'ಪತ್ರಿಕಾರಂಗ ಪ್ರಭಾವಶಾಲಿ '
ಹುಣಸೂರು: ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಿಗಿಂತ ಪತ್ರಿಕಾರಂಗ ಹೆಚ್ಚು ಶಕ್ತಿಯುಳ್ಳದ್ದಾಗಿದೆ. ಪತ್ರಕರ್ತರು ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತಿರುವುದರಿಂದ ಸಮಾಜ ಉದ್ಧಾರವಾಗುತ್ತಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ಅಭಿಪ್ರಾಯಪಟ್ಟರು. ಪಟ್ಟಣದ ಕಿರಿಜಾಜಿ ರಸ್ತೆಯ ಎಂಪ್ಯೆರ್ ಕಾಂಪ್ಲೆಕ್ಸ್‌ನಲ್ಲಿ ಪತ್ರಕರ್ತರ ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿ, ಬಹಳ ವರ್ಷಗಳಿಂದ ಪತ್ರಕರ್ತರ ಸಂಘದ ಭವನ ನಿರ್ಮಾಣವಾಗುವಲ್ಲಿ ವಿಳಂಬವಾಗಿರುವುದು ನೋವುಂಟಾಗಿದೆ. ಮುಂದಿನ ವರ್ಷದೊಳಗೆ ಹುಣಸೂರು ತಾಲೂಕು ಪತ್ರಕರ್ತರ ಭವನ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಭವನ ನಿರ್ಮಾಣ ಮಾಡಲು ಜಾಗ ಖರೀದಿಸಿ. ಕಟ್ಟಡ ನಿರ್ಮಾಣ ಮಾಡಲು ಬೇಕಾದ ಅನುದಾನವನ್ನು ಸಂಪೂರ್ಣವಾಗಿ ತಮ್ಮ ಶಾಸಕರ ನಿಧಿ ಮತ್ತು ಸರ್ಕಾರದಿಂದ ಕೊಡಿಸುತ್ತೇನೆ ಎಂದು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ದೀಪಕ್, ರೋಟರಿ ಶಾಲಾ ಸಮಿತಿ ಅಧ್ಯಕ್ಷ ಆರ್. ಆನಂದ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಧರ್ಮಾಪುರ ನಾರಾಯಣ್, ಪ್ರೆಸ್ ಕ್ಲಬ್ ಅಧ್ಯಕ್ಷ ಸಂಪತ್ ಕುಮಾರ್, ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದಾ.ರಾ. ಮಹೇಶ್, ಕಾರ್ಯದರ್ಶಿ ಮಹಮದ್ ರಪೀಕ್, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಸ್. ಗಜೇಂದ್ರ ಇದ್ದರು.
ಆಧಾರ್ ಮಾಹಿತಿ ನೀಡಲು ಮನವಿ
ಎಚ್.ಡಿ. ಕೋಟೆ: ಕೇಂದ್ರ ಸರ್ಕಾರದ ನೇರ ನಗದು ಪಾವತಿ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ವಿವಿಧ ಯೋಜನೆಗಳ ಸಹಾಯಧನಗಳನ್ನು ನಿಮ್ಮ ಆಧಾರ್ ಆಧಾರಿತ ಬ್ಯಾಂಕ್‌ನ ಉಳಿತಾಯ ಖಾತೆಗೆ ಮಾತ್ರ ಜಮಾ ಮಾಡಲಾಗುವುದು. ಆದ್ದರಿಂದ ಈ ಸೌಲಭ್ಯವನ್ನು ಪಡೆಯಲು ಗ್ರಾಹಕರು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಕಾವೇರಿ ಗ್ರಾಮೀಣ ಬ್ಯಾಂಕ್ ಹೇಳಿದೆ. ಸಂಧ್ಯಾ ಸುರಕ್ಷಾ ಪಿಂಚಣಿ, ವಿದ್ಯಾರ್ಥಿ ವೇತನ, ಉದ್ಯೋಗ ಖಾತ್ರಿ ಯೋಜನೆ, ಅಡುಗೆ ಅನಿಲ ಸಹಾಯ ಧನಗಳನ್ನು ಆಧಾರ್ ಆಧಾರಿತ ಬ್ಯಾಂಕ್ ಉಳಿತಾಯ ಖಾತೆಗೆ ಮಾತ್ರ ಜಮಾ ಮಾಡಲಿದೆ. ಆಧಾರ್ ನಂಬರ್ ಹೊಂದಿಲ್ಲದಿದ್ದರೆ ಈ ಕೂಡಲೆ ಆಧಾರ್ ನಂಬರ್ ಅನ್ನು ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆ ಸಂಪರ್ಕಿಸುವಂತೆ ಕೋರಲಾಗಿದೆ.
