ಆಟೋಗಳ ಡಿಕ್ಕಿ: ವ್ಯಕ್ತಿ ಸಾವು
ಕ.ಪ್ರ.ವಾರ್ತೆ ಹುಣಸೂರು ಜು. 29
ಸರಕು ಸಾಗಣೆ ಆಟೋ ಹಿಂದಿಕ್ಕುವ ವೇಳೆ ಸಾರಿಗೆ ಆಟೋ ಡಿಕ್ಕಿ ಹೊಡೆದು ಪ್ರಯಾಣಿಕರೊಬ್ಬರು ಸ್ಥಳದಲ್ಲಿ ಮೃತಪಟ್ಟರೆ, ಹತ್ತು ಮಂದಿ ಗಾಯಗೊಂಡಿರುವ ಘಟನೆ ಗಾಗೇನಹಳ್ಳಿ ಸಮೀಪ ನಡೆದಿದೆ. ತಾಲೂಕಿನ ಬಿಳಿಕೆರೆ ಹೋಬಳಿಯ ಬೆಂಕಿಪುರ ಗ್ರಾಮದ ನಾಗರಾಜು (25) ಮೃತಪಟ್ಟವರು. ಭಾನುವಾರ ರಾತ್ರಿ ಬಿಳಿಕೆರೆಯಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದ ಎರಡು ಆಟೋಗಳ ನಡುವೆ ಪರಸ್ಪರ ಡಿಕ್ಕಿಯಾಗಿದೆ. ಘಟನೆಯಿಂದ ನಾಗರಾಜು ಮೃತಪಟ್ಟರೆ, ಉಳಿದ ಹತ್ತು ಮಂದಿ ಗಾಯಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಗಮ, ಮಂಡಳಿ ನೇಮಕಕ್ಕೆ ಒತ್ತಾಯ
ಸರಗೂರು: ಕಾಂಗ್ರೆಸ್‌ನ ಸಂಘಟನೆಗೆ ಕಳೆದ 30 ವರ್ಷಗಳಿಂದ ಶ್ರಮಿಸುತ್ತಿರುವ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾಗಿ ಮತ್ತು ಸರಗೂರು ವರ್ತಕರ ಸಂಘದ ಅಧ್ಯಕ್ಷರಾಗಿರುವ ಲಕ್ಷ್ಮಣೇಗೌಡ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಅಥವಾ ನಿಗಮ, ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಬೇಕು ಎಂದು ರಾಹುಲ್‌ಗಾಂಧಿ ಯೂತ್ ಅಸೋಷಿಯೇಷನ್ ಮಾಜಿ ಅಧ್ಯಕ್ಷ ಎಸ್.ಡಿ. ಓಂಕಾರ್ ಜೈನ್ ಒತ್ತಾಯಿಸಿದ್ದಾರೆ.
ಶ್ರೀಲಕ್ಷ್ಮೀದೇವಿಗೆ ವಿಶೇಷ ಅಲಂಕಾರ
ಕೆ.ಆರ್. ನಗರ: ಪಟ್ಟಣದ ಸಿ.ಎಂ. ರಸ್ತೆಯ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಆಷಾಢ ಮಾಸದ ಪ್ರಯುಕ್ತ ಶ್ರೀ ಲಕ್ಷ್ಮೀದೇವಿಯನ್ನು ನಾಣ್ಯಗಳಿಂದ ವಿಶೇಷವಾಗಿ ಅಲಂಕಾರಿಸಲಾಗಿತ್ತು. ಅರ್ಚಕ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಶ್ರೀ ನಾರಾಯಣಸ್ವಾಮಿ ದೇವರಿಗೆ ಹೂವಿನ ಅಲಂಕಾರ, ಲಕ್ಷ್ಮೀದೇವಿ ಅಮ್ಮನವರನ್ನು ತೊಟ್ಟಲಿನಲ್ಲಿರಿಸಿ ಹೂವಿನಿಂದ ಶೃಂಗರಿಸಿದ್ದರು. ರಾತ್ರಿ 8.30ಕ್ಕೆ ಮಹಾಮಂಗಳಾರತಿ ನಡೆದ ನಂತರ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.