'ಮಕ್ಕಳಿಗೆ ಶಿಕ್ಷಣ ತಾಯಿ ಹಾಲಿನಷ್ಟೇ ಮುಖ್ಯ'
ಕ.ಪ್ರ.ವಾರ್ತೆ ಹುಣಸೂರು ಜೂ.28
ಸಮಾಜದ ಎಲ್ಲ ವರ್ಗದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವು ನವಜಾತ ಶಿಶುವಿಗೆ ನೀಡುವ ತಾಯಿ ಹಾಲಿನಷ್ಟೆ ಅತ್ಯಮೂಲ್ಯ ಎಂದು ಶಿಕ್ಷಣ ಇಲಾಖೆ ಸಂಪನ್ಮೂಲ ತಜ್ಞ ನರಸಿಂಹ ಅಭಿಪ್ರಾಯಪಟ್ಟರು.
ಇಲ್ಲಿನ ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಹುಣಸೂರಿನ ಶಿಶು ಅಭಿವೃದ್ಧಿ ಯೋಜನೆಯ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಆಜಾದ್ ನಗರದಲ್ಲಿ ಏರ್ಪಡಿಸಿದ್ದ ಸರ್ವ ಶಿಕ್ಷಣ ಅಭಿಯಾನ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳನ್ನು ವಿದ್ಯೆ ಕಲಿಯುವ ವಯಸ್ಸಿನಲ್ಲಿ ದುಡಿಮೆಗೆ ಹಚ್ಚುವುದು ತಪ್ಪು. ಇದರಿಂದಾಗಿ ಅವರ ಹಕ್ಕುಗಳನ್ನು ಕಸಿದಂತಾಗುತ್ತದೆ. ಈ ನಿಟ್ಟಿನಲ್ಲಿ 14 ವರ್ಷದೊಳಗಿನ ಎಲ್ಲ ಮಕ್ಕಳು ಶಾಲೆಯಲ್ಲಿ ವಿದ್ಯೆ ಕಲಿಯಬೇಕೆಂಬ ಮಹತ್ವದ ಉದ್ದೇಶವನ್ನು ಸರ್ವ ಶಿಕ್ಷಣ ಅಭಿಯಾನ ಹೊಂದಿದೆ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿ ಎಚ್.ಎಂ. ಮಹೇಶ್ ಮಾತನಾಡಿ, ನುರಿತ ಶಿಕ್ಷಕರು, ಹೆಚ್ಚುವರಿ ಶಾಲಾ ಕೊಠಡಿಗಳು, ಉಚಿತ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ ಹಾಗೂ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ. ಇದರ ಪ್ರಯೋಜನ ಸಮಾಜದ ಎಲ್ಲ ವರ್ಗದ ಜನರು ಪಡೆಯುವಂತೆ ಸಲಹೆ ನೀಡಿದರು.
ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು, ಸ್ವ ಸಹಾಯ ಸಂಘದ ಸದಸ್ಯರು, ಮಹಿಳೆಯರು ಭಾಗವಹಿಸಿದ್ದರು.
ವೈಭವದ ಆದಿದೇವತೆ ರಥೋತ್ಸವ
ಬೈಲುಕುಪ್ಪೆ: ತಾಲೂಕಿನ ಚೌಡೇನಹಳ್ಳಿ, ಚನ್ನೇನಹಳ್ಳಿ ಗ್ರಾಮಗಳ ಆದಿದೇವತೆ ದೊಡ್ಡಮ್ಮತಾಯಿ, ಚಿಕ್ಕಮ್ಮತಾಯಿಯ ರಥೋತ್ಸವವು ಬಹಳ ವಿಜೃಂಭಣೆಯಿಂದ ಶುಕ್ರವಾರ ನೆರವೇರಿತು.
ಚೌಡೇನಹಳ್ಳಿಯ ದೊಡ್ಡಮ್ಮತಾಯಿ, ಚನ್ನೇನಹಳ್ಳಿಯ ಚಿಕ್ಕಮ್ಮತಾಯಿ ಇವೆರಡೂ ಉತ್ಸವಮೂರ್ತಿಯನ್ನು ಎರಡೂ ಊರಿನ ಮಧ್ಯ ಭಾಗದಲ್ಲಿ ತಂದು ಪ್ರತಿಷ್ಠಾಪಿಸಿ ಪೂಜಾ ವಿಧಿವಿಧಾನಗಳನ್ನು ನಡೆಸಿ ಎರಡೂ ದೇವತೆಗಳನ್ನು ರಥದಲ್ಲಿ ಕೂರಿಸಿ ವಾದ್ಯಗೋಷ್ಠಿಯೊಂದಿಗೆ ರಥವನ್ನು ಸಾವಿರಾರು ಭಕ್ತರು ಎಳೆದರು. ಊರಿನ ಮುಖಂಡ ಲಕ್ಕಣ್ಣ ಮಾತನಾಡಿ, ಕಳೆದ 50 ವರ್ಷಗಳಿಂದ ರಥೋತ್ಸವವನ್ನು ಬಹಳ ಭಕ್ತಿಯಿಂದ ಎರಡೂ ಊರಿನವರು ಒಗ್ಗಟ್ಟಾಗಿ ನಡೆಸಿಕೊಂಡು ಬಂದಿದ್ದೇವೆ. ಈ ಬಾರಿ ಹೊಸದಾಗಿ ರಥ ನಿರ್ಮಿಸಿ ರಥದಲ್ಲಿ ದೇವತೆಗಳನ್ನು ಕುಳ್ಳಿರಿಸಿ ರಥೋತ್ಸವ ಯಶಸ್ವಿಗೊಳಿಸಲಾಗಿದೆ ಎಂದು ತಿಳಿಸಿದರು.
ಮುಖಂಡರಾದ ಕೆಂಪಲಕ್ಕಣ್ಣ, ಚನ್ನಿಗರಾಯ, ಸಣ್ಣಮೊಗ, ಸಣ್ಣಸ್ವಾಮಿ, ನಲ್ಲೂರಣ್ಣ, ರಂಗಸ್ವಾಮಿ, ರಾಮಲಿಂಗು, ಅಶೋಕ, ಹರೀಶ್, ಗೋವಿಂದ, ಶ್ರೀಕಾಂತ್, ಮಹದೇವ, ಆನಂದ್, ಪ್ರದೀಪ, ಹೇಮಂತ್, ಸತ್ಯನಾರಾಯಣ ಇದ್ದರು.