ಸಾಹಿತಿಗಳಲ್ಲಿ ಸಾಮಾಜಿಕ ಬದ್ಧತೆ ಕ್ಷೀಣ
ಕ.ಪ್ರ.ವಾರ್ತೆ ಮೈಸೂರು ಮೇ 26
ಸಾಹಿತಿಗಳಲ್ಲಿ ಇಂದು ಸಾಮಾಜಿಕ ಬದ್ಧತೆ ಕ್ಷೀಣಿಸುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ.ದೇಜಗೌ ವಿಷಾದಿಸಿದರು.
ಮೈಸೂರಿನ ವಿಚಾರ ವೇದಿಕೆ ಹಾಗೂ ಬೆಂಗಳೂರಿನ ಮಾಲತೇಶ್ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಭಾನುವಾರ ಎಂಜಿನಿಯರಗಳ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಡಾ.ಮಳಲಿ ವಸಂತಕುಮಾರ್ ಅವರ ಎರಡು ಕೃತಿಗಳ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಉದ್ಧಾರ ಹಾಗೂ ಸಮಾಜವನ್ನು ಉತ್ತಮವಾಗಿ ಬೆಳೆಸುವಲ್ಲಿ ಸಾಹಿತಿಗಳ ಪಾತ್ರ ಬಹುಮುಖ್ಯವಾದುದು. ಸಮಾಜಮುಖಿಯಾಗಿರಬೇಕಾದ ಇಂದಿನ ಅನೇಕ ಸಾಹಿತಿಗಳಲ್ಲಿ ಸಾಮಾಜಿಕ ಬದ್ಧತೆ ಕಾಣದಾಗಿದೆ. ಸರ್ಕಾರ ನೀಡುವ ಪ್ರಶಸ್ತಿ, ಪುರಸ್ಕಾರಗಳಿಗೆ ಮುಖ ಮಾಡಿರುವ ಅವರು ಕೆಟ್ಟಿರುವ ಸಮಾಜದ ವ್ಯವಸ್ಥೆ ಬಗ್ಗೆ ಮಾತನಾಡುವಲ್ಲಿ ನಿಷ್ಕ್ರೀಯರಾಗಿದ್ದಾರೆ ಎಂದರು.
ಸಮಾಜ ಶುದ್ಧೀಕರಿಸುವ ಹೊಣೆಗಾರಿಕೆ ಸಾಹಿತಿಗಳ ಮೇಲಿದೆ. ಈ ದಿಸೆಯಲ್ಲಿ ಇಂದಿನ ವ್ಯವಸ್ಥೆಗಳು, ನಾಯಕರ ಲೀಲೆ, ಮೌಢ್ಯತೆ ಮುಂತಾದವುಗಳ ಕುರಿತು ಬರೆದಿರುವ ಮಳಲಿ ವಸಂತಕುಮಾರ್ ಅವರ ಸಾಹಿತ್ಯದಲ್ಲಿ ಸಮಾಜಮುಖಿ ಚಿಂತನೆ ಹೆಚ್ಚಾಗಿ ಕಾಣಬಹುದು. ಅವರ ಸಮಕಾಲೀನ ಸಾಹಿತಿಗಳು ಇಂತಹ ದೃಷ್ಟಿಕೋನದಲ್ಲಿ ಬರೆಯದಿರುವುದು ವಿರಳ. ಕನ್ನಡ ಸಾಹಿತ್ಯಕ್ಕೆ ಮಳಲಿ ಅವರ ಕೊಡುಗೆ ಅಪಾರ ಎಂದು ಅವರು ತಿಳಿಸಿದರು.
