ದೊಡ್ಡಹೊನ್ನೂರು ಶಾಲೆಗೆ ಶಿಕ್ಷಕರ ಕೊರತೆ
ಕ.ಪ್ರ.ವಾರ್ತೆ ಬೈಲುಕುಪ್ಪೆ ಜೂ. 27
ಬೈಲಕುಪ್ಪೆ ಗ್ರಾಪಂ ವ್ಯಾಪ್ತಿಯ ದೊಡ್ಡಹೊನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದು, ಈ ವಿಚಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಇತ್ತ ಗಮನ ಹರಿಸುತ್ತಿಲ್ಲ ಎಂದು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ವಿಶ್ವನಾಥ್, ಗ್ರಾಪಂ ಸದಸ್ಯ ಚಂದ್ರೇಶ್ ಆರೋಪಿಸಿದ್ದಾರೆ.
ಇನ್ನೊಂದು ವಾರದಲ್ಲಿ ಶಾಲೆಗೆ ಶಿಕ್ಷಕರನ್ನು ನೇಮಿಸದೇ ಹೋದರೆ ವಿವಿಧ ಸಂಘ ಸಂಸ್ಥೆಗಳ ಜತೆಗೂಡಿ ಶಾಲೆಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ ಅವರು ಎಚ್ಚರಿಸಿದ್ದಾರೆ.
ದೊಡ್ಡಹೊನ್ನೂರು ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಒಟ್ಟು 69 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಿಗೆ ಇಬ್ಬರು ಶಿಕ್ಷಕರು ಮಾತ್ರ ಪಾಠ ಪ್ರವಚನ ಮಾಡುವ ಪರಿಸ್ಥಿತಿ ಇದೆ. ಮುಖ್ಯ ಶಿಕ್ಷಕರು ಕಚೇರಿ ಕೆಲಸ, ಬಿಸಿಯೂಟ ಯೋಜನೆ ಇನ್ನೂ ಮುಂತಾದ ಕೆಲಸಗಳಿಗೆ ಆಗಾಗ ತೆರಳುತ್ತಾರೆ. ಇದರಿಂದ ಪಾಠ ಪ್ರವಚನಕ್ಕೆ ತೊಂದರೆಯಾಗುತ್ತದೆ.
ಕಳೆದ 2-3 ವರ್ಷಗಳಿಂದಲೂ ಅಡಿಗೆ ಮಾಡುವವರು ಒಬ್ಬರೇ ಇದ್ದಾರೆ. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಶಾಲೆಗೆ ಬರುವ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಪರಿಶಿಷ್ಟರು, ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚು. ಶಾಲೆಯ ಪರಿಸ್ಥಿತಿ ತುಂಬಾ ಹೀನಾಯವಾಗಿದ್ದು, ಮಕ್ಕಳಿಗೆ ಆಟದ ಮೈದಾನದ ಕೊರತೆ ಇದೆ. ಶಾಲೆಗೆ ಶಿಕ್ಷಕರನ್ನು ಶೀಘ್ರ ನೇಮಿಸಿ, ಮೂಲಭೂತ ಸೌಲಭ್ಯ ಕಲ್ಪಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಕುಕ್ಕರ್ ಸಿಡಿದು ಗೃಹಿಣಿಗೆ ಗಾಯ
ಹುಣಸೂರು: ಅಡುಗೆಗೆ ಇಟ್ಟಿದ್ದ ಕುಕ್ಕರ್ ಸಿಡಿದ ಪರಿಣಾಮ, ಗ್ಯಾಸ್ ಪೈಪ್ಗೆ ತಗುಲಿ ಬೆಂಕಿ ಹತ್ತಿ ಗೃಹಿಣಿಯೊಬ್ಬರು ಗಾಯಗೊಂಡಿರುವ ಘಟನೆ ಇಲ್ಲಿನ ಎನ್ಇಎಸ್ ಕಾಲೋನಿಯಲ್ಲಿ ಜರುಗಿದೆ. ವಕೀಲ ಪ್ರಕಾಶ್ ಎಂಬವರ ಪತ್ನಿ ಶಶಿಕಲಾ ಗಾಯಗೊಂಡವರು. ಗ್ಯಾಸ್ ಸ್ಟೌವ್ ಮೇಲೆ ಇಟ್ಟಿದ್ದ ಕುಕ್ಕರ್ ಇದ್ದಕ್ಕಿದ್ದಂತೆ ಸಿಡಿದಾಗ ಶಶಿಕಲಾ ಅಡುಗೆ ಮನೆಯೊಳಗೆ ಬಂದರು. ಕುಕ್ಕರ್ ಸಿಡಿದ ಚೂರುಗಳು ಗ್ಯಾಸ್ ಪೈಪಿಗೆ ತಗುಲಿ, ಅಲ್ಲಿಂದ ಹೊರಬಂದ ಗ್ಯಾಸ್ನಿಂದ ಬೆಂಕಿ ಹೊತ್ತಿಕೊಂಡಿತು. ಪಕ್ಕದಲ್ಲಿದ್ದ ಶಶಿಕಲಾ ಅವರ ಮುಖ ಹಾಗೂ ಕೈಕಾಲುಗಳಿಗೆ ಬೆಂಕಿ ತಗುಲಿದೆ. ಮನೆಯಲ್ಲಿ ಪತಿ ಹಾಗೂ ಮಕ್ಕಳು ಹೊರ ಹೋಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಶಶಿಕಲಾ ಅವರನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.