ಡಿಎಆರ್ ಪೊಲೀಸರ ಶೀಘ್ರ ನೇಮಕ: ಅಭಿನವ್ ಖರೆ ಸ್ಪಷ್ಟನೆ
ಕ.ಪ್ರ.ವಾರ್ತೆ ಹುಣಸೂರು ಜು. 28
ಪಟ್ಟಣ ಪ್ರದೇಶಗಳಲ್ಲಿ ಸಂಚಾರ ಪೊಲೀಸರಿಲ್ಲದೇ ತೊಂದರೆಯಾಗುತ್ತಿದ್ದು, ಇದನ್ನು ನೀಗಿಸಲು ಶೀಘ್ರದಲ್ಲೆ ಜಿಲ್ಲೆಗೆ ಬರುವ 77 ಡಿಎಆರ್ ಪೊಲೀಸರನ್ನು ತಾಲೂಕಿನ ವಿವಿಧೆಡೆ ನಿಯೋಜನೆಗೊಳಿಸಲಾಗುವುದೆಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಅಭಿನವ್ ಖರೆ ತಿಳಿಸಿದರು.
ತಾಲೂಕಿನ ಹನಗೋಡು ಬಳಿ ಕಳೆದ ಜು. 8 ರಂದು ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಮಾಹಿತಿ ನೀಡುವ ಕುರಿತು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ವರುಣ ಕ್ಷೇತ್ರದಲ್ಲಿ ಹೊಸ ಪೊಲೀಸ್ ಠಾಣೆ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಶೀಘ್ರದಲ್ಲೇ ನಂಜನಗೂಡು ಹಾಗೂ ಹುಣಸೂರಿನಲ್ಲಿ ಸಂಚಾರಿ ಪೊಲೀಸ್ ಠಾಣೆಗೆ ಮಂಜೂರಾತಿ ಸಿಗುವ ಸಾಧ್ಯತೆಯಿದೆ ಎಂದರು.
ಮೈಸೂರು ಜಿಲ್ಲೆಗೆ 300 ಪೊಲೀಸ್ ವಸತಿಗೃಹ ಮಂಜೂರಾಗಿದ್ದು, ಶೀಘ್ರದಲ್ಲೇ ಸ್ಥಳ ಪರಿಶೀಲನೆ ನಡೆಸಿ ಅಗತ್ಯವಿರುವ ತಾಲೂಕುಗಳಲ್ಲಿ ನಿವೇಶನ ಹಾಗೂ ಮನೆ ಕೊರತೆ ಆಧರಿಸಿ ಮಂಜೂರು ಮಾಡಲಾಗುವುದು ಎಂದ ಅವರು, ಹನಗೋಡು ಬಳಿಯ ನದಿಗೆ ತಂದೆಯನ್ನೇ ಕೊಲೆ ಮಾಡಿ ಎಸೆದಿದ್ದ ಪ್ರಕರಣ ಭೇದಿಸಿ ಕೊಲೆಗೈದ ಆರೋಪಿಗಳನ್ನು ಬಂಧಿಸಿದ ಸಿಬ್ಬಂದಿಯನ್ನು ಅಭಿನಂದಿಸಿದರು.