ವೈಭವದ ಶ್ರೀಕಂಠೇಶ್ವರ ಸ್ವಾಮಿಯ ಕಾಶಿಯಾತ್ರೆ
ಕ.ಪ್ರ.ವಾರ್ತೆ ನಂಜನಗೂಡು ಜೂ. 27
ದಕ್ಷಿಣ ಕಾಶಿ ಎಂದೆ ಪ್ರಸಿದ್ಧವಾಗಿರುವ ಶ್ರೀಕಂಠೇಶ್ವರಸ್ವಾಮಿಯ ಗಿರಿಜಾಕಲ್ಯಾಣ ಮಹೋತ್ಸವದ ಅಂಗವಾಗಿ ಶ್ರೀಕಂಠನ ಕಾಶಿಯಾತ್ರೆ ಗುರುವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ಶ್ರೀಕಂಠನ ಉತ್ಸವ ಮೂರ್ತಿ ಹಾಗೂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಡಾವಣಗೇರಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕಾಶಿಯಾತ್ರೆಗೆ ಚಾಲನೆ ನೀಡಿದರು.
ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ರಾಜಗೋಪುರ ಮುಂಭಾಗದಿಂದ ಹೊರಟ ಶ್ರೀಕಂಠಶ್ವರನಿಗೆ ವಿಶೇಷವಾಗಿ ಅಲಂಕಾರಗೊಂಡ ಉತ್ಸವಮೂರ್ತಿ ಸಾಂಸ್ಕೃತಿಕ ಕಲಾ ತಂಡಗಳೊಡನೆ ದೇವಾಲಯದ ಸುತ್ತ ಮೆರವಣಿಗೆ ನಡೆಸಿ, ಸಾವಿರಾರು ಭಕ್ತರು ಶ್ರೀಕಂಠನ ದರ್ಶನ ಪಡೆದು ಭಾವ ಪರವಶರಾದರು.
ಮೆರವಣಿಗೆ ಮುಂಚೂಣಿಯಲ್ಲಿ ಗೌರಿ ಆನೆ, ವೀರಗಾಸೆ, ಪೂಜಾಕುಣಿತ, ನಂದಿಧ್ವಜ, ಒಣಕೆ ಕುಣಿತ, ಬೀಸೋ ಕಂಸಾಳೆ, ಯಕ್ಷಗಾನ ಕುಣಿತ, ತಮಟೆಕುಣಿತ, ಗಾರುಡಿ ಗೊಂಬೆ ನೃತ್ಯ ಮಂಗಳ ವಾದ್ಯದೊಡನೆ ಕಲಾ ತಂಡಗಳು ತಮ್ಮ ಕೌಶಲ್ಯ ಪ್ರದರ್ಶಿಸುವ ಮೂಲಕ ಜನ-ಮನ ಸೆಳೆದವು.
ದಂಡ ಹಿಡಿದ 27 ಸೇವಾಕರ್ತರು: ಶ್ರೀಕಂಠನ ದೇವಾಲಯಕ್ಕೆ ರಾಜ್ಯಾದ್ಯಂತ ಆಗಮಿಸಿದ ಸೇವಾ ಕಾರ್ಯಕರ್ತರು ದಂಡ ಹಿಡಿದು ದೇವರ ಉತ್ಸವದ ಮುಂಭಾಗ ದಂಡ ಹಿಡಿದು ಬರುತ್ತಿತ್ತದ್ದು ವಿಶೇಷವಾಗಿತ್ತು.
ಎಇಒ ನಾಗರಾಜು, ಲೆಕ್ಕಾಧೀಕ್ಷಕ ರಾಜು, ದೇವತಾಕಾರ್ಯ ನೆರವೇರಿಸಿದ ಆಗಮಿಕ ನಾಗಚಂದ್ರ ದೀಕ್ಷಿತ್, ದೇವಾಲಯದ ಪ್ರಮುಖ ಎನ್.ಎ. ಸದಾಶಿವ, ನೀಲಕಂಠ ದೀಕ್ಷಿತ್, ಸ್ಥಳ ಪುರೋಹಿತ ಎನ್.ಸಿ. ನಾರಾಯಣ ಜೋಯಿಸ್, ವಿಶ್ವನಾಥ್ ದೀಕ್ಷಿತ್, ಉಗ್ರಾಣದ ಗುಮಸ್ತರು ಶ್ರೀಕಂಠಯ್ಯ, ರಾಕೇಶಕುಮಾರ್, ಮಲ್ಲಿಕಾರ್ಜುನ, ಎನ್.ಎಸ್. ಶಿವನಾಗಪ್ಪ, ಡಿ. ರಾಮಣ್ಣ ಇದ್ದರು.
ಬ್ಯಾಂಕ್ಗಳಿಂದ ಸಾಮಾಜಿಕ ಹೊಣೆಗಾರಿಕೆ ನಿರ್ವಹಣೆ
ಬನ್ನೂರು: ಬ್ಯಾಂಕುಗಳು ಸಾಮಾಜಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾ ಬಂದಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬನ್ನೂರು ಶಾಖೆಯ ವ್ಯವಸ್ಥಾಪಕ ಹೇಮಂತ್ಕುಮಾರ್ ಹೇಳಿದರು.
ಟಿ. ನರಸೀಪುರ ತಾಲೂಕಿನ ಕೊಡಗಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಫ್ಯಾನ್ಗಳ ಸಮರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್ಗಳು ಕೇವಲ ಹಣಕಾಸು ವ್ಯವಹಾರವನ್ನಷ್ಟೇ ಮಾತ್ರವಲ್ಲದೆ ಸಾಮಾಜಿಕ ಹೊಣೆಗಾರಿಕೆಯನ್ನು, ಅತ್ಯುತ್ತಮ ಸೇವೆಗಳನ್ನು ಉತ್ತಮವಾಗಿ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಬ್ಯಾಂಕುಗಳು ಶೈಕ್ಷಣಿಕ ಸಾಲಗಳನ್ನು ವಿತರಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ನೆರವು ದೊರಕಿಸಿಕೊಡಲಾಗುತ್ತಿದೆ. ಶಿಕ್ಷಣದ ನಂತರ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನಿರುದ್ಯೋಗಿಗಳಿಗೆ ವಿವಿಧ ರೀತಿಯ ಸಾಲಸೌಲಭ್ಯಗಳು ಮತ್ತು ಸಹಾಯಧನವನ್ನು ಸರ್ಕಾರ ಕಲ್ಪಿಸಿ ಕೊಡಲಾಗುತ್ತಿದೆ. ವಿದ್ಯಾರ್ಥಿಗಳು ಇವುಗಳ ಉಪಯೋಗ ತಿಳಿದುಕೊಳ್ಳಬೇಕು ಮತ್ತು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ಶಾಲಾ ವತಿಯಿಂದ ಹೇಮಂತಕುಮಾರ್ ಮತ್ತು ಬ್ಯಾಂಕ್ ಅಕೌಂಟೆಂಟ್ ಉದಯಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ಸಿದ್ದೇಶ್ ಮಾತನಾಡಿದರು. ಶಿಕ್ಷಕರ ವೃಂದ ಭಾಗವಹಿಸಿದ್ದರು. ಕೆ. ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು.