ಹುದ್ದೆ ನಿರ್ವಹಿಸುವ ಗುಣ ಬೆಳೆಸಿಕೊಳ್ಳಲು ಕರೆ
ಕ.ಪ್ರ.ವಾರ್ತೆ ಮೈಸೂರು ಜೂ. 26
ಕೆಲಸ ಸಿಗುವುದಿಲ್ಲ ಎಂಬ ಭಾವನೆಯಲ್ಲಿರುವವರು ಮೊದಲು ಹುದ್ದೆ ನಿರ್ವಹಿಸುವ ಗುಣ ಬೆಳೆಸಿಕೊಂಡರೆ ಉದ್ಯೋಗ ತಾನಾಗಿಯೇ ಲಭಿಸುತ್ತದೆ ಎಂದು ಸರಸ್ವತಿಪುರಂ ಠಾಣೆಯ ಇನ್‌ಸ್ಪೆಕ್ಟರ್ ಎನ್.ಎಸ್. ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಉದ್ಯೋಗ ಮತ್ತು ತರಬೇತಿ ಇಲಾಖೆಯು ಬುಧವಾರ ಏರ್ಪಡಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಎಷ್ಟೇ ಶ್ರಮವಹಿಸಿದರೂ ಕೆಲಸ ಸಿಗುವುದಿಲ್ಲ. ಆದ್ದರಿಂದ ಕಲಿಕೆಯಲ್ಲಿ ಕೌಶಲ್ಯತೆ ಬೆಳೆಸಿಕೊಂಡರೆ ಕೆಲಸ ಸಿಗುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಪೋಟಿಯೇ ಪ್ರಧಾನವಾಗುತ್ತದೆ ಎಂದರು.
ಸತತ ಪರಿಶ್ರಮದಿಂದ ಸಕಲವನ್ನು ತಮ್ಮದಾಗಿಸಿಕೊಳ್ಳಬಹುದು. ಕೆಲಸವಿಲ್ಲದೆ ಬರಿಗೈಯಲ್ಲಿ ಕುಳಿತಿದ್ದ ಎಷ್ಟೋ ಮಂದಿ ಇಂದು ಉನ್ನತ ಸ್ಥಾನಕ್ಕೇರಿದ್ದಾರೆ. ಪ್ರಸ್ತುತ ಸಮಯದಲ್ಲಿ ಕೆಲಸ ಕಾರ್ಯಗಳಿಲ್ಲ ಎಂದು ಯಾರೂ ಸಹ ಅವಕಾಶಗಳನ್ನು ಕೈಚೆಲ್ಲಿ ಕೂರಬಾರದು ಎಂದು ಸಲಹೆ ನೀಡಿದರು. ಲಲಿತ ಮಹಲ್ ಹೋಟೆಲ್, ಹೋಂಡಾ ಪ್ರೈ.ಲಿ., ಸೋನಾ ಟಿವಿಎಸ್, ಹಿಂದುಜಾ ಗ್ಲೋಬಲ್ ಸಲ್ಯೂಷನ್ ಲಿ., ಡಿ.ಆರ್. ರೆಡ್ಡಿ ಫೌಂಡೇಷನ್, ಯೂನಿಕ್ ಡಿಟೆಕ್ಟಿವ್ ಅಂಡ್ ಸೆಕ್ಯೂರಿಟಿ ಸೇರಿದಂತೆ ವಿವಿಧ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದವು. ಉದ್ಯೋಗ ಮತ್ತು ತರಬೇತಿ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವನಾಥ್ ಭರಣಿ, ಚೆನ್ನೂರು ಮಹದೇವ, ಜುಲ್‌ಫಿಕಲ್, ವಿ. ನವೀನ್‌ಕುಮಾರ್, ಗುರುಸ್ವಾಮಿ ಇದ್ದರು. ಮೈಸೂರು ಹಾಗೂ ಹಾಸನ ಜಿಲ್ಲೆಗಳ ಸುತ್ತ ಮುತ್ತಲಿನ ನಗರ ಪ್ರದೇಶಗಳಿಂದ ನೂರಾರು ಮಂದಿ ಉದ್ಯೋಗಾಂಕ್ಷಿಗಳು ಪಾಲ್ಗೊಂಡಿದ್ದರು.
ಮಾದಕ ವಸ್ತುಗಳ ವಿರುದ್ಧ ಜಾಥಾ
ಕ.ಪ್ರ.ವಾರ್ತೆ ಮೈಸೂರು ಜೂ. 26
ಮಾದಕ ವಸ್ತುಗಳ ಬಳಕೆ ಮತ್ತು ಕಳ್ಳ ಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನಾಚರಣೆ ಅಂಗವಾಗಿ 14ನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಹಾಗೂ 1ನೇ ಕರ್ನಾಟಕ ಆರ್ಟಿ ಬೆಟಾಲಿಯನ್ ಎನ್‌ಸಿಸಿ ವತಿಯಿಂದ ಬುಧವಾರ ನಗರದಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಎನ್‌ಸಿಸಿ ಕೆಡೆಟ್‌ಗಳು ಘೋಷಣೆಗಳ ಫಲಕಗಳನ್ನು ಹಿಡಿದು ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. 1ನೇ ಕರ್ನಾಟಕ ಆರ್ಟಿ ಬೆಟಾಲಿಯನ್ ಎನ್‌ಸಿಸಿ ಜಾಥಾಗೆ ಕರ್ನಲ್ ಎಸ್. ಸೆಹಗಲ್ ಚಾಲನೆ ನೀಡಿದರು.
14ನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಜಾಥಾಗೆ ಲೆಫ್ಟಿನೆಂಟ್ ಕರ್ನಲ್ ಅರುಣ್ ಚಾಲನೆ ನೀಡಿದರು. ಎಎನ್‌ಒ ಗೋಪಾಲಕೃಷ್ಣ, ರಜತ್ ಥಾಕೂರ್, ಜಸ್ಪಾಲ್ ಸಿಂಗ್, ಸಬ್ಜಿತ್ ಸಿಂಗ್, ಸುರಿಂದರ್ ಪಾಲ್, ಪಿಟಂ ತಪಾ, ಸತ್ಯಪಾಲ್, ಸುನಿಲ್ ಸಾಕೆಟ್ ಇದ್ದರು.
ಆರೋಗ್ಯ ಭಾಗ್ಯ ಯೋಜನೆ
ಮೈಸೂರು: ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟವು ನಿವೃತ್ತ ಪೊಲೀಸ್ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಭಾಗ್ಯ ಯೋಜನೆ ಸೌಲಭ್ಯ ತಲುಪಿಸುವ ಸಂಬಂಧ ಸಲಹೆ ಸೂಚನೆ ಪಡೆಯಲು ಜೂ.28ರ ಬೆಳಗ್ಗೆ 11ಕ್ಕೆ ತುಮಕೂರು ನಗರದ ಬಿಎಚ್ ರಸ್ತೆಯಲ್ಲಿರುವ ಹೊಯ್ಸಳ ಹೋಟೆಲ್‌ನಲ್ಲಿ ಸಭೆ ಕರೆಯಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಮಾಲೂರಪ್ಪ ತಿಳಿಸಿದ್ದಾರೆ.