ಗ್ರಾಮೀಣ ಜನರಿಗೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ
ಮಾನವ ಶರೀರ- ಯಂತ್ರ ಪ್ರಾಣಾಯಾಮ- ತಂತ್ರ ಕೃತಿ ಲೋಕಾರ್ಪಣೆಯಲ್ಲಿ ಸಚಿವ ಎಚ್.ಕೆ. ಪಾಟೀಲ್
ಕನ್ನಡಪ್ರಭ ವಾರ್ತೆ ಮೈಸೂರು ಜೂ. 30
ಗ್ರಾಮೀಣ ಜನರಿಗೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ಒದಗಿಸುವ ಬಗ್ಗೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮೀಣ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಭಾರತೀ ಪ್ರಕಾಶನವು ಜಯಲಕ್ಷ್ಮೀಪುರಂನ ವಿವೇಕಾನಂದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ನಿವೃತ್ತ ಪ್ರಾಧ್ಯಾಪಕ ಪಾ.ಲ. ಸುಬ್ರಹ್ಮಣ್ಯ ಅವರ ಮಾನವ ಶರೀರ- ಯಂತ್ರ ಪ್ರಾಣಾಯಾಮ- ತಂತ್ರ ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ ಪಡೆಯಲು ದುಬಾರಿ ವೆಚ್ಚ ಮಾಡಬೇಕಿದೆ. ಇದರಿಂದಾಗಿ ಗ್ರಾಮೀಣ ಬಡ ಜನರು ಚಿಕಿತ್ಸೆ ಪಡೆಯಲು ಅಸ್ಪತ್ರೆಗೆ ಹೋಗುವುದು ಒಂದೇ, ಸಾಯುವುದು ಒಂದೇ ಎಂಬ ಮನೋಭಾವ ಹೊಂದಿದ್ದಾರೆ. ಆದ್ದರಿಂದ ಗ್ರಾಮೀಣ ಜನರಿಗೆ ಸುಲಭವಾಗಿ ಆರೋಗ್ಯ ಒದಗಿಸಬೇಕಿದೆ ಎಂದರು.
ಈ ಹಿಂದೆ ಎಚ್. ವಿಶ್ವನಾಥ್ ಸಚಿವರಾಗಿದ್ದಾಗ ಸಹಕಾರಿ ಬ್ಯಾಂಕುಗಳಲ್ಲಿ ಸದಸ್ಯರಾದವರಿಗೆ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಿದರು. ಅದು ತುಂಬ ಉಪಯುಕ್ತವಾಗಿದೆ. ಆದರೆ, ಸಹಕಾರಿ ಬ್ಯಾಂಕ್ನಲ್ಲಿ ಸದಸ್ಯರಲ್ಲದ ಸಾಮಾನ್ಯ ಜನರಿಗೂ ಇಂತಹ ಪ್ರಯೋಜನ ದೊರಕಬೇಕಿದೆ. ಆದ್ದಿರಂದ ಎಲ್ಲಾ ಗ್ರಾಮೀಣ ಜನರಿಗೂ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ದೊರಕಿಸುವ ಪ್ರಸ್ತಾಪನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ಮುಂದಿನ ಮುಂಗಡ ಪತ್ರದಲ್ಲಿ ಅದನ್ನು ಪ್ರಕಟಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಪುಸ್ತಕ ಕುರಿತು ಶಿಕ್ಷಣ ತಜ್ಞ ಡಿ.ಆರ್. ಪಾಟೀಲ್ ಮಾತನಾಡಿದರು. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್. ರಘು ಅಧ್ಯಕ್ಷತೆ ವಹಿಸಿದ್ದರು. ಎಂಡಿಎ ಆಯುಕ್ತ ಡಾ. ಸಿ.ಜಿ. ಬೆಟ್ಸೂರ್ಮಠ್, ಡಿಸಿಪಿ ಬಸವರಾಜ ವೈ. ಮಾಲಗತ್ತಿ ಮುಖ್ಯ ಅತಿಥಿಗಳಾಗಿದ್ದರು. ಲೇಖಕ ಪಾ. ಲ. ಸುಬ್ರಹ್ಮಣ್ಯ ಇದ್ದರು.