ಚಿನ್ನದ ಚಾಮುಂಡಿ ಅಂಬಾರಿ ಕಟ್ಟುವ ಕ(ಲೆ)ಥೆ
ಬಿ. ಶೇಖರ್ ಗೋಪಿನಾಥಂ
ಕ.ಪ್ರ.ವಾರ್ತೆ ಮೈಸೂರು ಅ. 14
ನಾಡದೇವತೆ ತಾಯಿ ಚಾಮುಂಡೇಶ್ವರಿ ವಿಗ್ರಹವಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಅರ್ಜುನ ಆನೆಯ ಮೈಮೇಲೆ ಕಟ್ಟುವುದೇ ಒಂದು ಕಲೆ. ಅರಣ್ಯ ಇಲಾಖೆಯ ಸಿಬ್ಬಂದಿ, ಮಾವುತರು, ಕಾವಾಡಿಗಳು ಸೇರಿಕೊಂಡು ಚಿನ್ನದ ಅಂಬಾರಿಯನ್ನು ಆನೆಯ ಮೈಮೇಲೆ ಕಟ್ಟಿದರು.
ದಸರಾ ಮೆರವಣಿಗೆ ಆರಂಭವಾದ ಬಳಿಕ ಅರ್ಜುನ ಆನೆಗೆ ಖಾಸ್ ಅರಮನೆ ಬಳಿ ಅಂಬಾರಿ ಕಟ್ಟುವ ಕಾರ್ಯ ಆರಂಭವಾಯಿತು. ಮೊದಲು ಅರ್ಜುನ ಮೈಮೇಲೆ ಗಾದಿ, ಚಾಪ್ ಹಾಕಿ ಹಗ್ಗದಿಂದ ಬಿಗಿಯಾಗಿ ಕಟ್ಟಲಾಯಿತು. ನಂತರ ರಂಗು ರಂಗಿನ ಜುಲಾ ಹೊದಿಸಲಾಯಿತು. ಬಳಿಕ ಚಿನ್ನದ ಅಂಬಾರಿಯನ್ನು ಕ್ರೇನ್ ಸಹಾಯದಿಂದ ತೆಗೆದು ಅರ್ಜುನ ಆನೆಯ ಮೈಮೇಲೆ ಇರಿಸಿ ಕಟ್ಟಲಾಯಿತು. ನಂತರ ಅರ್ಜುನ ಕೊಂಬಿಗೆ ಸಿಂಗೋಟಿ ಬಳೆ, ಹಣೆಪಟ್ಟಿ, ಕಾಲಿಗೆ ಡುಬ್ಬ, ಕಿವಿಗೆ ಚಾಮರ ತೊಡಿಸಿ ಅಲಂಕರಿಸಲಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ಅಕ್ರಂ ಪಾಷ, ದೊಡ್ಡಪ್ಪಾಜಿ, ಜಕಾ, ಪಾಷ ಸೇರಿದಂತೆ ಹಲವರು ಈ ಅಂಬಾರಿ ಕಟ್ಟುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ದಸರಾ ಮಹೋತ್ಸವದಲ್ಲಿ 2ನೇ ಬಾರಿಗೆ ಅರ್ಜುನ ಆನೆಯು ಅಂಬಾರಿ ಹೊರಲು ಅಣಿಯಾಗಿದ್ದ. ಹಿಂದೆಯೊವ್ಮು ವಾಪಸ್ ಮೆರವಣಿಗೆಯಲ್ಲಿ ಅಂಬಾರಿ ಹೊತ್ತ ಅನುಭವ ಸಹ ಅರ್ಜುನನಿಗೆ ಇದೆ. ಸೋಮವಾರ ಅರ್ಜುನ ಗಾಂಭೀರ್ಯದ ಹೆಜ್ಜೆ ಹಾಕುತ್ತಿದ್ದ. ಆದರೆ, ಚಿನ್ನದ ಅಂಬಾರಿ ವಾಲಿಕೊಂಡಿದ್ದರಿಂದ ಕೆಲವು ಕಡೆ ಅರ್ಜುನ ನಿಂತು ಸುಧಾರಿಸಿಕೊಂಡು ಮುಂದೆ ಸಾಗಿದ. ಅಂಬಾರಿ ವಾಲಿದರು ಅರ್ಜುನ ಗಾಂಭೀರ್ಯದ ಹೆಜ್ಜೆಗೆ ಅಡ್ಡಿಯಾಗಿಲ್ಲ.
12 ಆನೆಗಳು ಹೆಜ್ಜೆ....: ದಸರಾ 14 ಆನೆಗಳ ಪೈಕಿ 12 ಆನೆಗಳು ಮಾತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಇದೇ ಮೊದಲ ಬಾರಿಗೆ ದಸರೆಗೆ ಬಂದಿರುವ ದುರ್ಗಾಪರಮೇಶ್ವರಿ ಭಯಗೊಂಡಿದ್ದರಿಂದ ಮೆರವಣಿಗೆ ಬಂದಿರಲಿಲ್ಲ. ದುರ್ಗಾಪರಮೇಶ್ವರಿ ಜೊತೆಗೆ ಗೋಪಾಲಸ್ವಾಮಿ ಆನೆಯನ್ನು ಆನೆ ಬಿಡಾರದಲ್ಲೆ ಕಟ್ಟಿ ಹಾಕಲಾಗಿತ್ತು.
