ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಲೈಂಗಿಕ ಕಾರ್ಯಕರ್ತರಿಗೆ ಪುನಾವಸತಿ ಅವಶ್ಯಕ'

Srinivasa Murthy VN
Updated On : 25 Jun 2013, 11:54 am

ಕ.ಪ್ರ.ವಾರ್ತೆ  ಮೈಸೂರು  ಜೂ. 25
ಇಂದು ಲೈಂಗಿಕ ಕಾರ್ಯಕರ್ತರಿಗೆ ಪುನರ್ವಸತಿ ಕಲ್ಪಿಸುವುದು ಅವಶ್ಯಕ ಎಂದು ದಕ್ಷಿಣ ಭಾರತೀಯ ಭಾಷಾಸಂಸ್ಥೆಯ ಪ್ರಾಂಶುಪಾಲ ಡಾ.ಜಿ. ಪ್ರಭಾಕರ್ ಹೇಳಿದರು.
ಆಶೋದಯ ಸಮಿತಿಯು ರಂಗಾಯಣದ ಶ್ರೀರಂಗದಲ್ಲಿ ಲೈಂಗಿಕ ಕಾರ್ಯಕರ್ತರಿಂದ ಮಂಗಳವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಲೈಂಗಿಕ ಕಾರ್ಯಕರ್ತರಲ್ಲಿಯೂ ಇತರರಂತೆ ಪ್ರತಿಭೆಗಳು ಅಡಗಿರುತ್ತವೆ. ಇಂತಹ ಕಲೆಗಳನ್ನು ಸಮಾಜಕ್ಕೆ ತೋರಿಸುವಲ್ಲಿ ಸೂಕ್ತ ಉತ್ತೇಜನ ನೀಡಬೇಕು ಎಂದು ತಿಳಸಿದರು.
ಭಾರತದ ಸುಮಾರು 20ಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ಕಾರ್ಯನಿರ್ವಹಿಸಿ ಬಂದಿರುವ ನಾನು ಈವರೆಗೆ ಲೈಂಗಿಕ ಕಾರ್ಯಕರ್ತರು ನಾಟಕ ಅಭಿನಯಿಸಿರುವ ಉದಾಹರಣೆ ಕಂಡುಬಂದಿಲ್ಲ. ಇದು ಅಪರೂಪ ಹಾಗೂ ವಿನೂತನ ಪ್ರಯತ್ನ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಾಕ್ಷ್ಯ ಚಿತ್ರ ನಿರ್ದೇಶಕ ಬಿ.ಸಿದ್ದೇಗೌಡ ಮಾತನಾಡಿ, ಲೈಂಗಿಕ ಕಾರ್ಯಕರ್ತರ ಕಲೆಯ ಅನಾವರಣಕ್ಕೂ ಸೂಕ್ತ ಸಹಾಯ ಹಾಗೂ ಸಹಕಾರವನ್ನು ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಬೇಕು ಎಂದರು. ಕಲಾವಿಮರ್ಶಕ ಶ್ರೀಕಂಠ ಗುಂಡಪ್ಪ, ಸಮಿತಿ ಖಜಾಂಚಿ ಮಂಜುಳಾ ರಾಮಯ್ಯ, ನಾಟಕದ ನಿರ್ದೇಶಕ ಚಂದ್ರಪ್ರಭಾ ಇದ್ದರು. ಲಿಂಗರಾಜು ಸ್ವಾಗತಿಸಿದರು. ನಂತರ ಸಮಿತಿ ಸದಸ್ಯರು ಬಿ. ಪುಟ್ಟಸ್ವಾಮಯ್ಯ ವಿರಚಿತ ಸಾಮ್ರಾಟ್ ಸುಯೋಧನ ಎಂಬ ಪೌರಾಣಿಕ ನಾಟಕ ಪ್ರದರ್ಶಿಸಿದರು.

