ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಿಲ್ಲೆಯಲ್ಲಿ ಚುರುಕುಗೊಂಡ ಬಿತ್ತನೆ ಕಾರ್ಯ

Srinivasa Murthy VN
Updated On : 26 Jun 2013, 10:57 am

ಕ.ಪ್ರ.ವಾರ್ತೆ ಮೈಸೂರು ಜೂ. 26
ಮೈಸೂರು ಜಿಲ್ಲೆಯಲ್ಲಿ 2013-14ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 4,20,195 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಗುರಿ ಇದ್ದು, ಈವರೆಗೆ ಒಟ್ಟು 2,21,151 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಹಾಗೂ ಬಿತ್ತನೆಯಲ್ಲಿ ಒಟ್ಟು ಶೇ.53 ರಷ್ಟು ಪ್ರಗತಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಆರ್. ಕೃಷ್ಣಯ್ಯ ಹೇಳಿದ್ದಾರೆ.
ಇದರಲ್ಲಿ ಶೇ.72 ರಷ್ಟು ಅಂದರೆ 2,17,299 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಹಾಗೂ ಶೇ.3 ರಷ್ಟು ಅಂದರೆ 3,852 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಪೈಕಿ 37,315 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯ, 44,861 ಹೆಕ್ಟೇರ್ ಪ್ರದೇಶದಲ್ಲಿ ಬೇಳೆಕಾಳು, 8,594 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆಗಳು, 50,174 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದೆ. ಇದಲ್ಲದೆ 78,442 ಹೆಕ್ಟೇರ್ ಪ್ರದೇಶದಲ್ಲಿ ಹೊಗೆಸೊಪ್ಪಿನ ಹಾಗೂ 464 ಹೆಕ್ಟೇರ್ ಕ್ಷೇತ್ರದಲ್ಲಿ ಹೊಸ ಕಬ್ಬಿನ ನಾಟಿ ಕಾರ್ಯ ಪೂರ್ಣಗೊಂಡಿದೆ.
ತಾಲೂಕುವಾರು ಬಿತ್ತನೆಯಾದ ಪ್ರದೇಶ, ಗುರಿಯ ವಿವರ (ಆವರಣದಲ್ಲಿರುವುದು) ಹೆಕ್ಟೇರ್‌ಗಳಲ್ಲಿ ಹಾಗೂ ಶೇಕಡಾವಾರು ಬಿತ್ತನೆ ಪ್ರಗತಿ ವಿವರ ಇಂತಿದೆ- ಎಚ್.ಡಿ. ಕೋಟೆ- 56,178 (69,100) ಶೇ.81 ರಷ್ಟು,  ಹುಣಸೂರು- 53,691 (95,000) ಶೇ. 38 ರಷ್ಟು, ಕೆ.ಆರ್. ನಗರ- 15,795 (57,700) ಶೇ. 27,  ಮೈಸೂರು- 13,139 (34,500) ಶೇ. 38, ನಂಜನಗೂಡು-39,206 (70,200) ಶೇ. 56, ಪಿರಿಯಾಪಟ್ಟಣ- 39,344 (52,450) ಶೇ. 75, ಟಿ. ನರಸೀಪುರ- 3,798 (41,245), ಶೇ. 9 ರಷ್ಟು.
ಜಿಲ್ಲೆಯಲ್ಲಿ ಮುಂಗಾರು ಮಳೆಯಾದ ಪ್ರದೇಶದಲ್ಲಿ ರೈತ ಸಮುದಾಯ ವಿವಿಧ ಬೆಳೆಗಳ ಬಿತ್ತನೆಗಾಗಿ ಭೂಮಿ ತಯಾರಿ ಮತ್ತು ಮುಖ್ಯ ಭೂಮಿ ಸಿದ್ಧಪಡಿಸುವ ಮತ್ತು ಅಗತ್ಯ ಬಿತ್ತನೆ ಬೀಜ, ಗೊಬ್ಬರ ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜೋಳ, ಹತ್ತಿ, ರಾಗಿ, ಮುಸುಕಿನ ಜೋಳ, ದ್ವಿದಳ ಧಾನ್ಯ ಬೆಳೆಗಳು, ನೆಲಗಡಲೆ, ಎಳ್ಳು, ಹರಳು ಬೆಳೆಗಳು ಬೆಳವಣಿಗೆ ಹಂತದಲ್ಲಿವೆ ಮತ್ತು ಬಿತ್ತನೆ ಕಾರ್ಯ ಮುಂದುವಞಜಿದಿದೆ. ಹೊಗೆಸೊಪ್ಪಿನ ನಾಟಿ ಕಾರ್ಯವೂ ಮುಂದುವರಿದಿದೆ.
