ಕೆಜೆಪಿ ಅಭ್ಯರ್ಥಿ ತಟಸ್ಥ: ಯಾರಿಗೆ ಲಾಭ?
-ವಿಶೇಷ ವರದಿ
ಮೈಸೂರು: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದ ಮಾಜಿ ಶಾಸಕ ಎಚ್.ಸಿ. ಬಸವರಾಜು ಅವರನ್ನು ತಟಸ್ಥವಾಗಿರುವಂತೆ ರಾಜ್ಯ ವರಿಷ್ಠರು ಸೂಚಿಸಿದ್ದು, ಇದರ ಲಾಭ ಯಾರಿಗೆ ಎಂಬ ಚರ್ಚೆ ಆರಂಭವಾಗಿದೆ.
ಬಿಜೆಪಿ ಅಭ್ಯರ್ಥಿ ಸಣ್ಣಮೊಗೇಗೌಡರ ನಿಧನದ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಚುನಾವಣೆಯನ್ನು ಮೇ 28ಕ್ಕೆ ಮುಂದೂಡಲಾಗಿದೆ. ಕಣದಲ್ಲಿ ಕಾಂಗ್ರೆಸ್ನ ಮಾಜಿ ಸಚಿವ ಕೆ. ವೆಂಕಟೇಶ್, ಜೆಡಿಎಸ್ನ ಕೆ. ಮಹದೇವ್, ಬಿಎಸ್ಆರ್ ಕಾಂಗ್ರೆಸ್ನ ಎಚ್.ಡಿ. ಗಣೇಶ್, ಕೆಜೆಪಿಯ ಎಚ್.ಸಿ. ಬಸವರಾಜು, ಬಿಎಸ್ಪಿಯ ಕೃಷ್ಣ, ಎಸ್ಜೆಪಿಯ ನಾರಾಯಣ, ಪಕ್ಷೇತರರಾದ ಕೆ.ಎಸ್. ಶಶಿಕುಮಾರ್ ಕಣದಲ್ಲಿದ್ದರು. ಚುನಾವಣಾ ಆಯೋಗ ಬಿಜೆಪಿಯ ಆರ್.ಟಿ. ಸತೀಶ್ ಅವರಿಗೆ ಮಾತ್ರ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿತ್ತು. ನಾಮಪತ್ರ ಸಲ್ಲಿಕೆ, ವಾಪಸಾತಿಯ ಅವಧಿ ಮುಗಿದ ನಂತರ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಮತ್ತೆ ಪ್ರಚಾರ ನಡೆಸುತ್ತಿದ್ದವು. ರಾಜ್ಯದಲ್ಲಿ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದರಿಂದ ಇಲ್ಲಿ ಶತಾಯಗತಾಯ ಗೆಲ್ಲಬೇಕು ಎಂದು ವೆಂಕಟೇಶ್ ಹೋರಾಟ ನಡೆಸುತ್ತಿದ್ದಾರೆ. ಗೆದ್ದಲ್ಲಿ ತಮಗೆ ಮಂತ್ರಿ ಸ್ಥಾನ ಸಿಗುತ್ತದೆ, ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಆಗುತ್ತದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತ ಜೆಡಿಎಸ್ನ ಕೆ. ಮಹದೇವ್ ಈ ಬಾರಿ ಪಕ್ಷಕ್ಕೆ ಅಧಿಕೃತ ಪ್ರತಿಪಕ್ಷ ಸ್ಥಾನಮಾನ ಗಟ್ಟಿ ಮಾಡಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಕೈಬಲಪಡಿಸಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಇವತ್ತಿನಿಂದ ಎಚ್.ಡಿ. ಕುಮಾರಸ್ವಾಮಿ ಅವರ ಕೂಡ ಪ್ರಚಾರ ಆರಂಭಿಸಿದ್ದಾರೆ. ಸಿದ್ದರಾಮಯ್ಯ ಅವರ ಕೋಟಾ ಮುಗಿದಿದೆ. ಹೀಗಾಗಿ ತಾಲೂಕಿನಲ್ಲಿ ಹಿಂದುಳಿದ ವರ್ಗದವರನ್ನು ಗೆಲ್ಲಿಸಿ ಎಂದು ಬಿಎಸ್ಆರ್ ಕಾಂಗ್ರೆಸ್ನ ಎಚ್.ಡಿ. ಗಣೇಶ್ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯ ಹೊಸ ಅಭ್ಯರ್ಥಿ ಆರ್.ಟಿ. ಸತೀಶ್ ಅವರನ್ನು ಮುಂದಿಟ್ಟುಕೊಂಡು ಹೊಸ ಹುಮ್ಮಸ್ಸಿನಿಂದ ಪ್ರಚಾರ ಮಾಡುತ್ತಿದೆ.
ಕಾರಣ ಗೊತ್ತಿಲ್ಲ: ಕೆಜೆಪಿ ವರಿಷ್ಠರು ಬಸವರಾಜು ಅವರನ್ನು ತಟಸ್ಥವಾಗಿರುವಂತೆ ಸೂಚಿಸಿರುವುದು ನಾನಾ ರೀತಿಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ನಮ್ಮ ತಂದೆ ಎಚ್.ಎಂ. ಚನ್ನಬಸಪ್ಪ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು, ನೀರಾವರಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ನಾನು ಕೂಡ 1999 ರಲ್ಲಿ ಬಿಜೆಪಿ ಟಿಕೆಟ್ ಮೇಲೆ ಗೆದ್ದಿದ್ದೆ. 2004ರಲ್ಲಿ ಜನತಾಪಕ್ಷದ ಟಿಕೆಟ್ ಮೇಲೆ ಸ್ಪರ್ಧಿಸಿ ಸೋತೆ. 2008ರಲ್ಲಿ ಸ್ಪರ್ಧಿಸಲಿಲ್ಲ. ಈ ಬಾರಿ ಗೆಲ್ಲುವ ವಿಶ್ವಾಸದಿಂದಲೇ ಪ್ರಚಾರ ಮಾಡುತ್ತಿದ್ದೆ. ಆದರೆ ವರಿಷ್ಠರು ಈ ರೀತಿ ಏಕೆ ಹೇಳಿದ್ದಾರೆ ಗೊತ್ತಿಲ್ಲ ಎಂದು ಬಸವರಾಜು ಕನ್ನಡಪ್ರಭಕ್ಕೆ ತಿಳಿಸಿದರು. ಕಾರ್ಯಕರ್ತರ ಸಭೆ ನಡೆಸಿ, ಅವರು ಹೇಳಿದಂತೆ ತೀರ್ಮಾನಿಸುವುದಾಗಿ ಹೇಳಿದರು. ಅದರಂತೆ ಬಸವರಾಜು ಕಾರ್ಯಕರ್ತರ ಸಭೆ ನಡೆಸಿದರು. ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯದಂತೆ ಕಾರ್ಯಕರ್ತರು ಆಗ್ರಹಿಸಿದರು. ಬಸವರಾಜು ಅವರು ವರಿಷ್ಠರ ತೀರ್ಮಾನ ವಿವರಿಸಿದಾಗ, ನಿರ್ಧಾರ ನಿಮಗೆ ಬಿಡುತ್ತೇವೆ. ಯೋಚಿಸಿ, ತೀರ್ಮಾನಕ್ಕೆ ಬನ್ನಿ ಎಂದರು. ಹೀಗಾಗಿ ಒಂದು ದಿನದ ಮಟ್ಟಿಗೆ ಯೋಚಿಸಿ, ತೀರ್ಮಾನ ಮಾಡುತ್ತೇನೆ ಎಂದು ಬಸವರಾಜು ಹೇಳಿದ್ದಾರೆ.