ಮೋಟಮ್ಮಗೆ ಸ್ಥಾನ ನೀಡಲು ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಮೇ 26
ವಿಧಾನಪರಿಷತ್ ಸದಸ್ಯೆ ಮೋಟಮ್ಮ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲು ಆಗ್ರಹಿಸಿ ದಲಿತ ವಿದ್ಯಾರ್ಥಿ ಒಕ್ಕೂಟದವರು ಮಾನಸಗಂಗೋತ್ರಿ ಗಾಂಧಿಭವನದ ಎದುರು ಭಾನುವಾರ ಪ್ರತಿಭಟಿಸಿದರು.
ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ ಅವರನ್ನು ಪಕ್ಕಕ್ಕೆ ಸರಿಸಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದೆ.
ದಲಿತ ಮಹಿಳಾ ನಾಯಕಿಯಾದ ಮೋಟಮ್ಮ ಅವರಿಗೆ ಸಂಪುಟದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಮೋಟಮ್ಮ ಅವರಿಗೆ ಅವಕಾಶ ನೀಡದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸಬೇಕಾಗುತ್ತದೆ. ಆ ಮೂಲಕ ದಲಿತರ ಶಕ್ತಿ ತೋರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಒಕ್ಕೂಟದ ಅಧ್ಯಕ್ಷ ಮನೋಜ್ಕುಮಾರ್, ರಾಜ್ಯ ಪ್ರಜಾಸತ್ತಾತ್ಮಕ ಯುವ ವೇದಿಕೆ ಅಧ್ಯಕ್ಷ ನಾಗರಾಜ್ ನೇತೃತ್ವ ವಹಿಸಿದ್ದರು.
ಕಸರತ್ತು ಕ್ರೀಡಾ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ
ಕ.ಪ್ರ.ವಾರ್ತೆ ಮೈಸೂರು ಮೇ 26
ಡಾ.ಬಿ. ಆರ್. ಅಂಬೇಡ್ಕರ್ ಅವರ 122ನೇ ಜನ್ಮದಿನದ ಅಂಗವಾಗಿ ಜಿಲ್ಲಾಮಟ್ಟದ ಬೆಂಚ್ಪ್ರೆಸ್ ಕ್ರೀಡಾ ಸ್ಪರ್ಧೆಯನ್ನು ಇಲ್ಲಿನ ವಿದ್ಯಾರಣ್ಯಪುರಂನ ಶ್ರೀರಾಮಮಂದಿರದಲ್ಲಿ ಭಾನುವಾರ ನಡೆಸಲಾಯಿತು.
ಕರ್ನಾಟಕ ದೀನ ದಲಿತರ ಕ್ರೀಡಾ ಸಂಘ ಏರ್ಪಡಿಸಿದ್ದ ಸಂಘದ 3ನೇ ವಾರ್ಷಿಕೋತ್ಸವ ಹಾಗೂ ಕ್ರೀಡಾ ಸ್ಪರ್ಧೆಯನ್ನು ನಗರ ಪಾಲಿಕೆ ಸದಸ್ಯೆ ಉಮಾಮಣಿ ಉದ್ಘಾಟಿಸಿದರು.
ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ನವೀನ್, ರಾಷ್ಟ್ರೀಯ ಪವರ್ ಲಿಫ್ಟರ್ ಅಶ್ವಥ್ನಾರಾಯಣ್, ಸ್ಪೀಟ್ ಝೂನ್ ಜಿಮ್ ಮಾಲೀಕ ಅವಿನಾಶ್ ಹಾಗೂ ಲಯನ್ ಜಿಮ್ ಮಾಲೀಕ ಚೇತನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎನ್. ಈಶ್ವರ್, ಪವರ್ ಲಿಫ್ಟಿಂಗ್ನಲ್ಲಿ ಮೂರು ವಿಭಾಗಗಳಿದ್ದು, ಇದರಲ್ಲಿ ಬೆಂಚ್ಪ್ರೆಸ್ ಕೂಡ ಕಸರತ್ತಿನ ಒಂದು ಭಾಗ. ಇದೇ ಮೊದಲ ಬಾರಿಗೆ ಮೈಸೂರಲ್ಲಿ ಇಂತಹ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಮೈಸೂರು ನಗರದಲ್ಲಿನ 48 ಜಿಮ್ಗಳಿಂದ ಸುಮಾರು 100ಕ್ಕೂ ಹೆಚ್ಚು ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಬೆಂಚ್ಪ್ರೆಸ್ನಲ್ಲಿ ಸುಮಾರು 25 ವಿಧದ ಕಸರತ್ತುಗಳಿದ್ದು, ಇದರಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಪ್ರತಿ ವಿಭಾಗದಲ್ಲಿ ಮೂರು ಬಹುಮಾನ ನೀಡಲಾಗುವುದು. ಅಲ್ಲದೆ ಸಮಗ್ರ ಪ್ರದರ್ಶನದಲ್ಲಿ ಉತ್ತಮ ಸಾಧಕರಿಗೆ ಶಕ್ತಿಶಾಲಿ ಮನುಷ್ಯ (ಸ್ಟ್ರಾಂಗ್ ಮೆನ್) ಎಂಬ ಬಿರುದು ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಗಂಗಾಧರ್, ಕಾರ್ಯದರ್ಶಿ ಜಯಶಂಕರ್, ಸಹಕಾರ್ಯದರ್ಶಿ ಪ್ರೇಮ್ ಇದ್ದರು.