ನರ್ಮ್ 2ನೇ ಹಂತ ಕಾಮಗಾರಿಗೆ 815 ಕೋಟಿ
ಕ.ಪ್ರ.ವಾರ್ತೆ ಮೈಸೂರು ಜೂ. 25
ನರ್ಮ್ ಯೋಜನೆಯಡಿ ನಗರದಲ್ಲಿ ಕೈಗೊಳ್ಳಬಹುದಾದ ಎರಡನೇ ಹಂತದ ಕಾಮಗಾರಿಗಳಿಗೆ ಅನುಮೋದನೆ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಶಾಸಕ ಎಂ.ಕೆ. ಸೋಮಶೇಖರ್ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಲಮಂಡಳಿ ಇಇ ಸುಬ್ಬೇಗೌಡ ಈ ಮಾಹಿತಿ ನೀಡಿದರು.
ನಗರದಲ್ಲಿ ಒಳಚರಂಡಿ ಅಭಿವೃದ್ಧಿಗೆ 408 ಕೋಟಿ, ದಿನದ 24 ಗಂಟೆಯೂ ನೀರು ಪೂರೈಸುವ ಯೋಜನೆಗೆ 102.26 ಕೋಟಿ ಮೇಳಾಪುರ 3ನೇ ಹಂತದ ಕಾಮಗಾರಿಗೆ 76.36 ಕೋಟಿ, ಬೆಳಗೊಳ ಸಮೀಪದ ಸೆಟ್ಟಿಕಟ್ಟೆ ಕಾಮಗಾರಿಗೆ 91.30 ಕೋಟಿ ಸೇರಿದಂತೆ ಒಟ್ಟು 815.23 ಕೋಟಿ ಮೊತ್ತದ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಈ ಪೈಕಿ ಒಳ ಚರಂಡಿ ಹೊರತುಪಡಿಸಿ ಉಳಿದ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳೊಡನೆ ಚರ್ಚಿಸಲಾಗಿದೆ ಎಂದರು.
ನಗರ ಪಾಲಿಕೆ ಇಇ ಸುಬ್ರಹ್ಮಣ್ಯ ಮಾತನಾಡಿ, ಕೆಆರ್ಎಸ್ನಲ್ಲಿ 79.90 ಅಡಿ ನೀರು ಇದೆ. ಒಳ ಹರಿವು 3,790 ಕ್ಯೂಸೆಕ್ ಇದ್ದರೆ, ಹೊರಹರಿವು 1,900 ಕ್ಯೂಸೆಕ್ ಇದೆ. ಇದು ಬೆಂಗಳೂರು ಮತ್ತು ಮೈಸೂರಿನ ಕುಡಿಯುವ ನೀರಿಗೂ ಉಪಯೋಗವಾಗುತ್ತಿದೆ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಸೋಮಶೇಖರ್, ಇದುವರೆಗೆ ಬೇಸಿಗೆ ಹೆಚ್ಚಿತ್ತು. ನೀರು ಸಹ ಕಡಿಮೆ ಇತ್ತು. ಆದರೆ ಈಗ ಮಳೆಯಾಗಿ ನೀರು ಸಂಗ್ರಹವಾಗುತ್ತಿದೆ. ಈಗಲಾದರೂ ಜನರಿಗೆ ನಿತ್ಯವೂ ಕುಡಿಯುವ ನೀರು ಪೂರೈಕೆ ಮಾಡಬೇಕು. ಅಲ್ಲದೆ ಕಬಿನಿ ಮತ್ತು ಕಾವೇರಿ ಜೋಡಿಸುವ ಮಾಡುವ ಕಾಮಗಾರಿ ಆರಂಭವಾಗಬೇಕು ಎಂದು ತಾಕೀತು ಮಾಡಿದರು. ಮುಂದಿನ ಒಂದು ವಾರದೊಳಗೆ ಈ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಒಳ ಚರಂಡಿ ಮತ್ತು ರಸ್ತೆ ನಿರ್ಮಾಣ: ನಗರ ಒಳಚರಂಡಿ ವ್ಯವಸ್ಥೆಯನ್ನು ಪುನರ್ ನವೀಕರಣಗೊಳಿಸಲು ನರ್ಮ್ ಯೋಜನೆಯಡಿ 408 ಕೋಟಿ ಮೊತ್ತದ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ನಗರ ಹೊಸ ಬಡಾವಣೆಗಳೂ ಸೇರ್ಪಡೆಗೊಳ್ಳಲಿವೆ ಎಂದು ಒಳಚರಂಡಿ ಮಂಡಳಿಯ ವೆಂಕಟರಾಜಯ್ಯ ತಿಳಿಸಿದರು.
ಅಲ್ಲದೆ ನಗರದಲ್ಲಿ ರಸ್ತೆ ಅಭಿವೃದ್ಧಿ ಮತ್ತು ಬೀದಿ ದೀಪಗಳು ಸೇರಿದಂತೆ ಇತರ ಕಾಮಗಾರಿಗಾಗಿ 619 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಪಾಲಿಕೆ ಎಸ್ಇ ಕೃಷ್ಣ ಹೇಳಿದರು.
ಉದ್ಯಾನವನ ಅಭಿವೃದ್ಧಿ: ನಗರದಲ್ಲಿನ ಒಟ್ಟು 115 ಎಕರೆ ಪ್ರದೇಶದಲ್ಲಿರುವ 256 ಉದ್ಯಾನಗಳ ಅಭಿವೃದ್ಧಿಗೆ 46.25 ಕೋಟಿ ಯೋಜನೆ ರೂಪಿಸಲಾಗಿದೆ. ಇಲ್ಲಿ ಆಟಿಕೆಗಳು, ಅಲಂಕಾರಿಕ ಗಿಡಗಳು, ಕಲ್ಲು ಬೆಂಚು ಅಳವಡಿಸಲು ಸಹ ತೀರ್ಮಾನಿಸಲಾಗಿದೆ ಎಂದು ಆಯುಕ್ತ ಪಿ.ಜಿ. ರಮೇಶ್ ವಿವರಿಸಿದರು.
ನಗರದ ಅನೇಕ ಬಡಾವಣೆಯಲ್ಲಿ ನೀರಿನ ಮೀಟರ್ಗಳಿಗೆ ನಿಯಂತ್ರಣ ಇಲ್ಲದಂತಾಗಿದೆ. ಇದರಿಂದ ಸಾರ್ವಜನಿಕರು ಹೆಚ್ಚು ಶುಲ್ಕ ಪಾವತಿಸುವಂತಾಗಿದೆ ಎಂದು ಶಾಸಕ ಸೋಮಶೇಖರ್, ಪಾಲಿಕೆ ಸದಸ್ಯ ಜೆ.ಎಸ್. ಜಗದೀಶ್ ಮತ್ತು ಕೆಲ ಅಧಿಕಾರಿಗಳೂ ಆರೋಪಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಇಇ ಸುಬ್ಬೇಗೌಡ ಅವರು, ಈ ಸಮಸ್ಯೆ ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಅವರ ಮನೆಯಲ್ಲಿಯೂ ಇತ್ತು. ಅದನ್ನು ಸರಿಪಡಿಸಲಾಗಿದೆ. ಸಾರ್ವಜನಿಕರು ಈ ಹಿಂದಿನ ಮೀಟರ್ ತೋರಿಸುತ್ತಿದ್ದ ಬಿಲ್ಗಿಂತ ಹೆಚ್ಚಾಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಜಿಲ್ಲೆಯಲ್ಲಿ ಡೆಂಘೀ ಜ್ವರ ಹೆಚ್ಚಾಗಿದೆ. ಆದರೆ ಯಾವುದೆ ಸಾವು ನೋವು ಕಾಣಿಸಿಕೊಂಡಿಲ್ಲ. ಜಿಲ್ಲೆಯಲ್ಲಿ ಒಟ್ಟು 90 ಮಂದಿಗೆ ಡೆಂಘೀ ಇರುವುದು ಸಾಬೀತಾಗಿದೆ. ಈ ಪೈಕಿ ನಗರ 25 ಪ್ರಕರಣ ಸೇರಿದೆ. ಇದಲ್ಲದೆ ಸುಮಾರು 400 ಮಂದಿಗೆ ಡೆಂಘೀ ಇರುವ ಶಂಕೆ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಾಲೇಗೌಡ ಹೇಳಿದರು.
ಪಾಲಿಕೆ ಸದಸ್ಯರಾದ ಜಗದೀಶ್, ಸುನಿಲ್, ಸುನಿಲ್ ಕುಮಾರ್, ಮಂಜುಳಾ ಮಾನಸ, ಪುಷ್ಪಲತಾ ಚಿಕ್ಕಣ್ಣ, ಉಮಾಮಣಿ ಇದ್ದರು.