ಕಬಿನಿ ನಾಲೆಗೆ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ನಂಜನಗೂಡು ಜೂ. 30
ಕಬಿನಿ ಜಲಾಶಯ ತುಂಬಿದ್ದು, ಕಬಿನಿ ಬಲದಂಡೆ, ಎಡದಂಡೆ, ಹುಲ್ಲಹಳ್ಳಿ ಹಾಗೂ ರಾಂಪುರ ನಾಲೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಕಾವಲುಪಡೆ ಸಂಘಟನೆ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟಿಸಿದರು.
ಇಲ್ಲಿನ ಚಿಂತಾಮಣಿ ಗಣಪತಿ ದೇವಾಲಯದಿಂದ ಹೊರಟ ಮೆರವಣಿಗೆ ಆರ್.ಪಿ. ರಸ್ತೆ, ಎಂಜಿಎಸ್ ರಸ್ತೆ ಮೂಲಕ ಹಾದು ನೀರಾವರಿ ಇಲಾಖೆ ಹಾಗೂ ತಹಸೀಲ್ದಾರ್ ಕಚೇರಿಗೆ ತೆರಳಿ ಶನಿವಾರ ಮನವಿ ಪತ್ರ ಸಲ್ಲಿಸಿ ನಂತರ ಕೊನೆಗೊಂಡಿತು.
ಸಮಿತಿ ಅಧ್ಯಕ್ಷ ಡಿ.ಆರ್. ಧರ್ಮೇಂದ್ರ ಮಾತನಾಡಿ, ರೈತರ ಬಾಳು ಹಸನಾಗಲು ನಾಲೆಗಳಿಗೆ ಕೂಡಲೆ ನೀರು ಹರಿಸಬೇಕು ಹಾಗೂ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಧ್ಯಕ್ಷ ಶ್ರೇಯಸ್‌ಗೌಡ, ಮುಖಂಡರಾದ ಎಂ. ಮಂಜು, ಪ್ರಮೋದ್‌ಗೌಡ, ಗಿರೀಶ್, ಮಂಜುಗೌಡ, ಲಿಂಗರಾಜು, ಉಮೇಶ್, ಸೋಮು, ಸಯೀದ್, ಶಿವು, ಶ್ರೀಕಾಂತ್, ರಮೇಶ್, ಚಿಕ್ಕಣ್ಣ, ಕಾರ್ಯಕರ್ತರು ಪಾಲ್ಗೊಂಡಿದ್ದರು.
ದೂರು ಸ್ವೀಕರಿಸದ ಪೊಲೀಸರು: ಆರೋಪ
ಕ.ಪ್ರ.ವಾರ್ತೆ ಬನ್ನೂರು ಜೂ.30
ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಬನ್ನೂರು ಠಾಣೆ ಪೊಲೀಸರು ದೂರು ಸ್ವೀಕರಿಸದೇ ಮಾನವ ಹಕ್ಕು ಉಲ್ಲಂಘಿಸಿದ್ದಾರೆ ಎಂದು ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆಯ ಜಿಲ್ಲಾಧ್ಯಕ್ಷೆ ಪುಷ್ಪಾ ಶಂಭುಕುಮಾರ್ ಆರೋಪಿಸಿದ್ದಾರೆ. ಗೊರವರಹಳ್ಳಿ ಗ್ರಾಪಂ ಸದಸ್ಯ ಬೆಣ್ಣೆ ಮಹದೇವ ಮತ್ತು ಸಂಬಂಧಿಕರು ಸೇರಿಕೊಂಡು ಅದೇ ಗ್ರಾಮದ ಸೋಮಶೇಖರ್ ಮತ್ತು ಸಂಬಂಧಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಸೋಮಶೇಖರ್ ಅವರು ಬನ್ನೂರು ಠಾಣೆ ಪೊಲೀಸರಿಗೆ ನೀಡಿದ ದೂರು ಸ್ವೀಕರಿಸಿಲ್ಲ ಎಂದು ದೂರಿದ್ದಾರೆ.