ಉಳಿದಂತೆ ಅಂಬಾರಿ ಹೊತ್ತ ಅರ್ಜುನನ ಅಕ್ಕಪಕ್ಕದಲ್ಲಿ ಕುಮ್ಕಿ ಆನೆಗಳಾಗಿ ಸರಳ ಮತ್ತು ವರಲಕ್ಷ್ಮಿ ಸಾಗಿದವು. ನಿಶಾನೆ ಆನೆಯಾಗಿ ಬಲರಾಮ, ತೌಫನ್ ಆನೆಯಾಗಿ ಗಜೇಂದ್ರ ಮುನ್ನಡೆದರು. ಪೊಲೀಸ್ ಬ್ಯಾಂಡ್‌ನ ಶಾಸ್ತ್ರೀಯ ಸಂಗೀತ ವೃಂದವರಿದ್ದ ಆನೆ ಗಾಡಿಯನ್ನು ಅಭಿಮನ್ಯು ಸಮರ್ಥವಾಗಿ ಎಳೆದುಪಕೊಂಡು ಹೋದನು. ಶ್ರೀರಾಮ, ವಿಜಯ, ವಿಕ್ರಮ, ಹರ್ಷ, ಗೋಪಿ ಮತ್ತು ಪ್ರಶಾಂತ ಆನೆಗಳು ಸವಾರಿಯಲ್ಲಿ ಸಾಲಾನೆಗಳಾಗಿ ಸಾಗಿದವು.
ಹೊಸ ಆಭರಣ, ಸಮವಸ್ತ್ರ: ಜಿಲ್ಲಾಡಳಿತ ಮತ್ತು ಅರಮನೆ ಮಂಡಳಿಯವರು ಆನೆಗಳಿಗಾಗಿ ರೇಷ್ಮೆ ಜುಲಾ, ಹಣೆಟ್ಟಿ, 45 ಕಾವಾಡಿಗಳಿಗೆ ಹಾಗೂ 25 ಮಾವುತರಿಗೆ ಹೊಸ ಸಮವಸ್ತ್ರ ನೀಡಲಾಗಿದೆ. ಅರ್ಜುನ ಆನೆಯನ್ನು ಸರಿಯಾಗಿ ನೋಡಿಕೊಂಡರೆ ಇನ್ನೂ 10 ವರ್ಷ ಅಂಬಾರಿ ಹೊರುವ ಸಾಮರ್ಥ್ಯ ಇದೆ ಎಂದು ಡಿಸಿಎಫ್ ದೇವರಾಜ್ ಹೇಳಿದರು.
ಕುಸುರೆ ಮೆಲ್ಲುತ್ತ...: ಬತ್ತದ ಹುಲ್ಲಿನಲ್ಲಿ ಬತ್ತ, ತೆಂಗಿನಕಾಯಿ, ಬೆಲ್ಲ, ಕಬ್ಬು ಸೇರಿಸಿ ಉಂಡೆ ಆಕಾರದಲ್ಲಿ ತಯಾರಿಸಲಾಗಿದ್ದ ಕುಸುರೆಯನ್ನು ನಿಶಾನೆ, ತೌಫತ್, ಆನೆ ಗಾಡಿ, ಸಾಲಾನೆಗಳಿಗಾಗಿ ಕೆ.ಆರ್. ವೃತ್ತ, ಬಾಟಾ ಶೋ ರೂಂ ಜಂಕ್ಷನ್, ಆರ್‌ಎಂಸಿ ವೃತ್ತ, ಹೈವೈ ವೃತ್ತದ ಬಳಿ ತಿನ್ನಿಸಲಾಯಿತು.
ಇನ್ನೂ ಗರಿಕೆ ಹುಲ್ಲಿನಲ್ಲಿ ಗ್ಲೂಕೋಸ್ ಪೌಡರ್, ಅವಲಕ್ಕಿ, ಬೆಲ್ಲ, ತೆಂಗಿನಕಾಯಿ ಕಟ್ಟಿ ಉಂಡೆ ಆಕಾರದಲ್ಲಿ ಸಿದ್ಧಪಡಿಸಲಾಗಿದ್ದ ವಿಶೇಷ ಆಹಾರವನ್ನು ಅಂಬಾರಿ ಆನೆ ಅರ್ಜುನ, ಅಕ್ಕಪಕ್ಕದಲ್ಲಿ ಸಾಗಿದ ವರಲಕ್ಷ್ಮಿ ಮತ್ತು ಸರಳ ಆನೆಗಳಿಗೆ ನೀಡಲಾಯಿತು. ಕುಸುರೆಯನ್ನು ಮೆಲ್ಲುತ್ತಲೆ ಆನೆಗಳು ಹೆಜ್ಜೆ ಹಾಕಿದವು ಎಂದು ಆನೆ ವೈದ್ಯ ಡಾ. ನಾಗರಾಜ್ ತಿಳಿಸಿದರು.
