ಜೂ.12ರೊಳಗೆ ಡೆಂಘೀಯಿಂದ ಮೃತಪಟ್ಟವರಿಗೆ ಮಾತ್ರ ಪರಿಹಾರ
ಮೈಸೂರು: ರಾಜ್ಯದಲ್ಲಿ ಡೆಂಘೀ ಜ್ವರದಿಂದ ಮೃತಪಟ್ಟವರಿಗೆ ಪರಿಹಾರ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರವು ಕಾಲಮಿತಿ ನಿಗದಿಪಡಿಸಿ ಆದೇಶಿಸಿದೆ. ಮೈಸೂರು ತಾಲೂಕು ಡಿ. ಸಾಲುಂಡಿ ಗ್ರಾಮದಲ್ಲಿ ಡೆಂಘೀ ಜ್ವರದಿಂದ ಮೃತಪಟ್ಟ ನಾಲ್ವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪರಿಹಾರ ನಿಧಿಯಿಂದ ತಲಾ 1 ಲಕ್ಷ ಪರಿಹಾರ ಘೋಷಿಸಿದ್ದರು. ಇದಾದ ನಂತರ ರಾಜ್ಯದ ವಿವಿಧೆಡೆ ಡೆಂಘೀ ಜ್ವರದಿಂದ ಕೆಲವರು ಮೃತಪಟ್ಟಿದ್ದರು.
ಈ ನಡುವೆ ಎಲ್ಲರಿಗೂ ಪರಿಹಾರ ನೀಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಜೂ.12ರೊಳಗೆ ಡೆಂಘೀ ಜ್ವರದಿಂದ ಮೃತಪಟ್ಟವರಿಗೆ ಮಾತ್ರ ಪರಿಹಾರ ನೀಡುವುದಾಗಿ, ಜೂ.12ರ ನಂತರ ಮೃತಪಟ್ಟವರಿಗೆ ಪರಿಹಾರ ನೀಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಶನಿವಾರ ಹಮ್ಮಿಕೊಂಡಿದ್ದ ತಮ್ಮ ಕ್ಷೇತ್ರದ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡೆಂಘೀ ಜ್ವರದ ವಿಚಾರ ಪ್ರಸ್ತಾವಾದಾಗ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ ಸರ್ಕಾರ ಆದೇಶ ನೀಡಿರುವುದಾಗಿ ತಿಳಿಸಿದ್ದಾರೆ ಎಂದು ಸಭೆಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಡೆಂಘೀ ಜ್ವರದಿಂದ ಮೃತಪಟ್ಟವರಿಗೆ ಪರಿಹಾರ ನೀಡುವ ವಿಚಾರದಲ್ಲಿ ಕಾಲಮಿತಿ ನಿಗದಿಪಡಿಸಿರುವ ಸರ್ಕಾರದ ಆದೇಶದ ಬಗ್ಗೆ ಶಾಸಕ ಜಿ.ಟಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.