ಸಾರ್ವಜನಿಕ ವೀಕ್ಷಣೆಗೆ ಹುಲಿ ಮರಿಗಳು ಮುಕ್ತ...
ಕ.ಪ್ರ.ವಾರ್ತೆ ಮೈಸೂರು ಜು. 29
ತಾಯಿ ಹುಲಿಯ ತೆಕ್ಕೆಯಲ್ಲಿ ಮರಿ ಹುಲಿಗಳ ಕುಣಿದಾಟ, ಓಡಾಟ ನೋಡುವ ಸೌಭಾಗ್ಯ ಮೃಗಾಲಯ ಪ್ರವಾಸಿಗರಿಗೆ ಲಭ್ಯವಾಗಿದೆ. ಚಾಮರಾಜೇಂದ್ರ ಮೃಗಾಲಯದ ಬಿಳಿ ಹುಲಿ ಮಾನ್ಯಳಿಗೆ 56 ದಿನಗಳ ಹಿಂದೆ ಜನಿಸಿದ ನಾಲ್ಕು ಮರಿಗಳನ್ನು ಹುಲಿ ದಿನವಾದ ಸೋಮವಾರವೇ ಸಾರ್ವಜನಿಕರ ವೀಕ್ಷಣೆಗೆ ಬಿಡಲಾಗಿದೆ. ಮೃಗಾಲಯ ಪ್ರವಾಸಕ್ಕೆ ಬಂದಿದ್ದ ಮೂಲತಃ ಹೈದ್ರಾಬಾದ್ನ ವೈಜಾಗ್ನವರಾದ, ಕತಾರ್ನಲ್ಲಿ ನೆಲೆಸಿರುವ ಜಗದೀಶ್ ಎಂಬುವರ ಮಕ್ಕಳಾದ ರಾಹುಲ್ ಹಾಗೂ ಶ್ವೇತಾ ಅವರಿಗೆ ಹುಲಿಯನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸುವ ಅವಕಾಶ ದೊರೆಯಿತು. ಮಾನ್ಯ ಎರಡು ವರ್ಷದ ಹಿಂದೆ ತವರೂರಾದ ಮೈಸೂರಿನಲ್ಲೆ ಎರಡು ಮರಿ ಹುಲಿಗಳಿಗೆ ಜನ್ಮ ನೀಡಿದ್ದಳು. ಎರಡು ತಿಂಗಳ ಹಿಂದೆ ಮತ್ತೆ ನಾಲ್ಕು ಮರಿಗಳು ಜನಿಸಿದ್ದು ಈಗ ಮರಿಗಳು ಆರೋಗ್ಯವಾಗಿವೆ. ಹುಲಿ ಕೊಠಡಿಯಲ್ಲಿದ್ದ ಮಾನ್ಯ ಮರಿಗಳೊಂದಿಗೆ ಹೊರ ಬಂದಾಗ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.
ಗೂಡ್ಸ್ ಆಟೋ ಡಿಕ್ಕಿ: ವ್ಯಕ್ತಿ ಸಾವು
ಮೈಸೂರು: ಗೂಡ್ಸ್ ಆಟೋ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ. ವಿದ್ಯಾರಣ್ಯಪುರಂ ನಿವಾಸಿ ನವೀನ್ಕುಮಾರ್ (26) ಮೃತಟ್ಟವರು. ಇವರು ಬೈಕಿನಲ್ಲಿ ಭಾನುವಾರ ಮಧ್ಯರಾತ್ರಿ ನಂಜು ಮಳಿಗೆ ವೃತ್ತದ ಬಳಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಗೂಡ್ಸ್ ಆಟೋ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ ಮೃತಪಟ್ಟಿದ್ದಾರೆ. ವ್ಯಕ್ತಿ ಆತ್ಮಹತ್ಯೆ: ಅಪರಿಚಿತ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಾರ್ಥನಗರ ಸಂಗೀತಾ ಕಾರ್ನರ್ ಬಳಿ ಭಾನುವಾರ ನಡೆದಿದೆ. ವಿಷ ಸೇವಿಸಿ ಒದ್ದಾಡುತ್ತಿದ್ದಾದ ಅಪರಿಚಿತ ವ್ಯಕ್ತಿಯನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದು, ಕೆಲವು ಗಂಟೆ ಚಿಕಿತ್ಸೆ ಬಳಿಕ ಮೃತಪಟ್ಟಿದ್ದಾರೆ. ಚಹರೆ- 55 ವರ್ಷ, 5.5 ಅಡಿ ಎತ್ತರ, ಕಪ್ಪು ಮೈಬಣ್ಣ, ಮಾಸಲು ಬಣ್ಣದ ಶರ್ಟ್, ಪಂಚೆ ಧರಿಸಿದ್ದಾರೆ. ದೂ. 0821- 2418308 ಸಂಪರ್ಕಿಸಿ.