ವಿದೇಶಿಯರು ಬಲುಖುಷ್...
ಕ.ಪ್ರ.ವಾರ್ತೆ ಮೈಸೂರು ಅ. 14
ವಿಶ್ವದ ನಾನಾ ದೇಶಗಳಿಂದ ಆಗಮಿಸಿ ದಸರಾ ಜಂಬೂಸವಾರಿ ವೀಕ್ಷಿಸಿದ ವಿದೇಶಿಗರು ಸಂತಸ ವ್ಯಕ್ತಪಡಿಸಿದರು. ಕಲ್ಪವೃಕ್ಷ ಟ್ರಸ್ಟ್ ಜಿಲ್ಲಾಡಳಿತದ ಸಹಕಾರದೊಂದಿಗೆ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆ ಮುಂಭಾಗ ವಿದೇಶಿಗರಿಗಾಗಿ ವಿಶೇಷ ಆಸನದ ವ್ಯವಸ್ಥೆ ಕಲ್ಪಿಸಿತ್ತು.
ಅಮೆರಿಕ, ಬ್ರಿಟನ್, ಅರ್ಜೈಂಟೈನಾ, ಇಂಡೋನೇಷಿಯಾ, ಇರಾಕ್, ಇರಾನ್, ಇಟಲಿ, ಫ್ರಾನ್ಸ್ ಹಾಗೂ ಚೀನಾ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ದೇಶಗಳಿಂದ ಆಗಮಿಸಿದ್ದರು. ಕೆಲವರು ಇದೇ ಮೊದಲ ಬಾರಿಗೆ ದಸರಾ ನೋಡಲು ಆಗಮಿಸಿದ್ದರೆ, ಇನ್ನೂ ಕೆಲವರು ಇದೇ ಮೊದಲ ಬಾರಿಗೆ ಕರ್ನಾಟಕದ ಮೈಸೂರಿಗೆ ಭೇಟಿ ನೀಡಿರುವುದಾಗಿ ತಿಳಿಸಿದರು.
ನೀರು ಹಾಗೂ ಬಿಸ್ಕತ್ ನೀಡಿರುವುದು ನಿಜಕ್ಕೂ ಉತ್ತಮ ಸೇವೆ ಎಂದು ಯುಎಸ್‌ಎನ ಫ್ರಾನ್ಸಿಸ್ ಸಂತಸ ವ್ಯಕ್ತ ಪಡಿಸಿದರು. ಅಲ್ಲದೆ ಕೆಲವರು ಮೈಸೂರು ತುಂಬ ಸುಂದರ ನಗರ ಹಾಗೂ ದಸರಾ ನೋಡುವುದು ಖುಷಿ ತಂದಿದೆ ಎಂದು ತಿಳಿಸಿದರು.
ಇದೇ ಮೊದಲ ಬಾರಿಗೆ ಈ ವ್ಯವಸ್ಥೆಯನ್ನು ಸಂಸ್ಥೆ ವತಿಯಿಂದ ಕಲ್ಪಿಸಲಾಗಿದೆ. ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ ಎಂದು ಕಲ್ಪವೃಕ್ಷ ಟ್ರಸ್ಟ್ ಅಧ್ಯಕ್ಷ ಡಾ. ಎಚ್.ಬಿ. ರಾಜಶೇಖರ್ ತಿಳಿಸಿದರು. ದಸರಾ ಮೆರವಣಿಗೆಯನ್ನು ಇಂಗ್ಲಿಷ್ ಪ್ರಾಧ್ಯಾಪಕ ಡಾ. ಮಹದೇವ್ ಆಂಗ್ಲ್ ಭಾಷೆಯಲ್ಲೂ, ಪ್ರಾಧ್ಯಾಪಕಿ ಮೆರಿಟಾ ಶಾಂತರಾಜ್ ಸ್ಪಾನೀಷ್ ಭಾಷೆಯಲ್ಲೂ ವಿವರಣೆ ನೀಡಿದರು. ಪ್ರಧಾನ ಕಾರ್ಯದರ್ಶಿ ದೇವರಾಜು ಹಾಗೂ ಆಶಾ ಶಂಕರೇಗೌಡ ಇದ್ದರು. ಟಿಕೆಟ್ ಖರೀದಿಸುವ ಮೂಲಕ ಅರಮನೆ ಆವರಣದಲ್ಲಿಯೂ ಸಹ ಹೆಚ್ಚಿನ ವಿದೇಶಿಗರು ಜಂಬೂಸವಾರಿ ವೀಕ್ಷಿಸಿದರು.