ವ್ಯಾಯಾಮದಿಂದ ಮಧುಮೇಹ ತಡೆ ಸಾಧ್ಯ
ಕ.ಪ್ರ.ವಾರ್ತೆ ಟಿ.ನರಸೀಪುರ ಜೂ. 25
ದೈಹಿಕ ವ್ಯಾಯಾಮ ಮತ್ತು ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡು ಮಧುಮೇಹ ರೋಗವನ್ನು ನಿಯಂತ್ರದಲ್ಲಿಡಬೇಕು ಎಂದು ತಲಕಾಡು ಹಸ್ತಿಕೇರಿ ಮಠದ ಡಾ.ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಬೆಂಗಳೂರಿನ ಡಯಾಬಿಟಿಸ್ ಆಸ್ಪತ್ರೆ, ಮೆಡಿಕಲ್ ಎಜುಕೇಷನ್ ರಿಸರ್ಚ್, ಜಯನಗರ ಆಸ್ಪತ್ರೆ, ಮೈಕ್ರೋಲ್ಯಾಬ್ಸ್ ಹಾಗೂ ಭಾರತ್ ವಿಕಾಸ ಪರಿಷತ್ ಪರಾತರ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಹಸ್ತಿಕೇರಿ ಮಠದಲ್ಲಿ ಹಮ್ಮಿಕೊಂಡಿದ್ದ ಮಧುಮೇಹ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಧುಮೇಹ ಎಂಬುದು ಶ್ರೀಮಂತ ವರ್ಗದವರ ಕಾಯಿಲೆ ಎಂದು ಹಿಂದೆ ಹೇಳಲಾಗುತ್ತಿತ್ತು. ಆದರೆ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಶ್ರೀಮಂತರಷ್ಟೇ ಅಲ್ಲ, ಬಡವರು ಕೂಡ ಮಧುಮೇಹ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದರು.
ಕೃಷಿಯಲ್ಲಿ ವಿಷಪೂರಿತ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಹರಡುವ ಕಾಯಿಲೆಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆರೋಗ್ಯ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ಆರೋಗ್ಯ ಸಂಸ್ಥೆಗಳ ಸಹಕಾರವನ್ನು ಪಡೆದುಕೊಂಡು ತಲಕಾಡಿನಲ್ಲಿ ಮಧುಮೇಹ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು. ಕಾಂಗ್ರೆಸ್ ಮುಖಂಡ ಕಾವೇರಿಪುರ ತಾಂಡವಮೂರ್ತಿ ಮಾತನಾಡಿದರು. ಡಾ.ಸಿ. ಮುನಿಚೂಡಪ್ಪ, ಡಾ.ಸುನಂದಮ್ಮ, ಡಾ.ತೃಪ್ತಿ, ವೈಷ್ಣವಿ, ಕಾರ್ಮಲ್, ಗಿರೀಶ್, ಆಶಾ ಇದ್ದರು.