ಮೊಬೈಲ್ ಲಕ್ಕಿಡಿಪ್ ಕರೆಯ ಜಾಲಕ್ಕೆ ಒಳಗಾದ ವ್ಯಕ್ತಿಗೆ ಪಂಗನಾಮ...!
ಕುಣಿಗಲ್: ಮೊಬೈಲ್ ಲಕ್ಕಿಡಿಪ್ ಕರೆಯ ಜಾಲಕ್ಕೆ ಒಳಗಾದ ವ್ಯಕ್ತಿಯೊಬ್ಬ ಸಾವಿರಾರು ರು. ಪಂಗನಾಮ ಹಾಕಿಸಿಕೊಂಡು ಪರದಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ತಾಲೂಕಿನ ಕೋಡಿಪಾಳ್ಯದ ಸಾದಿಕ್ ಎಂಬಾತನಿಗೆ ಕಳೆದ ಕೆಲ ದಿನಗಳ ಹಿಂದೆ 918375989660 ನಂಬರ್‌ನಿಂದ ಕರೆಬಂದಿದ್ದು, ಕರೆ ಮಾಡಿದವರು, ಸಾದಿಕ್‌ನ ವಾಸಸ್ಥಳ ಸೇರಿದಂತೆ ಎಲ್ಲಾ ವಿವರಗಳನ್ನು ಪೂರ್ಣವಾಗಿ ಹೇಳಿ, ನಿಮಗೆ ಎರಡೂವರೆ ಲಕ್ಷ ರು. ಮೌಲ್ಯದ ಡೀಸಲ್ ಆಟೋರಿಕ್ಷಾ ಹಾಗೂ ಐವತ್ತುಸಾವಿರ ರು. ನಗದು ಬಹುಮಾನ ಬಂದಿದೆ. ಬಹುಮಾನ ಪಡೆಯಬೇಕಾದರೆ ಕರೆ ಕಡಿತಗೊಂಡ ನಂತರ, ನಿಮಗೆ ಕಳಿಸಲಾಗುವ ಐವತ್ತು ಬೇರೆ, ಬೇರೆ ಮೊಬೈಲ್ ನಂಬರ್‌ಗಳಿಗೆ ತಲಾ 1001ರು. ಮೊತ್ತದ ರೀಚಾರ್ಜ್ ಮಾಡಿಸುವಂತೆ, ಎಲ್ಲಾ ಐವತ್ತು ಮೊಬೈಲ್ ನಂಬರ್‌ಗಳಿಗೆ ರೀಚಾರ್ಜ್ ಮಾಡಿದ ಒಂದು ಗಂಟೆಯೊಳಗೆ ನಿಮ್ಮ ಬಹುಮಾನ ನಿಮ್ಮ ಮನೆಬಾಗಿಲಿಗೆ ತಲುಪಿಸಲಾಗುತ್ತದೆ ಎಂಬ ಸ್ಪಷ್ಟ ಸೂಚನೆ ನೀಡಿದರು.
