ಎಚ್.ಡಿ. ಕೋಟೆಯನ್ನು ಅತಿವೃಷ್ಟಿ ತಾಲೂಕಾಗಿ ಘೋಷಿಸಿ
ಕ.ಪ್ರ.ವಾರ್ತೆ ಮೈಸೂರು ಜು. 29
ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯನ್ನು ಅತಿವೃಷ್ಟಿ ತಾಲೂಕಾಗಿ ಘೋಷಿಸುವಂತೆ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಎಂ.ಶಿವಣ್ಣ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಎಚ್.ಡಿ. ಕೋಟೆ ತಾಲೂಕಿನಲ್ಲಿ ಜೂನ್, ಜುಲೈನಲ್ಲಿ ಪ್ರತಿದಿನ ಮಳೆಯಾಗುತ್ತಿದ್ದು, ಜಲಪ್ರಳಯವೆ ಆದಂತಿದೆ. ಕಂದಲಿಕೆ, ಎನ್. ಬೇಗೂರು, ಅಂತರಸಂತೆ, ಕಸಬಾ ಹೋಬಳಿಗಳಲ್ಲಿ ಮಳೆ ಸುರಿಯುತ್ತಿದ್ದು, ರೈತರು ವ್ಯವಸಾಯ ಮಾಡುವುದೇ ಕಷ್ಟವಾಗಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎಚ್.ಡಿ. ಕೋಟೆ ತಾಲೂಕಿನಲ್ಲಿ 2010-11ರಲ್ಲಿ 484 ಮಿ.ಮೀ, 2011-12ರಲ್ಲಿ 452 ಮಿ.ಮೀ., 2013ನೇ ಸಾಲಿನಲ್ಲಿ ಈವರೆಗೆ 658 ಮಿ.ಮೀ. ಮಳೆಯಾಗಿದೆ. ಇದರಿಂದಾಗಿ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ 31 ಸಾವಿರ ಹೆಕ್ಟೇರ್ ಪ್ರದೇಶದ ಹತ್ತಿ ನೀರಿನಿಂದ ಜಲಾವೃತವಾಗಿದೆ. ಮಳೆಯಿಂದಾಗಿ ಹೂವುಗಳು ಉದುರುತ್ತಿವೆ. 1 ಎಕರೆ ಹತ್ತಿ ಬೆಳೆಯಲು ರೈತ 10,000 ವೆಚ್ಚ ಮಾಡಿದ್ದು, ಇದರಿಂದ 20-25 ಸಾವಿರ ಸಂಪಾದಿಸಬಹುದಿತ್ತು. ಆದರೆ, ಮಳೆಯಿಂದಾಗಿ ನಷ್ಟ ಉಂಟಾಗುತ್ತಿದೆ. 4,669 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹೊಗೆಸೊಪ್ಪು ಕೂಡ ತೇವಾಂಶ ಹೆಚ್ಚಾಗಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ತೆಂಗಿನ ಮರಗಳಿಗೆ ರೋಗ: ಉದ್ದು, ಹೆಸರು, ಅಲಸಂದೆ, ಎಳ್ಳು ಮುಂತಾದ ಬೆಳೆಗಳು ಈಗಾಗಲೇ ಮಳೆ ನೀರಿಗೆ ಕೊಳೆಯುತ್ತಿವೆ. ತೆಂಗಿನ ಮರಗಳಿಗೆ ರೋಗ ತಗುಲಿದೆ. ಮಳೆಯಿಂದಾಗಿ ತೆಂಗಿನ ಮರಗಳಿಗೆ ಔಷಧ ಸಿಂಪಡಿಸಿ ರಕ್ಷಿಸಲು ಸಾಧ್ಯವಾಗುತ್ತಿಲ್ಲ. ತೆಂಗು ಅಭಿವೃದ್ಧಿ ಮಂಡಳಿಯಿಂದ ಅಧಿಕಾರಿಗಳನ್ನು ಕೂಡಲೇ ಕಳುಹಿಸಿ ಸಂರಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.
ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಸೌಲಭ್ಯ ನೀಡುತ್ತಿದೆ. ಆದರೆ, ಬೆಳೆಗಳಿಗೆ ವಿಮೆ ಮಾಡಿಸುವ ಜಾಗೃತಿಯನ್ನು ರೈತರಲ್ಲಿ ಮೂಡಿಸದೆ ಬೆಳೆ ನಷ್ಟಕ್ಕೆ ಪರಿಹಾರ ಪಡೆಯುವುದು ಕಷ್ಟವಾಗಿದೆ. ಬ್ಯಾಂಕಿನಿಂದ ಸಾಲ ಪಡೆದ ರೈತರು ಮಾತ್ರ ವಿಮೆ ಮಾಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಈ ಬಾರಿ ಮಳೆಯಿಂದಾಗಿ ತಾಲೂಕಿನ ರೈತರು ಕಂಗಾಲಾಗಿದ್ದಾರೆ. ರೈತರಿಗೆ ಅನುಕೂಲ ಕಲ್ಪಿಸಲು ಅನುಕೂಲವಾಗುವಂತೆ ಸರ್ಕಾರ ಕೂಡಲೇ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ಎಚ್.ಡಿ. ಕೋಟೆಗೆ ಕಳುಹಿಸಿ, ಬೆಳೆ ನಷ್ಟವನ್ನು ಅಂದಾಜು ಮಾಡಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ತಾಲೂಕು, ಜಿಲ್ಲಾಡಳಿತ ವಿಫಲ: ಮಳೆಯಿಂದಾಗಿ ಅನೇಕ ಗ್ರಾಮಗಳಲ್ಲಿ ಮಣ್ಣಿನ ಗೋಡೆಗಳು ಕುಸಿದು ಬಿದ್ದಿವೆ. ಇಷ್ಟೆಲ್ಲಾ ಗೊತ್ತಿದ್ದರೂ ತಾಲೂಕು ಆಡಳಿತ, ಜಿಲ್ಲಾಡಳಿತ ತಲೆಕೆಡಿಸಿಕೊಳ್ಳದೇ ಕಣ್ಣುಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದರು. ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ, ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರು ತಾಲೂಕಿಗೆ ಭೇಟಿ ನೀಡಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ಪರಿಹಾರ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ಎಚ್.ಡಿ. ಕೋಟೆ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಎಸ್. ಚಿಕ್ಕಮಾದು ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನ ಜನರ ಸಮಸ್ಯೆಗೆ ಶಾಸಕರು ಸ್ಪಂದಿಸುತ್ತಿಲ್ಲವೇಕೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಎಂ. ಶಿವಣ್ಣ, ಪರಿಸ್ಥಿತಿಯನ್ನು ಚಿಕ್ಕಮಾದು ಅವರ ಗಮನಕ್ಕೆ ತರಲಾಗಿದೆ. ಈ ವಿಚಾರವನ್ನು ಅವರು ಸದನದಲ್ಲಿ ಪ್ರಸ್ತಾಪ ಮಾಡುವವರಿದ್ದಾರೆ ಎಂದರು. ಮುಖಂಡ ಬೋರೇಗೌಡ ಇದ್ದರು.
ಹದಗೆಟ್ಟ ರಸ್ತೆಗಳ ಅಭಿವೃದ್ಧಿಗೆ ಶಿವಣ್ಣ ಒತ್ತಾಯ
ಮೈಸೂರು: ಎಚ್.ಡಿ. ಕೋಟೆ ತಾಲೂಕಿನ ಲೋಕೋಪಯೋಗಿ ಇಲಾಖೆಗೆ ಸೇರಿದ ಪ್ರಮುಖ ರಸ್ತೆಗಳು ಹದಗೆಟ್ಟಿದ್ದು, ಇವುಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಎಂ. ಶಿವಣ್ಣ ಒತ್ತಾಯಿಸಿದರು.
ಮಾನಂದವಾಡಿ ರಸ್ತೆ, ಹುಣಸೂರು- ಬೇಗೂರು ರಸ್ತೆ, ಎಚ್.ಡಿ. ಕೋಟೆ- ಕುಟ್ಟ ರಸ್ತೆ, ಸರಗೂರು- ಬರಗಿ ರಸ್ತೆ, ದಮ್ಮನಕಟ್ಟಿ- ಬಾವಲಿ ರಸ್ತೆ, ಬೀಚನಹಳ್ಳಿ- ಬೇಗೂರು ರಸ್ತೆ, ಬಾವಲಿ- ಕೊರಟಗೆರೆ ರಸ್ತೆಗಳು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರುತ್ತವೆ. ರಾಮನಾಥಪುರ- ತೆರಕಣಾಂಬಿ ರಸ್ತೆ ಅಭಿವೃದ್ಧಿಗಾಗಿ 33.90 ಕೋಟಿ ಅಂದಾಜಿನಲ್ಲಿ ಎನ್‌ವಿಎಸ್ ಮೂಕಾಂಬಿಕ ಕನ್ಸ್‌ಟ್ರಕ್ಷನ್‌ಗೆ ನೀಡಲಾಗಿದ್ದು, ಸರಿಯಾಗಿ ಅಭಿವೃದ್ಧಿಪಡಿಸಿಲ್ಲ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಈ ರಸ್ತೆ ಕಾಮಗಾರಿ ವಿಳಂಬವಾಗಿದೆ. ಅಲ್ಲದೆ, ಈವರೆಗೂ ಆಗಿರುವ ಕಾಮಗಾರಿಯೂ ಕಳಪೆಯಾಗಿದೆ. ಹೀಗಾಗಿ ಕಳಪೆ ಕಾಮಗಾರಿ ತನಿಖೆ ಆಗಬೇಕು. ವಿಳಂಬಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರರ ಲೈಸೆನ್ಸ್ ರದ್ದುಪಡಿಸಿ, ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಖುದ್ದಾಗಿ ತಾಲೂಕಿನ ರಸ್ತೆಗಳನ್ನು ಪರಿಶೀಲಿಸಿ ಕೂಡಲೇ ರಸ್ತೆ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.