ಶೇ.90 ರಷ್ಟು ಮಳೆ: ಜಿಲ್ಲೆಯ ಸರಾಸರಿ ವಾರ್ಷಿಕ ವಾಡಿಕೆ ಮಳೆ 766.7 ಮಿ.ಮೀ. ಇದ್ದು, ಜಿಲ್ಲೆಯಲ್ಲಿ ಜನವರಿಯಿಂದ ಜೂ.23 ರವರೆಗೆ 270 ಮಿ.ಮೀ. ವಾಡಿಕೆ ಮಳೆಗೆ ಸರಾಸರಿ 244.1 ಮಿ.ಮೀ. ಮಳೆಯಾಗಿದ್ದು, ಮಳೆ ಪ್ರಮಾಣ ಶೇ.90 ರಷ್ಟು ಆಗಿದೆ. ಜೂನ್‌ನಲ್ಲಿ ಈವರೆಗಿನ 64.8 ಮಿ.ಮೀ. ವಾಡಿಕೆ ಮಳೆಗೆ ಸರಾಸರಿ 81.5 ಮಿ.ಮೀ. ಮಳೆಯಾಗಿದೆ.
ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. 2012ನೇ ಸಾಲಿನಲ್ಲಿ ಜನವರಿಯಿಂದ ಜೂ.23 ರವರೆಗೆ 270 ಮಿ.ಮೀ. ವಾಡಿಕೆ ಮಳೆಗೆ ಸರಾಸರಿ 159.6 ಮಿ.ಮೀ. ಮಾತ್ರ ಮಳೆಯಾಗಿತ್ತು. ಜಿಲ್ಲೆಯಲ್ಲಿ 2013 ಜನವರಿಯಿಂದ ಜೂನ್‌ನಲ್ಲಿ 23ರವರೆಗೆ ತಾಲೂಕುವಾರು ಬಿದ್ದ ಮಳೆಯ ಹಾಗೂ ವಾಡಿಕೆ ಮಳೆಯ ವಿವರ ಮಿ.ಮೀ.ಗಳಲ್ಲಿ ಇಂತಿದೆ.
ಎಚ್.ಡಿ. ಕೋಟೆ- 362.8 (298) ಶೇ.122 ರಷ್ಟು, ಹುಣಸೂರು- 216.1 (270) ಶೇ. 80 ರಷ್ಟು,  ಕೆ.ಆರ್. ನಗರ- 205(263.3) ಶೇ. 78 ರಷ್ಟು, ಮೈಸೂರು- 159.8 (261.8) ಶೇ. 61 ರಷ್ಟು, ನಂಜನಗೂಡು- 206.7 (247) ಶೇ.84 ರಷ್ಟು, ಪಿರಿಯಾಪಟ್ಟಣ- 253.7 (271) ಶೇ.94 ರಷ್ಟು, ಟಿ. ನರಸೀಪುರ-173.8 (252.8) ಶೇ.69 ರಷ್ಟು.
ರಸಗೊಬ್ಬರ ಮತ್ತು ಬಿತ್ತನೆ ಬೀಜ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗಾಗಿ ಒಟ್ಟು 96,300 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸುವ ಗುರಿ ಹೊಂದಿದ್ದು, ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಮತ್ತು ಖಾಸಗಿಯವರ ಪ್ರಾರಂಭಿಕ ದಾಸ್ತಾನು ಸೇರಿದಂತೆ ಈವರೆಗೆ ಒಟ್ಟು 47,802 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಆಗಿದೆ. 22,949 ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆಯಾಗಿದೆ ಹಾಗೂ 24,853 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ.
ಜಿಲ್ಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ ರಿಯಾಯಿತಿ ದರದ 30,421 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸುವ ಗುರಿಯಿದೆ. ಈವರೆಗೆ ದೃಢೀಕೃತ ಹೈಬ್ರೀಡ್ ಜೋಳ ಮತ್ತು ದ್ವಿದಳ ಧಾನ್ಯ ಬೆಳೆಗಳ 2,783 ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜಾಗಿದ್ದು, 1,820 ಕ್ವಿಂಟಾಲ್ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಿದೆ. ಕೆಎಸ್‌ಎಸ್‌ಸಿ, ಎನ್‌ಎಸ್‌ಸಿ ಮತ್ತು ಖಾಸಗಿಯವರಲ್ಲಿ ಒಟ್ಟು 25,258 ಕ್ವಿಂಟಾಲ್ ಬಿತ್ತನೆ ಬೀಜದ ಲಭ್ಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement