ಹಿಂದೂಸ್ತಾನಿ ಜುಗಲ್ಬಂದಿ ಗಾಯನ
ಕ.ಪ್ರ.ವಾರ್ತೆ ಮೈಸೂರು ಜು. 28
ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿರುವ ಹಿಂದೂಸ್ತಾನಿ ಸಂಗೀತ ಜುಗಲ್ಬಂದಿ ಗಾಯನ ಕಛೇರಿಯು ಇಲ್ಲಿನ ಕಲಾಮಂದಿರದಲ್ಲಿ ಶನಿವಾರ ನಡೆಯಿತು.
ಸಪ್ತಸ್ವರ ಬಳಗ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮವು ಸಪ್ತಸ್ವರ ಹಿಂದೂಸ್ತಾನೀ ಸಂಗೀತ ವಿದ್ಯಾಲಯದ ಶಿಕ್ಷಕ ಪಂಡಿತ್ ಪ್ರಭುರಾವ್ ಅವರ ಹಾಡುಗಾರಿಕೆಯಿಂದ ಆರಂಭವಾಯಿತು.
ನಂತರ ಶಿವಮೊಗ್ಗದ ಗುರುಕೃಪಾ ಗಾನಮಂದಿರ ಸಂಚಾಲಕರು ಹಾಗೂ ಸಂಗೀತ ಉಪಾಧ್ಯಾಯರು ಆದ ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯ ಉಸ್ತಾದ್ ಹುಮಾಯೂನ್ ಹರ್ಲಾಪುರ ಅವರು ಗಾಯನ ನಡೆಸಿಕೊಟ್ಟರು. ಹುಮಾಯೂನ್ ಹರ್ಲಾಪುರ ಅವರ ಪುತ್ರರಾದ ನೌಶಾದ್ ಹರ್ಲಾಪುರ ಹಾಗೂ ನಿಶಾದ್ ಹರ್ಲಾಪುರ ಸಹೋದರರು ಜುಗಲಬಂದಿ ಗಾಯನ ಸಭಿಕರ ಪ್ರಶಂಸೆಗೆ ಪಾತ್ರವಾಯಿತು.
ಪಕ್ಕವಾದ್ಯದಲ್ಲಿ ರಮೇಶ್ ಧನ್ನೂರು ತಬಲ, ಪ್ರಭುರಾವ್ ಹಾರ್ಮೋನಿಯಂ, ಭೀಮಾಶಂಕರ್ ತಬಲ ಹಾಗೂ ಮೃತ್ಯುಂಜಯ ಹಾರ್ಮೋನಿಯಂ ನುಡಿಸಿ ಸಾಥ್ ನೀಡಿದರು.
ಹಿರಿಯ ಸಂಗೀತ ವಿದ್ವಾಂಸ ಪಂಡಿತ್ ಇಂದೂಧರ ನಿರೋಡಿ, ಟ್ರಸ್ಟ್ ಅಧ್ಯಕ್ಷ ಡಾ.ಜಿ.ಸಿದ್ದೇಶ್, ಕಾರ್ಯದರ್ಶಿ ಪ್ರೊ.ಬಿ. ಸೋಮಶೇಖರ್ ಹಾಗೂ ಖಜಾಂಚಿ ಪ್ರೊ.ಎಚ್.ಜಿ. ಕೃಷ್ಣಪ್ಪ ಇದ್ದರು.
ಆರ್ಟಿಒ ಕಚೇರಿ ಸ್ಥಳಾಂತರಕ್ಕೆ ವಿರೋಧ
ಕ.ಪ್ರ.ವಾರ್ತೆ ಮೈಸೂರು ಜು. 28
ಇಲ್ಲಿನ ಶಕ್ತಿನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾದೇಶಿಕ ಸಾರಿಗೆ ಕಚೇರಿ ಸ್ಥಳಾಂತರಿಸುವುದನ್ನು ಸಾರ್ವಜನಿಕರು ತೀವ್ರವಾಗಿ ವಿರೋಧಿಸಿದ್ದಾರೆ.
ಇಡೀ ಮೈಸೂರು ನಗರಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿದ್ದ ಪ್ರಾದೇಶಿಕ ಸಾರಿಗೆ ಕಚೇರಿಯನ್ನು (ಆರ್ಟಿಒ) ಎರಡು ವಿಭಾಗವಾಗಿ ಮಾಡಲಾಯಿತು. ಈ ಸಂಬಂಧ ಪೂರ್ವ ಭಾಗದ ಕಚೇರಿಯನ್ನು ಶಕ್ತಿನಗರದ ಡಾ. ರಾಜ್ಕುಮಾರ್ ರಸ್ತೆಯಲ್ಲಿ ತೆರೆಯಲಾಗಿದ್ದು, ಅದು ಕಳೆದ ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.
ಈ ಕಚೇರಿ ಕಟ್ಟಡ ಜಾಗವು ತುಂಬ ವಿಶಾಲವಾಗಿದೆ ಹಾಗೂ ಎಫ್ಸಿ ಮಾಡಿಸಲು ಅಗತ್ಯವಾದ ಸ್ಥಳಾವಕಾಶವಿದೆ. ಹೀಗಿರುವಾಗ ಈ ಕಚೇರಿಯನ್ನು ನಾಯ್ಡು ನಗರಕ್ಕೆ ಸ್ಥಳಾಂತರಿಸುವುದು ಸರಿಯಲ್ಲ. ಅದುವೇ ಮೂರನೇ ಮಹಡಿಗೆ ಸ್ಥಳಾಂತರಿಸುವ ಚಿಂತನೆ ನಡೆಸಿರುವುದು ಕೆಲಸ ಕಾರ್ಯಗಳಿಗೆ ಬರುವ ನಾಗರಿಕರಿಗೆ ತುಂಬ ತೊಂದರೆಯಾಗಲಿದೆ. ಬಾಡಿಗೆ ಕಟ್ಟಡವನ್ನು ಮತ್ತೊಂದು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸುವ ಔಚಿತ್ಯವೇನು ಎಂದು ಪ್ರಶ್ನಿಸಿರುವ ಅವರು, ಈಗ ಕಾರ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಕಚೇರಿ ಇರಲಿ ಎಂದು ಆಗ್ರಹಿಸಿದ್ದಾರೆ.