ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬುಡಕಟ್ಟು ಜನರ ಬದುಕಿನ ಅನಾವರಣ ಭಂಗ

Srinivasa Murthy VN
Updated On : 29 Jul 2013, 11:07 am

ಮೈಸೂರು: ಭಂಗ ಕೃತಿಯು ಬುಡಕಟ್ಟು ಜನಾಂಗದ ಬದುಕನ್ನು ಅನಾವರಣಗೊಳಿಸಿರುವ ಕೃತಿ ಎಂದು ಇಂಗ್ಲಿಷ್ ಪ್ರಾಧ್ಯಾಪಕಿ ಕೆ.ಎನ್. ಸುಷ್ಮಾ ಹೇಳಿದರು.
ಚಿಂತನಾ ಚಿತ್ತಾರ ವೇದಿಕೆಯು ರಂಗಾಯಣದ ಶ್ರೀರಂಗದಲ್ಲಿ ಸೋಮವಾರ ಏರ್ಪಡಿಸಿದ್ದ ಪುಸ್ತಕ ಓದು ವಿಮರ್ಶೆ ಕಾರ್ಯಕ್ರಮದಲ್ಲಿ ಚಿನುಅ ಅಚಿಬೆ ಅವರ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ಪ್ರೊ.ಸಿ. ನಾಗಣ್ಣ ಅವರು ಭಂಗ ಹೆಸರಿನಲ್ಲಿ ಅನುವಾದಿಸಿದ್ದು, ಈ ಕೃತಿ ಕುರಿತು ಅವರು ಮಾತನಾಡಿದರು.
ಆಫ್ರಿಕಾದ ನೈಜೀರಿಯಾದಲ್ಲಿ ಅನೇಕ ಬುಡಕಟ್ಟು ಜನಾಂಗವಿದ್ದು, ಇದರಲ್ಲಿನ ಇಬೋ ಎಂಬ ಒಂದು ಬುಡಕಟ್ಟಿನ ಸಮುದಾಯದ ಒಕಾಂಕೊ ಎಂಬವನ ಸುತ್ತ ಹೆಣೆಯಲಾಗಿರುವ ಈ ಕೃತಿಯ ಕಥಾನಕದಲ್ಲಿ, ಆತ ಆ ಸಮುದಾಯಕ್ಕಾಗಿ ಹೋರಾಡಿದರೂ ಬಹಿಷ್ಕಾರಕ್ಕೆ ಒಳಗಾಗುತ್ತಾನೆ. ಕಡೆಗೆ ಆತ ಮನನೊಂದು ಆತ್ಮಹತ್ಮೆ ಮಾಡಿಕೊಂಡು ಸಾಯುತ್ತಾನೆ. ಒಟ್ಟಾರೆ ಈ ಕೃತಿಯು ಅಲ್ಲಿನ ಬುಡಕಟ್ಟು ಜನರ ಬದುಕು, ಬವಣೆ ಹಾಗೂ ಶೋಷಣೆ ಕುರಿತಾಗಿ ಸಮಗ್ರ ಚಿತ್ರಣವನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಕಪ್ಪು ಸಮುದಾಯದ ಯುವಜನಾಂಗಕ್ಕೆ ಸ್ಫೂರ್ತಿ ನೀಡುವ ದೃಷ್ಟಿಯಲ್ಲಿ ಮೂಲ ಲೇಖಕರು ಈ ಕೃತಿಯನ್ನು ಇಂಗ್ಲಿಷ್‌ನಲ್ಲಿ ರಚಿಸಿದ್ದು, ಇದು ಅನೇಕ ಭಾಷೆಯಲ್ಲಿ ಪ್ರಕಟವಾಗಿದೆ. ಉತ್ತರ ಕನ್ನಡ ಭಾಷೆಯಲ್ಲಿ ಮುತಾಲಿಕ್ ಎಂಬವರು ಬರೆದಿದ್ದಾರೆ. ಪ್ರೊ.ಸಿ. ನಾಗಣ್ಣ ಅವರು ಇಲ್ಲಿನ ಗುಂಡ್ಲುಪೇಟೆ ಹಾಗೂ ನಂಜನಗೂಡಿನ ಭಾಷೆ ಬಳಸಿ ಭಂಗ ಕೃತಿಯನ್ನು ಮನಮುಟ್ಟುವಂತೆ ಅನುವಾದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಶೋಧನಾ ವಿದ್ಯಾರ್ಥಿಗಳಾದ ಚರಣ್‌ಕುಮಾರ್ ಹಾಗೂ ನಾರಾಯಣ್ ಕೆ. ಕ್ಯಾಸಂಬಳ್ಳಿ ಅವರು ಪ್ರತಿಕ್ರಿಯೆ ನೀಡಿದರು. ಇದಕ್ಕೂ ಮುನ್ನ ಭಂಗ ಕೃತಿಯ ಕೆಲವು ಭಾಗಗಳನ್ನು ಟಿ.ವಿ. ಭಾರತಿ ಓದಿದರು. ಹಿರಿಯ ಸಾಹಿತಿ ಡಾ.ಸಿಪಿಕೆ ಮುಖ್ಯ ಅತಿಥಿಯಾಗಿದ್ದರು. ವೇದಿಕೆ ಸಂಚಾಲಕ ನಿಂಗರಾಜು ಚಿತ್ತಣ್ಣನವರ್ ನಿರೂಪಿಸಿದರು. ಲೇಖಕ ಹಾಗೂ ಪ್ರಸಾರಾಂಗದ ನಿರ್ದೇಶಕ ಪ್ರೊ.ಸಿ. ನಾಗಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement