ಕೃಷ್ಣರಾಜದಲ್ಲಿ ಜೆಡಿಎಸ್ ಸೋಲಿಗೆ ಕ್ಷೇತ್ರಾಧ್ಯಕ್ಷರೇ ಕಾರಣ: ಆರೋಪ
ಕ.ಪ್ರ.ವಾರ್ತೆ ಮೈಸೂರು ಮೇ 16
ಕೃಷ್ಣರಾಜ ಕ್ಷೇತ್ರದಲ್ಲಿ ಜೆಡಿಎಸ್ ಹೀನಾಯ ಸೋಲಿಗೆ ಕ್ಷೇತ್ರದ ಅಧ್ಯಕ್ಷ ಎಂ. ಬಸವರಾಜು ಅವರ ಸ್ವಜಾತಿ ಪ್ರೇಮ ಕಾರಣ ಎಂದು ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮಹೇಶ್‌ಕುಮಾರ್ ತಿಳಿಸಿದ್ದಾರೆ.
ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್. ವಾಸು ಅವರು ಹೀನಾಯವಾಗಿ ಸೋಲು ಅನುಭವಿಸಲು ಪಕ್ಷದ ಕ್ಷೇತ್ರಾಧ್ಯಕ್ಷ ಬಸವರಾಜು ಅವರ ಸ್ವಜಾತಿ ಪ್ರೇಮ ಪ್ರಮುಖ ಕಾರಣ. ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ. ಸೋಮಶೇಖರ್ ಅವರು ತಮ್ಮ ಜಾತಿಯವರು ಎಂಬ ಕಾರಣಕ್ಕೆ ಜೆಡಿಎಸ್ ಪ್ರಚಾರದ ಕಾರ್ಯವೈಖರಿಯ ಮಾಹಿತಿಯನ್ನು ನೀಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ಕ್ಷೇತ್ರದ ಪದಾಧಿಕಾರಿಗಳಿಗೆ ಪಕ್ಷ ತೊರೆಯಲು ಪರೋಕ್ಷವಾಗಿ ಪ್ರೇರಣೆ ನೀಡಿ ಆ ಮೂಲಕ ಕ್ಷೇತ್ರದಲ್ಲಿ ಪಕ್ಷವನ್ನು ಬಲಹೀನಗೊಳಿಸುವ ಹುನ್ನಾರ ಮಾಡಿ ಎಂ.ಕೆ. ಸೋಮಶೇಖರ್ ಗೆಲವಿಗೆ ಕಾರಣರಾಗಿದ್ದಾರೆ. ಬಸವರಾಜು ಜೆಡಿಎಸ್‌ನಲ್ಲಿದ್ದರೂ ಕ್ಷೇತ್ರದ ಪ್ರಚಾರಕ್ಕೆ ಎಂ.ಕೆ. ಸೋಮಶೇಖರ್ ಅವರ ಸೂಚನೆ ಪಾಲಿಸುತ್ತಿದ್ದರು. ಕುರುಬ ಜನಾಂಗ ವಾಸಿಸುವ ಕ್ಷೇತ್ರ ವ್ಯಾಪ್ತಿಯ ಹೊಸಬಂಡಿಕೇರಿ, ಹುಲ್ಲಿನಬೀದಿ, ಕುರುಬಾರಹಳ್ಳಿ, ಕನಕಗಿರಿ, ಗುಂಡೂರಾವ್ ನಗರ, ಜನತಾ ನಗರ ಮುಂತಾದ ಪ್ರದೇಶಗಳಿಗೆ ಅಭ್ಯರ್ಥಿ ವಾಸು ಅವರನ್ನು ಪ್ರಚಾರಕ್ಕೆ ಕರೆದುಕೊಂಡು ಹೋಗದಿರುವುದು ಇದಕ್ಕೆ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.
ಈಗಲಾದರೂ ಸ್ವಜಾತಿ ರಾಜಕೀಯ ಮಾಡುತ್ತಿರುವ ಕ್ಷೇತ್ರದ ಅಧ್ಯಕ್ಷ ಎಂ. ಬಸವರಾಜು ಹಾಗು ನಿಷ್ಕ್ರಿಯರಾಗಿರುವ ಬಿ.ಜಿ. ಸಂತೋಷ್ ಅವರನ್ನು ವಜಾ ಮಾಡದಿದ್ದರೆ ನಗರ ಜೆಡಿಎಸ್ ಅಧ್ಯಕ್ಷ ರಾಜಣ್ಣ ವಿರುದ್ಧ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಆಧುನಿಕತೆಯಲ್ಲಿ ಯಂತ್ರ ಕಲಿಕೆ ಕಾರ್ಯಾಗಾರ
ಕ.ಪ್ರ.ವಾರ್ತೆ ಮೈಸೂರು ಮೇ 16
ಎಸ್‌ಜೆಸಿಇ ಕಾಲೇಜಿನ ಸುವರ್ಣ ಮಹೋತ್ಸವ ಅಂಗವಾಗಿ ವಿದ್ಯಾಸಂಸ್ಥೆಯ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಇತ್ತೀಚಿನ ಆಧುನಿಕತೆಯಲ್ಲಿ ಯಂತ್ರ ಕಲಿಕೆಗಳು ಕುರಿತ ಕಾರ್ಯಾಗಾರ ಏರ್ಪಡಿಸಿತ್ತು.
ಕಾರ್ಯಾಗಾರಕ್ಕೆ ಮೈಸೂರು ವಿವಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ಜಿ. ಹೇಮಂತಕುಮಾರ್ ಚಾಲನೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ. ಸಂಗಮೇಶ್ವರ ಅಧ್ಯಕ್ಷತೆ ವಹಿಸಿದ್ದರು.
ಮೆಶಿನ್ ಲರ್ನಿಂಗ್ ವಿಷಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಶೋಧನಾರ್ಥಿಗಳು, ಶೈಕ್ಷಣಿಕ ತಜ್ಞರು, ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು 60 ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ ಸಂಶೋಧನಾರ್ಥಿಗಳು, ಶೈಕ್ಷಣಿಕ ತಜ್ಞರಿಗೆ ಅನುಕೂಲವಾಗುವಂತೆ ಡೇಟಾ ಮೈನಿಂಗ್, ಕಂಪ್ಯೂಟರ್ ವಿಶನ್, ಇನ್‌ಫಾರ್ಮೇಶನ್ ರಿಟ್ರೀವಲ್, ಗೇಮ್ ಥಿಯರಿ, ಸಂಖ್ಯಾಶಾಸ್ತ್ರ, ಕಾಂಪ್ಯುಟೇಶನಲ್ ಕಾಂಪ್ಲೆಕ್ಸಿಟಿ, ಕಂಟ್ರೋಲ್ ಥಿಯರಿ ವಿಷಯಗಳ ಮೇಲೆ ತಜ್ಞರಿಂದ ಉಪನ್ಯಾಸ ಮತ್ತು ಚರ್ಚೆ ನಡೆಯಿತು.
ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಸಿ.ಎನ್. ರವಿಕುಮಾರ್ ಸ್ವಾಗತಿಸಿದರೆ, ಡಾ. ಬಿ.ಎಸ್. ಕಾರ್ಯಾಗಾರದ ಪರಿಚಯ ಮಾಡಿಕೊಟ್ಟರು.