ಮಾರಾಮಾರಿ: 6 ಮಂದಿಗೆ ಗಾಯ
ಮೈಸೂರು: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ಯುವಕರ ನಡುವೆ ಬಾರ್‌ವೊಂದರಲ್ಲಿ ಮಾರಾಮಾರಿ ನಡೆದು, 6 ಮಂದಿ ಗಾಯಗೊಂಡಿರುವ ಘಟನೆ ಸಿದ್ದಪ್ಪ ಚೌಕದಲ್ಲಿ ಭಾನುವಾರ ಸಂಜೆ ಜರುಗಿದೆ.ಅಶೋಕಪುರಂ ಮತ್ತು ಕೆ.ಆರ್. ಮೊಹಲ್ಲಾ ನಿವಾಸಿಗಳಾದ ಅವಿನಾಶ್, ಆನಂದ್, ಭಗವಾನ್, ದುರ್ಗಾಪ್ರಸಾದ್, ಸುರೇಶ್, ರಾಘವೇಂದ್ರ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.ಸಿದ್ದಪ್ಪ ಚೌಕದ ಬಳಿಯ ತ್ರಿಲೋಕ್ ಬಾರ್‌ನಲ್ಲಿ ಎರಡು ಗುಂಪಿನ ಯುವಕರು ಪ್ರತ್ಯೇಕವಾಗಿ ಮದ್ಯ ಸೇವಿಸುತ್ತಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪರಸ್ಪರ ಹೊಡೆದುಕೊಂಡಿದ್ದು, ಇಬ್ಬರಿಗೆ ಚಾಕುವಿನಿಂದ ಇರಿದಿದ್ದಾರೆ. ಉಳಿದ ನಾಲ್ವರು ಗಾಯಗೊಂಡಿದ್ದಾರೆ.
ಇಂದಿನಿಂದ ವೀಕ್ಷಣೆಗೆ ಝೂ...
ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಇತ್ತೀಚೆಗೆ ಜನಿಸಿದ ನಾಲ್ಕು ಹುಲಿ ಮರಿಗಳನ್ನು ಜು. 29 ರಿಂದ ಸಾರ್ವಜನಿಕರ ವೀಕ್ಷಣೆಗೆ ಬಿಡಲಾಗುತ್ತಿದೆ.ಮೃಗಾಲಯದ ಮಾನ್ಯ ಮತ್ತು ಬ್ರಹ್ಮ ಹುಲಿಗಳಿಗೆ ಜನಿಸಿದ್ದ ಈ ನಾಲ್ಕು ಮರಿಗಳು ಇದುವರೆಗೆ ತಾಯಿಯ ಆರೈಕೆಯಲ್ಲಿದ್ದವು. ಈಗ ಹುಲಿಗಳು ಓಡಾಡುತ್ತಿರುವುದರಿಂದ ಜು. 29ರಿಂದ ಈ ನಾಲ್ಕು ಮರಿಗಳನ್ನು ತಾಯಿಯೊಂದಿಗೆ ಸಾರ್ವಜನಿಕರ ವೀಕ್ಷಣೆಗೆ ಬಿಡಲಾಗುವುದು ಎಂದು ಮೃಗಾಲಯದ ವೈದ್ಯರು ತಿಳಿಸಿದ್ದಾರೆ.ನಾಲ್ಕು ಹುಲಿ ಮರಿಗಳು ಆರೋಗ್ಯವಾಗಿದ್ದು, ತಾಯಿಯ ಆರೈಕೆಗೆ ಸ್ಪಂದಿಸುತ್ತಿವೆ.