ಕೌತುಕದ ಜಂಬೂಸವಾರಿ ಮೆರವಣಿಗೆ
ಡಿ.ಎನ್. ಮಹೇಂದ್ರ
ಕ.ಪ್ರ.ವಾರ್ತೆ ಮೈಸೂರು ಅ. 14
ವಿಜಯ ದಶಮಿಯಂದು ಮೈಸೂರಿಗೆ ಬಂದವರಲ್ಲಿ ನಾಡಹಬ್ಬ ನೋಡದವರಿಲ್ಲ. ಚಿನ್ನದ ಅಂಬಾರಿಯನ್ನೊತ್ತ ಬೆಡಗು ಬಿನ್ನಾಣ, ವೈಯ್ಯಾರ ಭರಿತ ಅರ್ಜುನನ ರಾಜ ಗಾಂಭೀರ್ಯ ನಡಿಗೆ ನೋಡಿ ಬೆರಗುಗೊಳ್ಳದವರಿಲ್ಲ. ಈ ವೈಭವಯುತ ಜಂಬೂಸವಾರಿ ಮಾರ್ಗದುದ್ದಕ್ಕೂ ನಡೆದ ಅಚ್ಚರಿ, ಕೌತುಕಗಳಿಗೆ ಲೆಕ್ಕವಿಲ್ಲ.
ವಿಶ್ವವಿಖ್ಯಾತ ಮೈಸೂರು ಅರಮನೆಯಿಂದ ಬನ್ನಿಮಂಟಪ ವರೆಗಿನ ಐದು ಕಿ.ಮೀ. ಹಾದಿಯನ್ನು 8 ವರ್ಷದ ಬಾಲೆ ಆಯಾಸವಿಲ್ಲದೆ ನಡೆದಳು, ಅಲ್ಲಿ ಕುಣಿದಳು. ಭಾರತೀಯ ಆಧ್ಯಾತ್ಮಕ್ಕೆ ಮಾರು ಹೋದ ರಷ್ಯನ್ನರು ಜಂಬೂಸವಾರಿ ನೋಡಲು ಬಂದ ಲಕ್ಷಾಂತರ ಮಂದಿಯನ್ನು ಕಂಡು ರೋಮಾಂಚಿತರಾದರು. ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದ ವಿದೂಷಕ ಕಲಾವಿದರು, ಗೃಹ ರಕ್ಷಕ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳು ಅತ್ತುತ್ತಮ ಸೇವೆ ಸಲ್ಲಿಸಿದರು. ಅನೇಕ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಕಲಾವಿದರಿಗೆ, ಪೊಲೀಸರಿಗೆ ನೀರು, ಮಜ್ಜಿಗೆ ವಿತರಿಸಿದರು.
ಕಿರಾಳು ಮಹೇಶ್ ವೀರಗಾಸೆ: ಅಂಬಾವಿಲಾಸ ಆವರಣದಲ್ಲಿ ಸುಡು ಬಿಸಿಲು ಲೆಕ್ಕಿಸದೆ ಜಂಬೂಸವಾರಿ ನೋಡಿದವರಲ್ಲದೆ, ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡದ ತುತ್ತ ತುದಿಯಲ್ಲಿ, ಮರದ ರೆಂಬೆ- ಕೊಂಬೆಗಳಲ್ಲಿ ಜೇನು ಗೂಡಿನಿಂತೆ ನೇತು ಹಾಕಿಕೊಂಡಿದ್ದವರು ಬಹಳ. ಜಂಬೂಸವಾರಿಯ ಮುಂಚೂಣಿಯಲ್ಲಿ ನಂದಿಧ್ವಜ ಕುಣಿತದ ಜೊತೆ ಜೊತೆಯಲ್ಲಿಯೆ ತೆರಳಿದ ಕಿರಾಳು ಮಹೇಶ್ ನೇತೃತ್ವದ ವೀರಗಾಸೆ ತಂಡದಲ್ಲಿ 8 ವರ್ಷದ ಪುಟ್ಟ ಬಾಲಕಿ ಮತ್ತು ಬಾಲಕಿಯ ಉತ್ಸಾಹ ಮೆಚ್ಚಬೇಕು. ಜಂಬೂಸವಾರಿ ನಡೆಯುವ ಸುಮಾರು ಐದು ಕಿ.ಮೀ. ದೂರದವರೆಗೂ ಆಕೆ ಕುಣಿಯುತ್ತಿಳಿದ್ದಳು. ತಲಕಾಡಿನ ಸಮರ್ಪಣಾ ಶಾಲೆಯಲ್ಲಿ 3ನೇ ತರಗತಿ ಓದುತ್ತಿರುವ ಅನುಗೆ ಇದು ಮೊದಲ ದಸರಾ. ಈಕೆಯೊಂದಿಗೆ ಹೆಜ್ಜೆ ಹಾಕಿದ ಮತ್ತೋರ್ವ ಬಾಲಕ ಧನುಷ್ ಈತನೂ ಅದೆ ಶಾಲೆಯಲ್ಲಿ ಓದುತ್ತಿದ್ದಾನೆ. ಇಬ್ಬರೂ ಧಣಿವರಿಯದೆ ಕುಣಿದಿದ್ದಾರೆ.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪದ ಡಾ. ರಾಜ್ ಉದ್ಯಾನವನ ಮತ್ತು ಡಾ. ವಿಷ್ಣು ಉದ್ಯಾನವನದ ಕಾಮಾನು, ಮರದ ಕೊಂಬೆಗಳು, ಕೆ.ಆರ್. ವೃತ್ತದಲ್ಲಿನ ಬಸ್ ನಿಲ್ದಾಣದ ಛಾವಣಿಗಳು, ಗರುಡ ಮಹಲ್, ಕೆ.ಆರ್. ವೃತ್ತದ ವಿಶ್ವೇಶ್ವರಯ್ಯ ಕಟ್ಟಡದ ಕಿಟಕಿಯ ಸಜ್ಜಾ, ಮೇಲ್:ಲಾವಣಿಗಳು, ಕಳಿಂಗ ವಸತಿ ಗೃಹದ ಮೇಲ್ಭಾಗದ ನೀರಿನ ಟ್ಯಾಂಕ್, ಕಟ್ಟಡದ ಮೇಲಿನ ಬೃಹತ್ ಜಾಹಿರಾತು ಫಲಕದ ಮೇಲೆ, ರಸ್ತೆ ಬದಿಯಲ್ಲಿ ನಿಲ್ಲಿಸಿದ ಬಸ್, ಟೆಂಪೋ, ಸಯ್ಯಾಜಿರಾವ್ ರಸ್ತೆಯ ಎಲ್ಲಾ ಕಟ್ಟಡಗಳು, ಪಾದಚಾರಿ ರಸ್ತೆಗಳು ಜನಮಯವಾಗಿದ್ದವು. ಎಲ್ಲಿ ಕಣ್ಣು ಆಯಿಸಿದರೂ ಜನ ಸಾಗರವೆ ನರೆದಿತ್ತು. ಯಾರೊಬ್ಬರೂ ಅಲುಗಾಡಲು ಆಗದಂತೆ, ಬಿಗಿಹಿಡಿದ ಕಾಲು ನೆವರಿಸಿಕೊಳ್ಳಲೂ ಆಗದ ಸ್ಥಿತಿಯಲ್ಲಿದ್ದರು.
ಮಜ್ಜಿಗೆ ವಿತರಣೆ: ಮೆರವಣಿಗೆ ಉದ್ದಕ್ಕೂ ಆಯಾಸಗೊಂಡ ಕಲಾವಿದರಿಗೆ ಮತ್ತು ಬಿಸಿಲಿನಲ್ಲಿ ಬಸವಳಿದ ಪೊಲೀಸರಿಗಾಗಿ ಡಾ. ರಾಜ್‌ಕುಮಾರ್ ಅಭಿಮಾನಿ ಸೇನೆ, ಎಸ್‌ಪಿಐ ಸಂಸ್ಥೆ, ಮಾನವಿ ಸೇವಾ ದಳ ಮತ್ತು ಅಮೃತಾನಂದಮಯಿ ಮಠದ ವತಿಯಿಂದ ಕುಡಿಯುವ ನೀರು, ಮಜ್ಜಿಗೆ ವಿತರಿಸಲಾಯಿತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಮಾತಾ ಅಮೃತಾನಂದಮಯಿ ಮಠದ ನೂರು ಮಂದಿ ಸ್ವಯಂ ಸೇವಕರು ಸುಮಾರು 1 ಲಕ್ಷ ನೀರಿನ ಪೊಟ್ಟಣಗಳನ್ನು ವಿತರಿಸಿದರು. ಕೆ.ಆರ್. ವೃತ್ತದಲ್ಲಿ ಡಾ. ರಾಜ್‌ಕುಮಾರ್ ಅಭಿಮಾನಿ ಸೇನೆ ಪದಾಧಿಕಾರಿಗಳು ಮಜ್ಜಿಗೆ ವಿತರಿಸಿದರು.
