'ಎಲ್ಲಾ ಮಕ್ಕಳಿಗೂ ಪ್ರಾಥಮಿಕ ಶಿಕ್ಷಣ ಮುಖ್ಯ'
ಕ.ಪ್ರ.ವಾರ್ತೆ ಮೈಸೂರು ಜೂ. 27
ಸಮಾಜದ ಎಲ್ಲ ವರ್ಗದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವು ನವಜಾತ ಶಿಶುವಿಗೆ ನೀಡುವ ತಾಯಿ ಹಾಲಿನಷ್ಟೆ ಅತ್ಯಮೂಲ್ಯ ಎಂದು ಶಿಕ್ಷಣ ಇಲಾಖೆ ಸಂಪನ್ಮೂಲ ತಜ್ಞ ನರಸಿಂಹ ಅಭಿಪ್ರಾಯಪಟ್ಟರು.
ಇಲ್ಲಿನ ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಹುಣಸೂರಿನ ಶಿಶು ಅಭಿವೃದ್ಧಿ ಯೋಜನೆಯ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಆಜಾದ್ ನಗರದಲ್ಲಿ ಏರ್ಪಡಿಸಿದ್ದ ಸರ್ವ ಶಿಕ್ಷಣ ಅಭಿಯಾನ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳನ್ನು ವಿದ್ಯೆ ಕಲಿಯುವ ವಯಸ್ಸಿನಲ್ಲಿ ದುಡಿಮೆಗೆ ಹಚ್ಚುವುದು ತಪ್ಪು. ಇದರಿಂದಾಗಿ ಅವರ ಹಕ್ಕುಗಳನ್ನು ಕಸಿದಂತಾಗುತ್ತದೆ. ಈ ನಿಟ್ಟಿನಲ್ಲಿ 14 ವರ್ಷದೊಳಗಿನ ಎಲ್ಲ ಮಕ್ಕಳು ಶಾಲೆಯಲ್ಲಿ ವಿದ್ಯೆ ಕಲಿಯಬೇಕೆಂಬ ಮಹತ್ವದ ಉದ್ದೇಶವನ್ನು ಸರ್ವ ಶಿಕ್ಷಣ ಅಭಿಯಾನ ಹೊಂದಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಎಚ್.ಎಂ. ಮಹೇಶ್ ಮಾತನಾಡಿ, ನುರಿತ ಶಿಕ್ಷಕರು, ಹೆಚ್ಚುವರಿ ಶಾಲಾ ಕೊಠಡಿಗಳು, ಉಚಿತ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ.
ಇದರ ಪ್ರಯೋಜನ ಸಮಾಜದ ಎಲ್ಲ ವರ್ಗದ ಜನರು ಪಡೆಯುವಂತೆ ಸಲಹೆ ನೀಡಿದರು. ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು, ಸ್ವ ಸಹಾಯ ಸಂಘದ ಸದಸ್ಯರು, ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈಗಿನಿಂದಲೇ ಪಂಚಲಿಂಗ ದರ್ಶನಕ್ಕೆ ಸಿದ್ಧತೆ
ಕ.ಪ್ರ.ವಾರ್ತೆ ಮೈಸೂರು ಜೂ. 27
ಟಿ.ನರಸೀಪುರ ತಾಲೂಕು ತಲಕಾಡು ಪಂಚಲಿಂಗ ದರ್ಶನ ಸಂಬಂಧ ಜಿಲ್ಲಾಧಿಕಾರಿ ಡಾ.ರಾಮೇಗೌಡ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.
ಈ ಸಭೆಯಲ್ಲಿ ವಿವಿಧ ಇಲಾಖೆಯವರು ಪಂಚಲಿಂಗ ದರ್ಶನ ಸಂದರ್ಭದಲ್ಲಿ ಮಾಡಬೇಕಾದ ಕಾರ್ಯಗಳನ್ನು ವಿವರಿಸಲಾಯಿತು. ಈ ಬಾರಿ ಪಂಚಲಿಂಗ ದರ್ಶನವು ಡಿ.2 ರಿಂದ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಡಾ.ರಾಮೇಗೌಡ ಸೂಚಿಸಿದರು.
ಕುಡಿವ ನೀರು, ಶೌಚಾಲಯ, ವೇದಿಕೆಗಳ ನಿರ್ಮಾಣ, ವಿದ್ಯುತ್ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಬ್ಯಾರಿಕೇಡ್ ಹಾಕುವುದು, ಬಸ್ ಸೌಲಭ್ಯ, ನದಿ ದಡದಲ್ಲಿ ಭಕ್ತಾದಿಗಳ ಸುರಕ್ಷತೆಗಾಗಿ ಅಗತ್ಯ ಕ್ರಮ, ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ನಾಗಾನಾಯಕ್, ಉಪ ವಿಭಾಗಾಧಿಕಾರಿ ಬಸವರಾಜು, ಎಸ್ಪಿ ಅಭಿನವ್ ಖರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ, ಮುಜರಾಯಿ ತಹಸೀಲ್ದಾರ್ ಯತಿರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್. ಮಂಜಪ್ಪ, ಎ.ಆರ್.ಪ್ರಕಾಶ್ ಇದ್ದರು.
ಬಿಜೆಪಿಯಿಂದ 1 ಲಕ್ಷ ಪರಿಹಾರ ನಿಧಿ ಸಂಗ್ರಹ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಜೂ. 27
ಉತ್ತರಾಖಂಡದ ನೆರೆ ಸಂತ್ರಸ್ತರ ನೆರವಿಗಾಗಿ ಮೈಸೂರಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ 1 ಲಕ್ಷ ಹೆಚ್ಚಿನ ಪರಿಹಾರ ನಿಧಿ ಸಂಗ್ರಹಿಸಿದರು. ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರಗಳ ವ್ಯಾಪ್ತಿಯ ಅಗ್ರಹಾರ ವೃತ್ತ, ಚಾಮುಂಡಿಪುರಂ ವೃತ್ತ, ಕುವೆಂಪುನಗರ ಶಾಂತಿಸಾಗರ ವೃತ್ತ, ಗಾಂಧಿಚೌಕ, ಎನ್.ಆರ್. ಮೊಹಲ್ಲಾದ ಮಾರುತಿ ವೃತ್ತದಲ್ಲಿ ನಿಧಿ ಸಂಗ್ರಹಿಸಿದರು. ಮೂರು ಕ್ಷೇತ್ರಗಳಿಂದ 1 ಲಕ್ಷಕ್ಕೂ ಹೆಚ್ಚಿನ ದೇಣಿಗೆ ಸಂಗ್ರಹವಾಗಿದೆ.