ಮುಸುಕಿನ ಜೋಳಕ್ಕೆ ರೋಗ: ನಿಯಂತ್ರಣಕ್ಕೆ ಸಲಹೆ
ಮೈಸೂರು: ಜಿಲ್ಲೆಯಲ್ಲಿ ಜೂ.26 ರಿಂದ 28 ರವರೆಗೆ ಮೋಡ ಕವಿದ ವಾತಾವರಣವಿದ್ದು, ಚದುರಿದಂತೆ ಅಲ್ಲಲ್ಲಿ ತುಂತುರುವಿನಿಂದ ಸಾಧಾರಣ ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಸಮಗ್ರ ಕೃಷಿ ಹವಾಮಾನ ವಿಭಾಗದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು, ಸಹ ಸಂಶೋಧಕ ಎನ್. ನರೇಂದ್ರಬಾಬು ಹೇಳಿದ್ದಾರೆ.
ರೈತರಿಗೆ ಸಲಹೆಗಳು: ತುಂತುರು ಮಳೆ ಮತ್ತು ಮೋಡ ಕವಿದ ವಾತಾವರಣ ಇರುವುದರಿಂದ ಮುಸುಕಿನ ಜೋಳದ ಬೆಳೆಯಲ್ಲಿ ಬೂದು ರೋಗದ ಬಾಧೆ ಕಂಡುಬಂದಿದ್ದು, ಇದರ ಹತೋಟಿಗೆ ರಿಡೋಮಿಲ್ 3 ಗ್ರಾಂ ಔಷಧವನ್ನು ಪ್ರತಿ ಲೀಟರ್ ನೀರಿನಲ್ಲಿ ಸೇರಿಸಿ ಸಿಂಪಡಿಸಬೇಕು. ಮೆಣಸಿನಕಾಯಿ ಬೆಳೆಯಲ್ಲಿ ನುಸಿ ಮತ್ತು ಥಿಪ್ಸ್ ಕಂಡುಬಂದಿದ್ದು, ಇದರ ಹತೋಟಿಗೆ ರೋಗರ್ 17 ಮಿ.ಲೀ. ಮತ್ತು ಡೈಕೋಪಾತ್ 2.5 ಮಿ.ಲೀ. ಔಷಧವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಪಪ್ಪಾಯ ಬೆಳೆಯಲ್ಲಿ ಹಿಟ್ಟು ತಿಗಣೆ ಹುಳುವಿನ ಬಾಧೆ ಕಂಡುಬಂದಿದ್ದು, ಇದರ ಹತೋಟಿಗೆ 0.33 ಮಿ.ಲಿ. ಕಾನ್‌ಫೀಡರ್ ಔಷಧವನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಆಸಕ್ತ ರೈತರು ಮೊ. 8095227713, ದೂ. 2591267.

ಜೂ. 30ರಂದು ತರಬೇತಿ ಕಾರ್ಯಕ್ರಮ
ಮೈಸೂರು: ಎನ್‌ಐಇಯ ಪರಿಸರ ಪ್ರಚಾರ ಮಂಡಳಿ ಮತ್ತು ಶಕುಂತಲರಾವ್ ಸ್ಮಾರಕ ಕೃಷಿ ಉತ್ಥಾನ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಪುಷ್ಪ ಮತ್ತು ಅಲಂಕಾರಿಕ ಸಸ್ಯಗಳ ಬೆಳೆಸುವಿಕೆ, ಪೋಷಣೆ ಮತ್ತು ಪ್ರದರ್ಶನ ಬಗ್ಗೆ ಸಮಗ್ರ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಯೋಜನೆಯ ಮೊದಲ ಹಂತವಾಗಿ ಪ್ರಾರಂಭಿಕ ತರಬೇತಿಯನ್ನು ಜೂ. 30ರ ಬೆಳಗ್ಗೆ 9 ಕ್ಕೆ ಎನ್‌ಐಇ ಗೋಲ್ಡನ್ ಜ್ಯುಬಿಲಿ ಕಾಂಪ್ಲೆಕ್ಸ್‌ನ ಆವರಣದಲ್ಲಿ ಏರ್ಪಡಿಸಿದೆ. ಆಸಕ್ತರು ಜೂ. 28 ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ದೂ 4004925.

ಜು.3ರಿಂದ ಪಿಯುಸಿ ಪೂರಕ ಪರೀಕ್ಷೆ ಬಗ್ಗೆ ಮಾಹಿತಿ
ಕ.ಪ್ರ.ವಾರ್ತೆ ಮೈಸೂರು ಜೂ. 25
ಜು.3 ರಿಂದ 13 ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದ್ದು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಡಿಡಿಪಿಯು ಕೆ.ಎಂ. ಪುಟ್ಟು ಪ್ರಾಂಶುಪಾಲರಿಗೆ ಸೂಚಿಸಿದರು.
ಮಂಗಳವಾರ ನಗರದ ಮಹಾರಾಜ ಕಾಲೇಜಿನಲ್ಲಿ ನಡೆದ 2013-14ನೇ ಸಾಲಿನ ಪ್ರಾಂಶುಪಾಲರ ದ್ವಿತೀಯ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾಖಲಾತಿ, ಮೂಲಭೂತ ಸೌಕರ್ಯ, ವೇಳಾಪಟ್ಟಿ ಹಾಗೂ ಇನ್ನಿತರ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಸಭೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಪಿಯು ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement