ಕಿತ್ತೂರಿನಲ್ಲಿ ಪ್ರತಿ ಸೋಮವಾರ ಜಾನುವಾರು ಜಾತ್ರೆ
ಕ.ಪ್ರ. ವಾರ್ತೆ, ಕಿತ್ತೂರು, ಅ.14
ಪ್ರತಿ ಸೋಮವಾರ ಜಾನುವಾರು ಸಂತೆ ತುಂಬ ಚೆನ್ನಾಗಿ ನಡೆಯುತ್ತಿದ್ದು, ಇನ್ನು ಮುಂದೆ ರೈತರಿಗೆ ಅನುಕೂಲವಾಗುವ ಹಾಗೆ ಅದನ್ನು ಇನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಿದೆ ಎಂದು ದನಕರುಗಳ ವ್ಯಾಪಾರಿ ಸುಭಾಷ್‌ಚಂದ್ರ ಬೋಸ್ ಹೇಳಿದರು.
ಉತ್ತಮ ರಾಸುಗಳಿಗೆ ಬಹುಮಾನ ಕೊಡಲಾಗುವುದು ಹಾಗೂ ಇನ್ನೂ ಅಕ್ಕಪಕ್ಕದ ಹಳ್ಳಿಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ತಿಳಿಸಿದರು. ಡಿ.ಟಿ. ರಮೇಶ್, ದಾಸೇಗೌಡ, ಕಾಳಮರೀಗೌಡ, ಮಲ್ಲೇಗೌಡ, ಕೆ.ಪಿ. ಜಗದೀಶ್, ತಮ್ಮಯ್ಯಶೆಟ್ಟಿ, ಮಹದೇವಶೆಟ್ಟಿ, ರಾಜಶೇಖರ, ಕೆ.ಟಿ. ಪ್ರಕಾಶ, ನಜೀರ್, ಸಂತೆ ಸುಂಕ ವಸೂಲಿಗಾರ ಶಾಂತನಾಯಕ ಇದ್ದರು.
ರಸ್ತೆಗಳ ಅಭಿವೃದ್ಧಿಗೆ ಕ್ರಮ: ಮಹೇಶ್
ಸಾಲಿಗ್ರಾಮ: ತಾಲೂಕಿನ ರಸ್ತೆಗಳನ್ನು ವಿವಿಧ ಯೋಜನೆಗಳಡಿಯಲ್ಲಿ ಹಂತ-ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು. ಕೆ.ಆರ್. ನಗರ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಹೊನ್ನೇನಹಳ್ಳಿ ಗ್ರಾಮದವರೆಗೆ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ ಯೋಜನೆಯಡಿಯಲ್ಲಿ 22 ಲಕ್ಷ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಇದೇ ವೇಳೆ ಬಳ್ಳೂರು ಗ್ರಾಮದಿಂದ ಪಶುಪತಿ ಗ್ರಾಮದವರೆಗೆ ಸುಮಾರು 42.37 ಲಕ್ಷ ವೆಚ್ಚದಲ್ಲಿ ಮಾಡುವ ರಸ್ತೆ ಡಾಂಬರೀಕರಣ ಕಾಮಗಾರಿಗೂ ಚಾಲನೆ ನೀಡಿದರು. ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಸರ್ಕಾರದಿಂದ 6 ಕೋಟಿ ವೆಚ್ಚದಲ್ಲಿ ಕಾಮಗಾರಿಯೂ ಆರಂಭಗೊಂಡು ಮುಗಿಯುವ ಹಂತಕ್ಕೆ ಬಂದಿದ್ದು, ಶೀಘ್ರದಲ್ಲೇ ಚಿಕ್ಕನಾಯಕನಹಳ್ಳಿ, ಬಳ್ಳೂರು, ಲಕ್ಷ್ಮೀಪುರ, ಹೊನ್ನೇನಹಳ್ಳಿ ಗ್ರಾಮಗಳಿಗೆ ಕಾವೇರಿ ನದಿಯಿಂದ ಕುಡಿವ ನೀರನ್ನು ಒದಗಿಸಲಾಗುವುದು ಎಂದು ತಿಳಿಸಿದರು. ಎಂಜಿನಿಯರ್ ರವಿಕುಮಾರ್, ಕೃಷ್ಣೇಗೌಡ, ಭಾಸ್ಕರ್, ಪ್ರಭಾಕರ್, ಕೃಷ್ಣಮೂರ್ತಿ, ಗೋಪಾಲ್, ಸತೀಶ್, ರಾಜೇಗೌಡ, ಮಹೇಶ್, ಹರೀಶ್, ವಾಸು, ಯೋಗೇಶ್, ಚಂದ್ರೇಗೌಡ ಇದ್ದರು.