ಈಜುಗೊಳಕ್ಕೆ ಅತ್ಯಾಧುನಿಕ ಜಲಶುದ್ಧೀಕರಣ ಘಟಕ
-ಡಿ.ಎನ್. ಮಹೇಂದ್ರ
ಕ.ಪ್ರ.ವಾರ್ತೆ ಮೈಸೂರು ಜೂ. 26
ಮೈಸೂರು ವಿವಿಯ ಈಜುಗೊಳದಲ್ಲಿ ಅತ್ಯಾಧುನಿಕ ಜಲಶುದ್ಧೀಕರಣ ಘಟಕ ನಿರ್ಮಿಸಲಾಗುತ್ತಿದೆ. ರಾಜ್ಯದ ವಿವಿಗಳ ಪೈಕಿ ಮೈಸೂರು ವಿವಿ ಮಾತ್ರ ಈಜುಗೊಳ ನಿರ್ವಹಿಸುತ್ತಿರುವ ಏಕೈಕ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬಹು ವಿಸ್ತಾರವಾದ ಈಜುಗೊಳ ಇರುವ ಮೈಸೂರು ವಿವಿಯಲ್ಲಿ ಇದುವರೆಗೆ ಉಕ್ಕಿನ ಜಲಶುದ್ಧೀಕರಣ ಘಟಕ ಇತ್ತು. ಆದರೆ ಈಗ ಅತ್ಯಾಧುನಿಕ ತಂತ್ರಜ್ಞಾನದ ಫೈಬರ್ನ ಜಲಶುದ್ಧೀಕರಣ ಘಟಕ ತೆರೆಯಲಾಗುತ್ತಿದೆ. ಕಳೆದ ಒಂದು ತಿಂಗಳಿಂದ ಈಜುಗೊಳ ಬಳಕೆ ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರ ಪ್ರವೇಶ ನಿಷೇಧಿಸಿ, ಜಲಶುದ್ಧೀಕರಣ ಘಟಕ ಕಾಮಗಾರಿ ಆರಂಭಿಸಲಾಗಿದೆ. ಅಂದಾಜು ಸುಮಾರು 50 ಲಕ್ಷ ಮೊತ್ತದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ವಿವಿಗಳು ಈಜುಗೊಳವನ್ನು ನಿರ್ವಹಿಸಲಾಗದೆ ಬಾಗಿಲು ಮುಚ್ಚಿವೆ. ಹಲವು ಕಡೆಗಳಲ್ಲಿ ನಗರ ಪಾಲಿಕೆ, ನಗರಸಭೆ ಅಥವಾ ಖಾಸಗಿ ಸಂಸ್ಥೆಗಳು ನಡೆಸುವ ಈಜುಗೊಳಗಳಷ್ಟೆ ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಬೆಂಗಳೂರಿನಲ್ಲಿ ಬೃಹತ್ ಮಹಾನಗರ ಪಾಲಿಕೆಗೆ ಸೇರಿದ 6 ಈಜುಗೊಳಗಳೂ ಸೇರಿವೆ. ಮೈಸೂರಿನಲ್ಲಿ ಜ್ಞಾನ ಸರೋವರ ಮತ್ತು ಕೌಟಿಲ್ಯ ಮುಂತಾದ ವಿದ್ಯಾಸಂಸ್ಥೆಗಳು ಈಜುಗೊಳ ನಿರ್ಮಿಸಿ ಅತ್ಯಾಧುನಿಕ ಜಲಶುದ್ಧೀಕರಣ ಘಟಕ ತೆರೆದಿವೆ.
ಮೈಸೂರು ವಿವಿ ಮಾತ್ರ: ಆದರೆ ಒಂದು ವಿವಿ ಮಟ್ಟದಲ್ಲಿ ಈಜುಗೊಳವನ್ನು ಆಧುನಿಕ ಯಂತ್ರೋಪಕರಣದೊಂದಿಗೆ ನಿರ್ವಹಣೆ ಮಾಡುತ್ತಿರುವುದು ಮೈಸೂರು ವಿವಿ ಮಾತ್ರ. ಸರಸ್ವತಿಪುರಂನಲ್ಲಿರುವ ಈ ಈಜುಗೊಳದ ನೀರನ್ನು ಶುದ್ಧೀಕರಿಸಲು ಈ ಮುಂಚೆ 24 ಗಂಟೆಗಳು ಬೇಕಿತ್ತು. ಆದರೆ ಈ ಆಧುನಿಕ ಯಂತ್ರದ ಸಹಕಾರದಿಂದ ಕೇವಲ ಏಳೆಂಟು ಗಂಟೆಗಳು ಸಾಕು.
ಈ ಮುಂಚೆ ಬಳಸುತ್ತಿದ್ದ ಯಂತ್ರ ಉಕ್ಕಿನಿಂದ ನಿರ್ಮಾಣವಾಗಿದ್ದರಿಂದ ನೀರಿನಲ್ಲಿ ಹೆಚ್ಚು ಕಾಲ ನೆನೆದು, ಬ್ಲೀಚಿಂಗ್ ಪೌಡರ್, ಕ್ಲೋರಿನ್, ಕಾಪರ್ ಸಲ್ಪೇಟ್, ಸೋಡ ಮುಂತಾದ ರಾಸಾಯನಿಕದಿಂದ ಬಹು ಬೇಗನೆ ತುಕ್ಕು ಹಿಡಿಯುತಿತ್ತು. ಅಲ್ಲದೆ ಜಲಶುದ್ಧಿಗಾಗಿ 24 ಗಂಟೆ ತೆಗೆದುಕೊಳ್ಳುತ್ತಿದ್ದರಿಂದ ಹೆಚ್ಚು ವಿದ್ಯುತ್ ಬಳಕೆ ಆಗುತಿತ್ತು. ಈಗ ಕಡಿಮೆ ಅವಧಿಯಲ್ಲಿ ಶುದ್ಧೀಕರಣ ಕಾರ್ಯಪೂರ್ಣಗೊಳ್ಳಲಿದೆ.
ಫೈಬರ್ನಿಂದ ಆವೃತ್ತವಾದ ಮೂರು ಶೆಲ್ಗಳ ಮೂಲಕ ನೀರು ಶುದ್ಧೀಕರಣವಾಗುತ್ತದೆ. ಇದಕ್ಕಾಗಿ ದೊಡ್ಡದಾದ ಪ್ರತ್ಯೇಕ ಕೋಣೆ ನಿರ್ಮಿಸಲಾಗುತ್ತಿದೆ. ಆಗಸ್ಟ್ ಅಂತ್ಯದ ವೇಳೆಗೆ ಈ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಿದ್ಧವಾಗಬಹುದು ಎಂಬ ವಿಶ್ವಾಸವಿದೆ.