ಕೃತಿ ಲೋಕಾರ್ಪಣೆ: ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಸಿಪಿಕೆ ಅವರು, ಸಾಹಿತಿ ಡಾ. ಮಳಲಿ ವಸಂತಕುಮಾರ್ ಅವರು ಸಂಪಾದಿಸಿರುವ ಈಡು ಹಾಗೂ ಕುವೆಂಪು ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಡಾ. ಮಳಲಿ ವಸಂತಕುಮಾರ್ ಹಾಗೂ ಅವರ ಪತ್ನಿ ಶಾಂತಾ ಅವರನ್ನು ಪ್ರೊ.ದೇಜಗೌ ಸನ್ಮಾನಿಸಿದರು. ಕವಯತ್ರಿ ಡಾ. ಲತಾ ರಾಜಶೇಖರ್ ಹಾಗೂ ಸಾಹಿತಿ ಪ್ರೊ.ಕೆ. ಭೈರವಮೂರ್ತಿ ಅವರು ಅಭಿನಂದಿತರ ಕುರಿತು ಮಾತನಾಡಿದರು. ಕೃತಿಗಳ ಕುರಿತು ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿದರು.
ಎಂಜಿನಿಯರಗಳ ಸಂಸ್ಥೆ ಅಧ್ಯಕ್ಷ ಡಾ.ಅನಂತ ಪದ್ಮನಾಭ, ಸಾಹಿತಿ ಎಚ್.ಎಲ್. ಶಿವಪ್ಪ, ಪ್ರಕಾಶಕ ಎಫ್.ಎಸ್. ದುರ್ಗಣ್ಣನವರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮುಖ್ಯ ಅತಿಥಿಗಳಾಗಿದ್ದರು.
ಪ್ರೊ.ಹಿರೆಮರಳಿ ಧರ್ಮರಾಜು ಸ್ವಾಗತಿಸಿದರು. ಬೆಸೂರು ಮೋಹನ್ ಪಾಳೇಗಾರ್ ನಿರೂಪಿಸಿದರು. ನಂತರ ಗಾಯಕ ಗಾಯಕಿಯರು ಗೀತಾ ಗಾಯನ ನಡೆಸಿಕೊಟ್ಟರು.
ಗ್ರಾಮೀಣ ಹಿನ್ನೆಲೆ ಹಾಗೂ ಜನಪದ ಹಿನ್ನೆಲೆಯಲ್ಲಿನ ಸಾಹಿತ್ಯಗಳು ಉತ್ಕೃಷ್ಟತೆ ಹೊಂದಿರುತ್ತದೆ. ಕುವೆಂಪು, ಕಾರಂತ, ಗೊರೂರು, ನಾಗೇಗೌಡ ಮುಂತಾದ ಹಿರಿಯ ತಲೆಮಾರಿನ ಸಾಹಿತಿಗಳು ಗ್ರಾಮೀಣ ಹಿನ್ನೆಲೆಯಲ್ಲಿ ಸಾಹಿತ್ಯ ರಚಿಸಿದ ಕಾರಣ ಉತ್ಕೃಷ್ಟತೆ ಹೊಂದಿದ್ದವು. ಆ ಛಾಯೆ ಮಳಲಿ ಅವರ ಸಾಹಿತ್ಯದಲ್ಲಿ ಹೆಚ್ಚಾಗಿ ಕಾಣಬಹುದು. ಈಡು ಕೃತಿ ಸುಮಾರು 30 ವರ್ಷಗಳ ಹಿಂದೆ ಹಾಗೂ ಕುವೆಂಪು ಕಾವ್ಯ ಮೀಮಾಂಸೆ ಕೃತಿಯು 40 ವರ್ಷಗಳ ಹಿಂದೆ ಪ್ರಕಟವಾಗಿದ್ದು, ಇದೀಗ ಅದರ ಪುನರ್ ಮುದ್ರಣಗೊಂಡಿವೆ. ಇತ್ತೀಚಿನ ಲೇಖನಗಳನ್ನು ಒಳಗೊಂಡಂತೆ ಈ ಪುಸ್ತಕಗಳನ್ನು ಮರು ಮುದ್ರಿಸಬಹುದಾಗಿತ್ತು.
- ಡಾ.ಸಿಪಿಕೆ, ಸಾಹಿತಿ