ಶಿಶುವಿಹಾರ ಮೈದಾನ; ಅನೈರ್ಮಲ್ಯ ತಾಣ
ಕ.ಪ್ರ.ವಾರ್ತೆ ಕೆ.ಆರ್. ನಗರ ಜು. 28
ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ ದಾನಿಯೊಬ್ಬರು ನೀಡಿದ ದೇವಿರಮ್ಮ ಶಿಶುವಿಹಾರ ಮೈದಾನ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಂದಿ, ನಾಯಿಗಳ ಆವಾಸ ಸ್ಥಾನವಾಗಿದ್ದು, ಸೊಳ್ಳೆಗಳ ಬೀಡಾಗಿದೆ. 14ನೇ ವಾರ್ಡಿನಲ್ಲಿರುವ ಶಿಶುವಿಹಾರ ಕಟ್ಟಡದ ಮತ್ತು ವಿಶಾಲವಾದ ಆಟದ ಮೈದಾನವನ್ನು ದಶಕಗಳ ಹಿಂದೆ ದಾನಿಗಳು ಕಟ್ಟಡ ನಿರ್ಮಾಣ ಮಾಡಿ ಮಕ್ಕಳಿಗೆ ಅನುಕೂಲವಾಗಲಿ ಎಂದು ಶಿಶುವಿಹಾರ ನಡೆಸಲು ಉದಾರವಾಗಿ ದಾನ ಮಾಡಿದ್ದರು. ನಂತರ ಸದರಿ ಜಾಗದ ಮಾಲೀಕತ್ವ ಪುರಸಭೆಗೆ ಸೇರಿದ್ದು, ಶಿಶುವಿಹಾರದ ಬದಲಿಗೆ ಅಂಗನವಾಡಿ ಕೇಂದ್ರ ಆರಂಭಿಸಿ ಇದರ ನಿರ್ವಹಣೆ ಮಾಡುತ್ತಿದ್ದು, ಆದರೆ ಸ್ವಚ್ಛತೆ ಇಲ್ಲದೆ ಮೈದಾನ ಮಲೀನಗೊಂಡಿದ್ದು, ಇದರ ಪಕ್ಕ ಹರಿಯುವ ಚರಂಡಿಯ ನೀರು ದುರ್ನಾತ ಬೀರುತ್ತಿದೆ. ಇದು ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಇಂತಹ ಕಲುಷಿತ ವಾತಾವರಣದಲ್ಲಿಯೆ ಆಟವಾಡಿಕೊಂಡು ಕೆಲವು ಬಾರಿ ಊಟ ಮಾಡುವುದರಿಂದ ರೋಗ ತಗುಲುವ ಸಂಭವ ಇರುವ ಬಗ್ಗೆ ಸ್ಥಳಿಯ ಪುರಸಭೆಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳುವ ಗೋಜಿಗೆ ಅಧಿಕಾರಿ ವರ್ಗ ಹೋಗಿಲ್ಲ. ವಿಶಾಲವಾದ ಮೈದಾನಕ್ಕೆ ಕಾಂಪೌಡ್ ಇಲ್ಲದ ಕಾರಣ ಬಿಡಾಡಿ ದನಗಳು, ಹಂದಿ, ನಾಯಿಗಳು, ನುಗ್ಗಿ ಗಲೀಜು ಮಾಡುತ್ತಿರುವುದರ ಜತೆಗೆ ಸುತ್ತಲಿನ ಜನರು ಕಸ ತಂದು ಇಲ್ಲಿಗೆ ಸುರಿಯುತ್ತಿರುವುದರಿಂದ ಹೇಳುವವರು ಕೇಳುವವರೆ ಇಲ್ಲದಂತಾಗಿದೆ.
ಈಗಾಗಲೇ ಡೆಂಘೀ ಮತ್ತು ಇತರೆ ಸಾಂಕ್ರಾಮಿಕ ರೋಗಗಳ ಭೀತಿಯಿಂದ ಇರುವ ಜನತೆ ಈಗ ಮತ್ತಷ್ಟು ಆತಂಕಗೊಂಡಿದ್ದು, ಪುರಸಭೆ ಆಡಳಿತ ವೈಖರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಶಿಶುವಿಹಾರದ ಮೈದಾನದ ಸುತ್ತ ಕಾಂಪೌಡ್ ನಿರ್ಮಿಸಿ ಸ್ವಚ್ಛತೆ ಕಾಪಾಡಬೇಕೆಂದು ಒತ್ತಾಯಿಸಿದ್ದಾರೆ.