ಇದನ್ನು ನಂಬಿದ ಸಾದಿಕ್, ಪಟ್ಟಣದ ಬಿಎಂ ರಸ್ತೆಯಲ್ಲಿನ ಕೋರ್ಟ್ ಮುಂಭಾಗದಲ್ಲಿನ, ತನ್ನ ಪರಿಚಯಸ್ಥರ, ತಮ್ಮದೆ ವರ್ಗದ, ಮೊಬೈಲ್ ರೀಚಾರ್ಜ್ ಸೆಂಟರ್‌ಗೆ ತೆರಳಿ, ಲಕ್ಕಿಡಿಪ್ ಕರೆಯವರು ಸೂಚಿಸಿ, ಎಸ್‌ಎಂಎಸ್ ನಲ್ಲಿ ಕಳಿಸಲಾಗಿದ್ದ ವೊಡಾಫೋನ್, ಐಡಿಯಾ ಸೇರಿದಂತೆ ವಿವಿಧ ಕಂಪನಿಯ ಮೊಬೈಲ್ ಐವತ್ತು ನಂಬರ್‌ಗಳಿಗೆ ತಲಾ 1001ರು.ನಂತೆ ಕರೆನ್ಸಿ ಹಾಕಿಸಿದ. ಮೊದ, ಮೊದಲು ಕರೆನ್ಸಿ ರೀಚಾರ್ಜ್ ಮಾಡಲು ಅಂಗಡಿಯವರ ನಿರಾಕರಿಸಿದರೂ, ಪೂರ್ತಾ ಐವತ್ತು ನಂಬರ್ ರೀಚಾರ್ಜ್ ಆದ ಮೇಲೆ ಹಣ ಪಾವತಿಸುವುದಾಗಿ ತಿಳಿಸಿದ್ದರಿಂದ ಅಂಗಡಿಯವರು ಐವತ್ತು ಸಾವಿರದ ಐವತ್ತೊಂದು ರು.ಮೌಲ್ಯದ ರೀಚಾರ್ಜ್ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟಾಗ ಇನ್ನೊಂದು ಗಂಟೆಯಲ್ಲಿ ನೀಡುವುದಾಗಿ ಸಾದಿಕ್ ತಿಳಿಸಿದ. ಆದರೆ ಎಲ್ಲಾ ಐವತ್ತೊಂದು ನಂಬರ್‌ಗಳಿಗೂ ಕರೆನ್ಸಿ ರೀಚಾರ್ಜ್ ಆದ ಕೂಡಲೆ ಲಕ್ಕಿಡಿಪ್ ಬಂದಿದೆ ಎಂದು ಕರೆಮಾಡಲಾಗಿದ್ದ ನಂಬರ್ ಸೇವೆಯಿಂದ ಸ್ತಬ್ಧಗೊಂಡು, ಕರೆ ಮಾಡಿದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ, ಯಾವಾಗ ಪ್ರತಿಕ್ರಿಯೆ ಬರಲಿಲ್ಲವೂ ಅವಾಗಲೆ ಸಾದಿಕ್‌ಗೆ ತಾನು ಪಂಗನಾಮ ಹಾಕಿಸಿಕೊಂಡಿರುವುದು ತಿಳಿದು ಪರದಾಡುವಂತಾಯಿತು.
ಈ ಮಧ್ಯೆ ಕರನ್ಸಿ ಹಾಕಿದವರೂ ಹಣ ಪಾವತಿಗೆ ಪಟ್ಟು ಹಿಡಿದಾಗ, ಐವತ್ತು ಸಾವಿರ ಹೊಂದಿಸಲಾಗದೆ ಸಾದಿಕ್ ಪರದಾಡುವಂತಾಗಿ, ಕರೆನ್ಸಿ ಹಾಕಿದವರು ಮತ್ತು ಹಾಕಿಸಲು ಹೇಳಿದವರ ಮಧ್ಯೆ ಭಾನುವಾರ ಮಧ್ಯಾಹ್ನ ಜಟಾಪಟಿ ಪ್ರಾರಂಭವಾಗಿ, ಜನಾಂಗದ ಮುಖಂಡರ ಗಮನಕ್ಕೆ ವಿಷಯ ಹೋಯಿತು. ವಿಧಿ ಇಲ್ಲದೆ ಜನಾಂಗದ ಮುಖಂಡರೆಲ್ಲರೂ ಕೂತು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗುವ ಮೂಲಕ ಮೊಬೈಲ್ ಲಕ್ಕಿಡಿಪ್ ಕರೆಯ ಜಾಲಕ್ಕೆ ಅಮಾಯಕ ಗ್ರಾಹಕನೊಬ್ಬ ಬಲಿಯಾಗಿ, ಪರದಾಡುವಂತಾದ ಘಟನೆ ಅಂತ್ಯ ಕಂಡಿತು.