ಪಪಂ ನೌಕರರಿಂದಲೇ ಅಶುಚಿತ್ವ
-ಪಿ.ಎನ್. ಸುಬ್ರಮಣ್ಯ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಜು. 28
ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಪಪಂ ನೌಕರರರೇ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತೆ ವರ್ತಿಸುತ್ತಿದ್ದಾರೆ.
ಇಲ್ಲಿನ ಪಪಂಗೆ ಕಳೆದ ವರ್ಷ ಹೊಸತಾಗಿ ಜಕ್ಕಿಂಗ್ ಮಿಷನ್(ಶೌಚಾಲಯ ಮತ್ತಿತರ ತ್ಯಾಜ್ಯವನ್ನು ಸಂಗ್ರಹಿಸುವ ವಾಹನ) ಬಂದಿದ್ದು, ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಶೇಖರಣೆಗೊಳ್ಳುವ ಶೌಚಾಲಯ ಮತ್ತಿತರ ಕಡೆಗಳಲ್ಲಿನ ತ್ಯಾಜ್ಯ ಸಂಗ್ರಹಿಸಿ ನಿರ್ಮೂಲನೆ ಮಾಡುವ ಕೆಲಸ ನಡೆಯುತ್ತಲೇ ಬಂದಿದೆ. ಸಂಗ್ರಹಿಸಿದ ತ್ಯಾಜ್ಯ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಲಕ್ಷಾಂತರ ರು. ವೆಚ್ಚದಲ್ಲಿ ಪಟ್ಟಣಕ್ಕೆ ಸಮೀಪವಿರುವ ಕಗ್ಗುಂಡಿ ಗ್ರಾಮದ ಬಳಿ ಘನ ತ್ಯಾಜ್ಯ ವಿಲೇವಾರಿ ಘಟಕವನ್ನೂ ಸ್ಥಾಪಿಸಿದೆ.
ಇಷ್ಟೆಲ್ಲ ಸವಲತ್ತುಗಳನ್ನು ಸರ್ಕಾರ ಒದಗಿಸಿದ್ದರೂ ಜಕ್ಕಿಂಗ್ ಮಿಷನ್ನಿಂದ ಸಂಗ್ರಹಿಸಲಾದ ತ್ಯಾಜ್ಯದಿಂದಲೆ ಪಟ್ಟಣ ಮತ್ತು ಅಕ್ಕಪಕ್ಕದ ಗ್ರಾಮಗಳ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಗೋಚರಿಸುತ್ತಿದೆ. ಇದಕ್ಕೆ ಕಾರಣ ಜಕ್ಕಿಂಗ್ ಮಿಷನ್ ವಾಹನದ ನಿರ್ವಹಣೆ ಹಾಗೂ ಚಾಲನೆ ಮಾಡುತ್ತಿರುವ ಪಪಂ ನೌಕರರು ಜಕ್ಕಿಂಗ್ ಮಿಷನ್ನಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಪಟ್ಟಣಕ್ಕೆ ಕೇವಲ ಒಂದು ಕಿಮೀ ದೂರದಲ್ಲಿರುವ ಕುಶಾಲನಗರಕ್ಕೆ ತೆರಳುವ ಮಾರ್ಗವಾದ ರಾಜ್ಯ ಹೆದ್ದಾರಿ 88ರ ರಸ್ತೆ ಪಕ್ಕದಲ್ಲಿಯೇ ಸುರಿಯುತ್ತಿದ್ದಾರೆ.
ಇದರಿಂದಾಗಿ ಈ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ದುರ್ನಾತದ ನಡುವೆಯೆ ಪ್ರಯಾಣಿಸಬೇಕಿದ್ದು, ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಇತ್ತೀಚಿನ ದಿನಗಳಲ್ಲಿ ಡೆಂಘೀ ಬಗ್ಗೆ ಸಾಕಷ್ಟು ವರದಿ ಕೇಳಿಬರುತ್ತಿದ್ದು, ತಾಲೂಕಿನ ಅಳಲೂರು ಗ್ರಾಮದ ಅಶೋಕ ಎಂಬ ಯುವಕ ಶಂಕಿತ ಡೆಂಘೀ ಜ್ವರದಿಂದ ಮೃತಪಟ್ಟಿರುವ ಬಗ್ಗೆ ಹಾಗೂ ತಾಲೂಕಿನಲ್ಲಿ ಸುಮಾರು 34 ಮಂದಿಗೆ ಶಂಕಿತ ಡೆಂಘೀ ಜ್ವರ ಕಾಣಿಸಿಕೊಂಡಿರುವ ಬಗ್ಗೆ ವರದಿಗಳು ಕಣ್ಣಮುಂದೆಯೆ ಇರುವಾಗ ತ್ಯಾಜ್ಯ ವಿಲೇವಾರಿಯ ಬಗ್ಗೆ ಪಪಂ ಸಿಬ್ಬಂದಿ ತೋರುತ್ತಿರುವ ಬೇಜವಾಬ್ದಾರಿತನ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.
ತ್ಯಾಜ್ಯವನ್ನು ಸಾರ್ವಜನಿಕ ಪ್ರದೇಶದಲ್ಲಿ ಸುರಿಯುತ್ತಿರುವುದರಿಂದ ಮಲೇರಿಯಾ, ಟೈಫಾಯಿಡ್, ವಾಂತಿ, ಬೇಧಿ ಪ್ರಕರಣಗಳು ಕಂಡುಬರುವ ಸಾಧ್ಯತೆಗಳಿದ್ದು, ಇಂತಹ ಬೇಜವಾಬ್ದಾರಿ ಕೆಲಸಗಳು ನಡೆಯದಂತೆ ಪಪಂ ಮೇಲಧಿಕಾರಿಗಳು ಗಮನಹರಿಸಬೇಕಾಗಿದೆ ಎಂದು ಹೇಳಿದರು.