ಜಂಬೂಸವಾರಿ ರಾಜ ಮಾರ್ಗದಲ್ಲಿ...
-ಜೆ. ಮಹದೇವ
ಕ.ಪ್ರ.ವಾರ್ತೆ ಮೈಸೂರು ಅ. 14
ಜಂಬೂಸವಾರಿ ಸಾಗುವ ಮಾರ್ಗವಾದ ಚಾಮರಾಜ ವೃತ್ತದಿಂದ ಕೃಷ್ಣರಾಜ ವೃತ್ತದವರೆಗೆ ಜನರು ಕಿಕ್ಕಿರಿದು ತುಂಬಿದ್ದರು. ಒಂದಿಷ್ಟು ಮಂದಿ ದೊಡ್ಡ ಧೈರ್ಯ ಮಾಡಿ ಗರುಡ ಮಾಲ್ ಬಳಿ ಇರುವ ವಿದ್ಯುತ್ ಟ್ರಾನ್ಸ್‌ಫಾರ್ಮ್ ಮೇಲೇರಿ ಕುಳಿತು ದಸರಾ ವೀಕ್ಷಿಸಿದರು. ಆದರೆ ಟ್ರಾನ್ಸ್‌ಫಾರ್ಮ್‌ಗೆ ವಿದ್ಯುತ್ ಸಂಪರ್ಕ ನೀಡಿಲ್ಲದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಅದೂ ಅಲ್ಲದೇ ಆ ಎಲ್ಲಾ ಯುವಕರು ವಿದ್ಯುತ್ ಸಂಪರ್ಕ ಇಲ್ಲದ್ದನ್ನು ತಪಾಸಣೆಯೇ ಮಾಡಿಯೇ ಮೇಲೆರಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಇನ್ನು ಜಂಬೂಸವಾರಿಯಲ್ಲಿ ಭಾಗವಹಿಸಿದ ಆನೆಗಳಿಗೆ ಮಾರ್ಗ ಮಧ್ಯದಲ್ಲಿ ಹಸಿವು, ಬಾಯಾರಿಕೆ ಆಗದಂತೆ ಕ್ರಮ ವಹಿಸಲು ಪ್ರತಿ ಕಿ.ಮೀ.ಗೆ ಆನೆ ಕಾವಾಡಿಗಳು ಆನೆಗಳಿಗೆ ನೀಡುವ ಆಹಾರವನ್ನು ಸಿದ್ಧಪಡಿಸಿಟ್ಟುಕೊಂಡಿದ್ದರು. ಬತ್ತ, ಬೆಲ್ಲ, ತೆಂಗಿನಕಾಯಿ ಮಿಶ್ರಣ ಉಳ್ಳ ಹುಲ್ಲಿನ ಉಂಡೆ ಹಾಗೂ ಕಬ್ಬನ್ನು ನೀಡಿದರು. ಆಹಾರ ತಿಂದ ಮೇಲೆ ಅವುಗಳಿಗೆ ನೀರನ್ನು ಒದಗಿಸಿದರು.
ಮೆರವಣಿಗೆಯಲ್ಲಿ ಪಾಲ್ಗೊಂಡ ಕಲಾವಿದರಿಗೆ ಬಾಯಾರಿಕೆ ನೀಗಿಸಲು ಹಾಗೂ ದಸರಾ ವೀಕ್ಷಿಸಲು ಆಗಮಿಸಿದ್ದ ಸಾರ್ವಜನಿಕರ ಅನುಕೂಲಕ್ಕಾಗಿ ಮಾರ್ಗದುದ್ದಕ್ಕೂ ಸ್ವಯಂ ಸೇವಾ ಸಂಸ್ಥೆಗಳು ನೀರಿನ ಪೊಟ್ಟಣ ವಿತರಿಸಿದರು. ಜಗ್, ಲೋಟದಲ್ಲಿ ನೀರನ್ನು ನೀಡಿ ಅವರಿಂದ ಶಹಬ್ಬಾಸ್‌ಗಿರಿ ಪಡೆದುಕೊಂಡರು. ಚಾಮುಂಡೇಶ್ವರಿ ಸೇವಾ ಸಂಸ್ಥೆ, ಶಿವರಾಂಪೇಟೆಯ ವಾಸವಿ ಸೇವಾ ದಳದವರು ಸುಮಾರು 200 ಕ್ಯಾನ್ ಮಿನರಲ್ ನೀರು ಪೂರೈಸಿದರು.
ಕೆಲವು ಅವಘಡಗಳು ಸಂಭವಿಸಿದವು: ಚಾಮರಾಜ ವೃತ್ತದ ಬಳಿ ಇರುವ ಡಾ. ರಾಜ್‌ಕುಮಾರ್ ಉದ್ಯಾನವನದ ಕಾಂಪೌಂಡ್ ಸರಳಗಳು ಮೇಲೆ ಸಾರ್ವಜನಿಕರು ಕುಳಿತು ಜಂಬೂಸವಾರಿ ವೀಕ್ಷಿಸಿದರು. ಸಾರ್ವಜನಿಕರ ಭಾರ ಹೆಚ್ಚಾದ್ದರಿಂದ ಗ್ರಿಲ್‌ಗಳ ಮುರಿದುಕೊಂಡವು. ಯಾರಿಗೂ ಗಾಯವಾಗಲಿಲ್ಲ. ಇನ್ನು ಕೆ.ಆರ್. ವೃತ್ತದ ಬಳಿ ಬೆಳಗೊಳ ಗ್ರಾಮದ ಕೀರ್ತಿ(15) ಎಂಬಾಕೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ತಕ್ಷಣ ಆಕೆಯನ್ನು ಆಂಬ್ಯುಲೆನ್ಸ್‌ನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇನ್ನೊಂದೆಡೆ ಜನರ ನೂಕುನುಗ್ಗಲಿನಿಂದ ಬೆಂಗಳೂರಿನ ಮಹಾಲಕ್ಷ್ಮಿ ಎಂಬುವರ ಕೈಗೆ ಗಾಯವಾಯಿತು. ಅವರನ್ನು ಸ್ಥಳದಲ್ಲೇ ಲಭ್ಯವಿದ್ದ ಡಾಗ್ ಸ್ಕ್ವಾಡ್ ವಾಹನದಲ್ಲಿ ಕೆ.ಆರ್. ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪೌರಕಾರ್ಮಿಕರ ಸೇವೆ: ಮೆರವಣಿಗೆಯುದ್ದಕ್ಕೂ ಕಸ ಇರದಂತೆ ರಸ್ತೆಯನ್ನು ಶುಚಿಗೊಳಿಸುವ ಕಾರ್ಯದಲ್ಲಿ ಪೌರಕಾರ್ಮಿಕರು ನಿರತರಾಗಿದ್ದರು. ಜಂಬೂಸವಾರಿಯ ಆನೆಗಳು, ಕುದುರೆಗಳ ಸಗಣಿಯನ್ನು ಶುಚಿಗೊಳಿಸಿದರು. ಪಾಲಿಕೆಯಲ್ಲಿ ಕೆಲಸ ಮಾಡುವ ಎಲ್ಲಾ ಪೌರಕಾರ್ಮಿಕರು ಕರ್ತವ್ಯದಲ್ಲಿ ಪಾಲ್ಗೊಂಡಿದ್ದರು. ಸಮವಸ್ತ್ರದೊಂದಿಗೆ ಕೆಲಸಕ್ಕೆ ಹಾಜರಾಗಿದ್ದ ಅವರು ಕೆಲಸ ಮಾಡುವ ಮೂಲಕವೇ ದಸರಾ ಆಚರಿಸಿದರು.
ಜಂಬೂಸವಾರಿಯ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರೊಂದಿಗೆ ಎನ್‌ಸಿಸಿ ಕೆಡೆಟ್‌ಗಳು ಹಾಗೂ ನಿವೃತ್ತ ಪೊಲೀಸ್ ಪೇದೆಗಳು ಪಾಲ್ಗೊಂಡಿದ್ದರು. ಸ್ವಯಂ ಇಚ್ಛೆಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡು ಭದ್ರತಾ ವ್ಯವಸ್ಥೆ ಸೇರಿದಂತೆ ಇನ್ನಿತರ ಸಾಮಾಜಿಕ ಸೇವಾ ಕಾರ್ಯ ಮಾಡಿದರು.