂತೆ ಮನವೊಲಿಸಿದರು. ಕಳೆದ ತಿಂಗಳು ಘಟನೆ ಸಂಬಂಧ ಮಲ್ಲೇಶ್ ಸೇರಿದಂತೆ 8 ಜನರ ವಿರುದ್ಧ ದೂರು ದಾಖಲಿಸಲಾಗಿತ್ತು. ಈಗ ಎಲ್ಲರ ಮೇಲೂ ನೀಡಿರುವ ದೂರನ್ನು ಹಿಂಪಡೆಯುವಂತೆ ಶಾಸಕರು ಸೂಚಿಸಿದ ಹಿನ್ನೆಲೆ, ಪ್ರಕರಣ ಸುಖಾಂತ್ಯಗೊಂಡಿದೆ.
ಪರಿಹಾರ ಆಗ್ರಹಿಸಿ ಉಪವಾಸ ಧರಣಿ
ಹುಣಸೂರು: ದಲಿತ ಕುಟುಂಬಗಳಿಂದ ಭೂಸ್ವಾಧೀನ ಮಾಡಿಕೊಂಡು ಪರಿಹಾರ ನೀಡದೆ ತೊಂದರೆ ಕೊಡುತ್ತಿರುವ ಸರ್ಕಾರದ ವಿರುದ್ಧ ಆ.15ರಂದು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ನೊಂದ ದಲಿತ ಕುಟುಂಬಗಳು ತಿಳಿಸಿವೆ. ದಲಿತ ಕುಟುಂಬದ ಸದಸ್ಯರಾದ ಆರ್.ಕೆ. ಭಂಟನಾಯ್ಕ, ನಿಂಗರಸಯ್ಯ ಅವರು, ತಾಲೂಕಿನ ಕುಪ್ಪೆಕೊಳ ಗಟ್ಟ ಸರ್ವೇ ನಂ.33ರಲ್ಲಿ ಸಾವಿರ ಎಕರೆ ಜಮೀನಿನ ಪೈಕಿ 100 ಎಕರೆಯಲ್ಲಿ ಹಿಂದಿನಿಂದಲೂ 30 ದಲಿತ ಕುಟುಂಬಗಳು ವ್ಯವಸಾಯ ಮಾಡಿಕೊಂಡು ಬಂದಿದ್ದಾರೆ. 1991ರಲ್ಲಿ ಸರ್ಕಾರವು ಕೇಂದ್ರ ರಕ್ಷಣಾ ಇಲಾಖೆಗೆ ಈ ಭೂಮಿ ಹಸ್ತಾಂತರಿಸಿ ನಮಗೆ ಪರಿಹಾರ ಅಥವಾ ಬೇರೆಡೆ ಭೂಮಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆಗೂ ಪರಿಹಾರ ದೊರೆತಿಲ್ಲ ಎಂದು ಆರೋಪಿಸಿದರು.