ಎಸ್‌ಪಿಐ ಸಂಸ್ಥೆಯವರು ಕೆ.ಆರ್. ವೃತ್ತದಿಂದ ಬನ್ನಿಮಂಟಪದವರೆಗೆ ಸುಮಾರು 20 ಕೌಂಟರ್ ತೆರೆದು 30 ಸಾವಿರ ಲೀ. ನೀರು ಪೂರೈಸಿದರು. ಶಿವರಾಂಪೇಟೆಯ ಮಾನವಿ ಸೇವಾ ದಳದ ಪದಾಧಿಕಾರಿಗಳು ಇಂದ್ರಭವನ್ ಹೊಟೇಲ್ ಸಹಯೋಗದೊಂದಿಗೆ ಬಿಸ್ಕೆಟ್, ನೀರಿನ ಬಾಟಲು ಪೂರೈಸಿದರು.
ಗಿರಿಜನರ ನೃತ್ಯ: ಮೆರವಣಿಗೆಯಲ್ಲಿ ಭಾಗವಹಿಸಿದ್ದ ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್‌ನ ಬ್ರಹ್ಮಕುಮಾರಿ ಸಮಾಜದ ಸದಸ್ಯರು ವಿಶೇಷ ಆತಿಥಿಯಾಗಿದ್ದರು. ಇದೆ ಮೊದಲ ಬಾರಿ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಅಲಿಸಾ ತಮಗಾದ ಸಂತೋಷ ಹಂಚಿಕೊಂಡರು. ಇಷ್ಟೊಂದು ಅಭೂತಪೂರ್ವ ಮೆರವಣಿಗೆಯಲ್ಲಿ ಭಾಗವಹಿಸುತ್ತಿರುವುದು ಇದೆ ಮೊದಲು. ಇಷ್ಟೊಂದು ಜನ ನೋಡಿದ್ದೂ ಕೂಡ ಮೊದಲೆ. ಬಹಳ ಸಂತೋಷವಾಗುತ್ತಿದೆ ಎಂದರು.
ಎಚ್.ಡಿ. ಕೋಟೆ ಗಿರಿಜನರು ತಮ್ಮ ಸಂಪ್ರದಾಯದ ನೃತ್ಯ ಪ್ರದರ್ಶಿಸಿದರೆ, ಆಂಜನೇಯ, ರಾವಣ ಮುಂತಾದ ವೇಷ ಧರಿಸಿದ್ದ ಕಲಾವಿದರು ರಸ್ತೆಯ ಇಕ್ಕೆಲಗಳಲ್ಲಿ ಕುಳಿತಿದ್ದ ಸಾರ್ವಜನಿಕರನ್ನು ರಂಜಿಸಿದರು. ಜ್ಯೂನಿಯರ್ ವಿಷ್ಣುವರ್ಧನ್ ಮೆರವಣಿಗೆಯಲ್ಲಿ ಕಾಣಿಸಿಕೊಂಡರು.
ಗೃಹ ರಕ್ಷಕ, ಎನ್‌ಸಿಸಿ ಸೇವೆ: ಜಂಬೂಸವಾರಿ ಉದ್ದಕ್ಕೂ ಗೃಹ ರಕ್ಷಕ ದಳ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳು ಸಾರ್ವಜನಿಕರನ್ನು ನಿಯಂತ್ರಿಸುವಲ್ಲಿ ಉತ್ತಮ ಸೇವೆ ಸಲ್ಲಿಸಿದರು. ಜನರು ಗಲಾಟೆ ಮಾಡದಂತೆ ರಸ್ತೆಗೆ ಇಳಿಯದಂತೆ ನಿಯಂತ್ರಿಸಿದರು. ಬಿಸಿಲನ್ನೂ ಲೆಕ್ಕಿಸದೆ ಅತ್ಯುತ್ತಮ ಸೇವೆ ಸಲ್ಲಿಸಿದರು. ಗೃಹ ರಕ್ಷಕ ದಳದ ಕಮಲ ದಸರಾ ಬಗೆಗಿನ ತಮಗಿರುವ ಅನುಭವ ಹಂಚಿಕೊಂಡರು, ಎನ್‌ಸಿಸಿಯ ವಿಕ್ರಂ ಪ್ರಸಾದ್ ಗುಪ್ತ ಸಾರ್ವಜನಿಕರೊಡನೆ ಸೇವೆ ಸಲ್ಲಿಸುವುದು ಸಂತೋಷವನ್ನುಂಟು ಮಾಡಿದೆ ಎಂದರು.