ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪರ್ಯಾಯ ಔಷಧ ಸಂಶೋಧನೆಯಾಗಲಿ

Srinivasa Murthy VN
Updated On : 27 Jun 2013, 11:51 am

ಕ.ಪ್ರ.ವಾರ್ತೆ ಮೈಸೂರು ಜೂ. 27
ಜನರಲ್ಲಿ ಹೆಚ್ಚಾಗುತ್ತಿರುವ ಮೆಟಾಬಾಲಿಕ್ ಕಾಯಿಲೆ ನಿವಾರಣೆಗೆ ಪರ್ಯಾಯ ಔಷಧ ಸಂಶೋಧನೆಯಾಗಲಿ ಎಂದು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಕುಲಪತಿ ಡಾ.ಶ್ರೀಪ್ರಕಾಶ್ ಹೇಳಿದರು.
ಶಾರದಾ ವಿಲಾಸ ಶಿಕ್ಷಣ ಸಂಸ್ಥೆಯ 150 ವಾರ್ಷಿಕೋತ್ಸವದ ಅಂಗವಾಗಿ ಶಾರದಾ ವಿಲಾಸ ಔಷಧ ಮಹಾವಿದ್ಯಾಲಯವು ಮೆಟಾಬಾಲಿಕ್ ಕಾಯಿಲೆ ಕುರಿತಾಗಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಹಾಗೂ ಕಾಲೇಜು ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಜಗತ್ತಿನಲ್ಲಿ 366 ಬಿಲಿಯನ್ ಜನರು ಮೆಟಾಬಾಲಿಕ್ ಸಮಸ್ಯೆಯಿಂದ ಬಳಲುತ್ತಿದ್ದು, ನಮ್ಮ ದೇಶದಲ್ಲಿ 60 ಬಿಲಿಯನ್ ಜನರು ಈ ರೋಗಕ್ಕೆ ತುತ್ತಾಗಿದ್ದಾರೆ. ಇದು ವೈದ್ಯಕೀಯ ರಂಗಕ್ಕೆ ದೊಡ್ಡ ಸವಾಲಾಗಿದೆ. ಇದರ ನಿವಾರಣೆಗಾಗಿ ಪ್ರತಿವರ್ಷ 465 ಬಿಲಿಯನ್ ಡಾಲರ್ ವೆಚ್ಚ ಮಾಡುತ್ತಿದ್ದರೂ ಇದರ ನಿಯಂತ್ರಣ ಸಾಧ್ಯವಾಗಿಲ್ಲ. ಶೇ.5 ಮಂದಿ ಇದಕ್ಕೆ ತುತ್ತಾಗಿರುವುದು ಕಂಡುಬಂದಿದೆ. ಆದ್ದರಿಂದ ಪರ್ಯಾಯ ಔಷಧ ಸಂಶೋಧನೆ ಅವಶ್ಯಕ ಎಂದರು.
ವೆಚ್ಚ ಮಾಡಿದರೂ ಪ್ರಯೋಜನವಿಲ್ಲ: ಜೀವನ ಶೈಲಿಯಿಂದ ಮನುಷ್ಯನ ದೇಹದ ಪಚನ ಕ್ರಿಯೆ ಮೇಲೆ ಉಂಟಾಗುವ ಪ್ರತಿಕೂಲ ರಾಸಾಯನಿಕ ಕ್ರಿಯೆಯಿಂದ ಆಗುವ ಮೆಟಾಬಾಲಿಕ್ ಸಮಸ್ಯೆಯ ತಡೆಗೆ ಭಾರತದಲ್ಲಿಯೂ ಕೋಟ್ಯಂತರ ರು. ವೆಚ್ಚ ಮಾಡುತ್ತಿದ್ದರೂ ನಿರೀಕ್ಷಿತ ಪ್ರಯೋಜನವಾಗಿಲ್ಲ. ವ್ಯಾಯಾಮ, ಆಹಾರ ಪಥ್ಯ ಹಾಗೂ ಜೀವನ ಶೈಲಿಯಲ್ಲಿ ಇಂದು ಬದಲಾವಣೆಯತ್ತ ಜನರು ಮುಂದಾಗಿದ್ದರೂ ಈ ಸ್ವಾಸ್ಥ್ಯ ಸಮಸ್ಯೆಯು ಕಡಿಮೆಯಾಗುತ್ತಿಲ್ಲ ಎಂದು ವಿಷಾದಿಸಿದರು.  
ದೇಶದಲ್ಲಿ 445 ಔಷಧ ಕಾಲೇಜುಗಳಿದ್ದು, ಸುಮಾರು 25 ಸಾವಿರ ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ 55 ಕಾಲೇಜುಗಳಿದ್ದು 3300 ಮಂದಿ ವಿದ್ಯಾರ್ಥಿಗಳಿದ್ದಾರೆ. ಶೇ.90 ಕಾಲೇಜುಗಳು ಖಾಸಗಿ ವಲಯಕ್ಕೆ ಸೇರಿವೆ. ಅವುಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಎಂದು ಅವರು ಶ್ಲಾಘಿಸಿದರು.
ರಾಜೀವ್‌ಗಾಂಧಿ ವಿವಿಯು ಸುಮಾರು 50 ಕೋಟಿ ವೆಚ್ಚದಲ್ಲಿ ಸಂಶೋಧನಾ ಪ್ರಯೋಗಾಲಯ ನಿರ್ಮಿಸುತ್ತಿದೆ.
ಇದು ಅಧ್ಯಾಪಕರಿಗೂ ಹಾಗೂ ವಿದ್ಯಾರ್ಥಿಗಳಿಗೆ ತುಂಬ ಅನುಕೂಲವಾಗಲಿದೆ ಎಂದ ಅವರು, ಔಷಧ ಕಾಲೇಜುಗಳಿಗೆ ನೀಡುವ ಅನುದಾನ ಪಡೆಯಲು ಸಂಬಂಧಿಸಿದ ಸಂಸ್ಥೆಗಳು ಅರ್ಜಿ ಸಲ್ಲಿಸಿ ವಿವಿ ನೀಡುವ ಆರ್ಥಿಕ ನೆರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಹೊರತರಲಾದ ಸಮ್ಮೇಳನದ ಕೈಪಿಡಿ ಹಾಗೂ ಸವಿ ಸಿಂಚನ ಕಾಲೇಜಿನ ವಾರ್ಷಿಕ ಸಂಚಿಕೆಯನ್ನು ಡಾ.ಶ್ರೀಪ್ರಕಾಶ್ ಬಿಡುಗಡೆ ಮಾಡಿದರು. ಅಲ್ಲದೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹಮಾನ ವಿತರಿಸಿದರು.
ರಾಜೀವ್‌ಗಾಂಧಿ ವಿವಿಯ ಸಿಂಡಿಕೇಟ್ ಸದಸ್ಯ ಡಾ.ರವಿರಾಜ್ ಮುಖ್ಯ ಅತಿಥಿಯಾಗಿದ್ದರು. ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಎಸ್. ರವಿಶಂಕರ್ ಇದ್ದರು. ಪ್ರಾಂಶುಪಾಲ ಡಾ. ಹನುಮಂತಚಾರ್ ಜೋಶಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement