ಪಕ್ಷಿ, ಗಿಡ ಮಾತ್ರ ಪರಿಸರವಲ್ಲ: ಅನಂತರಾಮು
ಕ.ಪ್ರ.ವಾರ್ತೆ ಮೈಸೂರು ಜೂ. 26
ಪರಿಸರ ಎಂದರೆ ಪ್ರಾಣಿ, ಪಕ್ಷಿ, ಗಿಡ ಮಾತ್ರವಲ್ಲ ಗಾಳಿ, ನೆಲ ಮತ್ತು ನೀರು ಒಳಗೊಂಡ ಒಟ್ಟು ವ್ಯವಸ್ಥೆ ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಸಂಚಾಲಕ ಆರ್. ಅನಂತರಾಮು ಹೇಳಿದರು.
ರಾಜ್ಯ ವಿಜ್ಞಾನ ಪರಿಷತ್ತು, ಮೈಸೂರು ವಿಜ್ಞಾನ ಕೇಂದ್ರ ಗೋಪಿಕಾ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ನಡೆದ ಅಂತರ್‌ರಾಷ್ಟ್ರೀಯ ಜಲ ಸಹಕಾರ ವರ್ಷ ಹಾಗೂ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಪರಿಸರ ದಿನ ಬರೀ ವನ್ಯ ಸಂಪತ್ತು ಮಾತ್ರವಲ್ಲ ಮಣ್ಣು, ಬೆಳಕು, ವಾಸ ಸ್ಥಳವನ್ನು ಸುಧಾರಿಸುವಂತೆ ಆಗಬೇಕು. ಸ್ವಾತಂತ್ರ್ಯ ಬಂದ ನಂತರ ಅಂದಿನ ಪ್ರಧಾನಮಂತ್ರಿ ನೆಹರು ಅವರ ಸಂಪುಟದಲ್ಲಿದ್ದ ಕೆ.ಎಂ. ಮುನ್ಷಿ ಅವರು ವನಮಹೋತ್ಸವ ಆರಂಭಿಸಿ ಇಂದು ಪರಿಸರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಪರಿಸರ ವಿಚಾರ ಸ್ಥಳೀಯವಾದದ್ದು ಅಲ್ಲ ಜಾಗತಿಕವಾದದ್ದು ಎನ್ನುವ ವಿಚಾರ ನಂತರ ದಿನದಲ್ಲಿ ಗೊತ್ತಾಯಿತು ಎಂದರು.
ಭೂಗರ್ಭ ಹಾಗೂ ಗಣಿ ವಿಭಾಗದ ಉಪ ನಿರ್ದೇಶಕ ಮಹೇಶ್ ಮಾತನಾಡಿ, ಇಂದು ನಾವು ಬಳಸುವ ನೀರು ಎಷ್ಟು ಮುಖ್ಯ ಹಾಗೂ ನೀರಿನ ನಿರ್ವಹಣೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಶ್ರೀಮತಿ ಹರಿಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ದಿನದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಅದನ್ನು ಯುಕ್ತವಾಗಿ ಬಳಸಲು ಮಾರ್ಗೋಪಾಯಗಳನ್ನು ಎಲ್ಲರೂ ಸೇರಿ ಮಾಡಿದಾಗ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ಸಂಸ್ಥೆಯ ಕೃಷ್ಣಸ್ವಾಮಿ, ಮುಖ್ಯ ಶಿಕ್ಷಕಿ ಶಾರದಾಬಾಯಿ ಇದ್ದರು. ನಾಗರಾಜು ಸ್ವಾಗತಿಸಿದರು. ಮಹದೇವು ವಂದಿಸಿದರು.
ನರ್ಮ್ ಮನೆ ಪರಿಶೀಲಿಸಿದ ಸಚಿವ ಅಂಬರೀಷ್
ಕ.ಪ್ರ.ವಾರ್ತೆ ಮೈಸೂರು ಜೂ. 26
ಕೇಂದ್ರ ಸರ್ಕಾರದ ನರ್ಮ್ ಯೋಜನೆಯಡಿ ಕೊಳಚೆ ಪ್ರದೇಶ ನಿವಾಸಿಗಳಿಗಾಗಿ ಮೇದರ್ ಬ್ಲಾಕ್ ಮತ್ತು ಬನ್ನಿಮಂಟಪದಲ್ಲಿ ನಿರ್ಮಿಸಿರುವ ಮನೆಗಳನ್ನು ವಸತಿ ಸಚಿವ ಡಾ.ಎಂ.ಎಚ್. ಅಂಬರೀಷ್ ಬುಧವಾರ ಪರಿಶೀಲಿಸಿದರು.
ನರ್ಮ್ ಯೋಜನೆಯಲ್ಲಿ ಮನೆಗಳನ್ನು ವಿತರಿಸಲಾಗಿದ್ದು, ಸರಿಯಾದ ಮೂಲಭೂತ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ. ಮೂಲ ಸೌಲಭ್ಯ ಒದಗಿಸುವಂತೆ ಸಚಿವರನ್ನು ಫಲಾನುಭವಿಗಳು ಕೋರಿದರು.
ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ, ಕುಡಿಯುವ ನೀರು ಸೌಲಭ್ಯ ಒದಗಿಸಿಲ್ಲ. ಮಕ್ಕಳಿಗೆ ಆಟದ ಮೈದಾನ, ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರ, ಸಮುದಾಯ ಭವನ, ಪ್ರಾಥಮಿಕ ಶಾಲೆ, ಬಸ್ ವ್ಯವಸ್ಥೆ, ವಾಚನಾಲಯ, ಬೀದಿದೀಪ ಸೌಲಭ್ಯ ಕಲ್ಪಿಸಿಕೊಡುವಂತೆ ಮೈಸೂರು ಕೊಳಚೆ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಯತಿರಾಜ್ ಸಚಿವರಿಗೆ ಮನವಿ ಸಲ್ಲಿಸಿದರು.
ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್, ಜಿಲ್ಲಾಧಿಕಾರಿ ಡಾ.ರಾಮೇಗೌಡ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಮಾಜಿ ಮೇಯರ್‌ಗಳಾದ ನಾರಾಯಣ, ಅನಂತ ಇದ್ದರು.