ಪಡಿತರ ಚೀಟಿ ಫೋಟೋಗೆ 100 ವಸೂಲಿ
ಕ.ಪ್ರ.ವಾರ್ತೆ ಮೈಸೂರು ಜೂ. 25
ಬೆಳವಾಡಿ ಗ್ರಾಪಂನಲ್ಲಿ ರೇಷನ್ ಕಾರ್ಡ್ಗೆ ಫೋಟೋ ತೆಗೆಯಲು 100 ವಸೂಲಿ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬೆಳವಾಡಿಯಲ್ಲಿ ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ರೇಷನ್ ಕಾರ್ಡ್ಗೆ ಫೋಟೋ ತೆಗೆಯಲು ಸರ್ಕಾರ 50 ನಿಗದಿ ಮಾಡಿದ್ದರೂ, 100 ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್. ಕಲಾವತಿ, ಗ್ರಾಪಂನಲ್ಲಿ ಇರುವುದು ಒಂದು ಕಂಪ್ಯೂಟರ್ ಇದರಿಂದ ದಿನಕ್ಕೆ 4 ರಿಂದ 5 ಜನಕ್ಕೆ ಕಾರ್ಡ್ ಮಾಡಬಹುದು.
ಆದ್ದರಿಂದ ಮೂರು ಕಂಪ್ಯೂಟರ್ ಮತ್ತು ಮೂರು ಜನ ಆಪರೇಟರ್ಸ್ಗಳನ್ನು ಬಾಡಿಗೆಗೆ ತೆಗೆದುಕೊಂಡು ಕೆಲಸ ಮಾಡುತ್ತಿರುವುದರಿಂದ ಅವರ ಸಂಬಳ ಮತ್ತು ಬಾಡಿಗೆ ಭರಿಸಲು ಹೆಚ್ಚುವರಿಯಾಗಿ 50 ಪಡೆದುಕೊಳ್ಳುತ್ತಿರುವುದಾಗಿ ಹೇಳಿದರು.
ಒಳಚರಂಡಿ ಮಂಡಳಿಯವರು ಸರಿಯಾಗಿ ಕೆಲಸ ಮಾಡದೆ ಕೊಳಚೆ ನೀರು ಕುಡಿಯುವ ಪರಿಸ್ಥಿತಿ ಆಗಿದೆ. ವಿದ್ಯುತ್ ಕಂಬ ತೆಗೆಯಬೇಕು, ಮರ ತೆಗೆಯಬೇಕು, ಮೋರಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ವೆ ಆಗಬೇಕು, ತಕರಾರು ಅರ್ಜಿ ಕೊಟ್ಟರೂ ಖಾತೆ ಮಾಡುವುದು ಸರಿಯೆ? ರೇಷನ್ ಕಾರ್ಡ್ ಯಾವಾಗ ಕೊಡುತ್ತೀರಿ ಎಂದು ಸಾರ್ವಜನಿಕರು ಹಲವಾರು ಸಮಸ್ಯೆಗಳನ್ನು ಜನರ ಮುಂದಿಟ್ಟರು.
ಗ್ರಾಪಂ ಮಾಜಿ ಅಧ್ಯಕ್ಷ ಶಿವಮೂರ್ತಿ ಮಾತನಾಡಿ, ಗ್ರಾಪಂನವರು ಪೈಪ್ಲೈನ್ ಒಡೆದ ತಕ್ಷಣ ಕೂಡಲೇ ದುರಸ್ತಿಪಡಿಸಬೇಕು. ಮೋರಿ ಜಾಗ ಒತ್ತುವರಿ ಸರ್ವೆ ಮಾಡಿಸಿ, ಕಂದಾಯವನ್ನು ಸರಿಯಾಗಿ ವಸೂಲಿ ಮಾಡಿ, ಎರಡು ಮೋಟಾರ್ ಹೆಚ್ಚುವರಿಯಾಗಿ ಇಟ್ಟುಕೊಳ್ಳಿ, ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವುದನ್ನು ನಿಲ್ಲಿಸಿ ಎಂದು ಹೇಳಿದ ಅವರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಾಗ್ರತೆ ವಹಿಸುವಂತೆ ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಪುರುಷೋತ್ತಮ, ಉಪಾಧ್ಯಕ್ಷೆ ಭಾಗ್ಯ ರಮೇಶ್, ಸದಸ್ಯರಾದ ಶಿವಕುಮಾರಸ್ವಾಮಿ, ರಾಮಚಂದ್ರ, ಭಾಗ್ಯಮ್ಮ, ಬಸವರಾಜು, ಗ್ರಾಪಂ ಸದಸ್ಯರು ಇದ್ದರು.