ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಾನಪದ ಕಲಾತಂಡಗಳ ನೃತ್ಯ ವೈಭವ

Srinivasa Murthy VN
Updated On : 15 Oct 2013, 1:37 am

-ಮಾ. ವೆಂಕಟೇಶ್
ಕ.ಪ್ರ.ವಾರ್ತೆ ಮೈಸೂರು ಅ. 14
ವಿಶ್ವಪ್ರಸಿದ್ಧ ದಸರಾ ಜಂಬೂಸವಾರಿಯ ಮತ್ತೊಂದು ಆಕರ್ಷಣೆ ಕಲಾತಂಡಗಳ ವೈಭವ. ಇಂತಹ ಗ್ರಾಮೀಣ ಸೊಗಡಿನ ವಿವಿಧ ಜಾನಪದ ಕಲಾ ಪ್ರಕಾರಗಳ ವೈವಿಧ್ಯ ಪ್ರದರ್ಶನ ಜನಮನ ಸೂರೆಗೊಂಡಿತು.
ಮೈಸೂರಿನ ಗೌರಿಶಂಕರ ನಂದಿಧ್ವಜ ಸಂಘದ ನಂದಿಧ್ವಜ ಕುಣಿತ, ಅಭನವಶ್ರೀ ವೀರಭದ್ರ ನೃತ್ಯ ತಂಡದ ವೀರಭದ್ರ ನೃತ್ಯದೊಂದಿಗೆ ಸಾಗಿದ ಈ ಕಲಾಮೇಳದಲ್ಲಿ ಕೃಷ್ಣಮೂರ್ತಿ ತಂಡದ ನಾದಸ್ವರ ವಾದನ. ನೌಪತ್ ಮತ್ತು ನಿಶಾನೆ ಆನೆಗಳು ಮತ್ತು ಪಿರಂಗಿ ಗಾಡಿಗಳ ಹಿಂದೆ ಸಾಲಾಗಿ ಒಂದರ ಹಿಂದೆ ಒಂದರಂತೆ ದೇಶ ಹಾಗೂ ವಿದೇಶದ ಕಲಾವಿದರ ತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದರು.
ಮೈಸೂರು ತಾಲೂಕಿನ ವರುಣದ ಮಲೈ ಮಹದೇಶ್ವರ ಕಂಸಾಳೆ ಜನಪದ ಕಲಾ ತಂಡ, ವಿದ್ಯಾರಣ್ಯಪುರಂ ಕಂಸಾಳೆ ಮಹದೇವಯ್ಯ ಕಲಾ ಸಂಘ, ನಂಜನಗೂಡಿನ ಮಲೈ ಮಹದೇಶ್ವರ ಕಂಸಾಳೆ ಸಂಘ, ಅಶೋಕಪುರಂ ಏಳುಮಲೈ ಕಂಸಾಳೆ ಕಲಾ ಸಂಘ, ಲಕ್ಷೀಪುರಂ ಮಲೈ ಮಹದೇಶ್ವರ ಕಂಸಾಳೆ ಯುವಕರ ಸಂಘ ಈ ತಂಡಗಳು ಬೀಸು ಕಂಸಾಳೆ ನೃತ್ಯ ಮೂಲಕ ವಿವಿಧ ಭಂಗಿಯಲ್ಲಿ ಹಾಡಿ ಕುಣಿದರು.
ಮಹಿಳಾ ಕಲಾವಿದರ ಖದರ್: ತಲೆಯ ಮೇಲೆ ಅಲಂಕಾರದ ದೇವರ ವಿಗ್ರಹವೊತ್ತು ಏಣಿಯೇರಿ ಹಾಗೂ ಕಲಾವಿದರ ಮೇಲೆ ನಿಂತು ನಡೆಸುವ ಪೂಜಾ ಕುಣಿತ ಕಲಾ ಪ್ರದರ್ಶನವನ್ನೂ ಟಿ. ನರಸೀಪುರದ ಸಿದ್ದೇಶ್ವರ ಕಲಾಸಂಘ, ಮಂಡ್ಯದ ಮಾರಮ್ಮದೇವಿ ಜಾನಪದ ಕಲಾಬಳಗ, ಮದ್ದೂರು ತಾಲೂಕಿನ ಸಿ.ಎಸ್. ಕುಮಾರ್ ತಂಡ ಹಾಗೂ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜನಪದ ವಿದ್ಯಾರ್ಥಿಗಳು ನೀಡಿದರು. ಇವರಲ್ಲಿ ಕೆಲವರು ಮಹಿಳಾ ಕಲಾವಿದರಿದ್ದದ್ದು ವಿಶೇಷ.
ಗಂಡು ಕಲೆಯೆಂದು ಬಿಂಬಿಸಲಾಗಿರುವ ಡೊಳ್ಳು ಕುಣಿತವನ್ನೂ ಶಿವಮೊಗ್ಗದ ರಾಮೇಶ್ವರ ಡೊಳ್ಳು ಸಂಘ, ಶಿಖಾರಿಪುರದ ಶಿವಾಜಿ ಡೊಳ್ಳಿನ ಯುವಕ ಸಂಘ, ಸೊರಬ ತಾಲೂಕಿನ ಕಾಳಿಕಾಂಬ ಯುವಕ ಸಂಘ, ಕೊಪ್ಪಳದ ಬೀರಲಿಂಗೇಶ್ವರ ಡೊಳ್ಳು ಕಲಾತಂಡ, ಯಾದಗಿರಿಯ ಕನಕದಾಸ ಯುವಕರ ಸಂಘ, ಗುಲ್ಬರ್ಗದ ಬೀರಲಿಂಗೇಶ್ವರ ಡೊಳ್ಳಿನ ಸಂಘ ಇವರು ಕಲಾ ಪ್ರದರ್ಶನ ನಡೆಸಿಕೊಟ್ಟರು.
ಕಿವಿಗಡಚ್ಚಿಕುವ ತಮಟೆ ಹಾಗೂ ನಗಾರಿ ವಾದ್ಯವನ್ನು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ನಗಾರಿ ಮತ್ತು ತಮಟೆ ಕಲಾವೃಂದ, ಚಿಕ್ಕಮಗಳೂರಿನ ಮುನಿವೆಂಕಟಪ್ಪ ತಂಡದವರು ತಮಟೆ ವಾದನವನ್ನೂ, ಬೆಂಗಳೂರಿನ ಗ್ರಾಮಾಂತರದ ಇಟ್ಟಸಂದ್ರದ ಸ್ಫೂರ್ತಿ ಮಹಿಳಾ ತಮಟೆ ನೃತ್ಯ ಕಲಾತಂಡ ಮಹಿಳೆಯರು ತಮಟೆ ವಾದ್ಯ ಬಾರಿಸಿದ್ದು ಹಾಗೂ ಕುಣಿಯುತ್ತಾ ಸಾಗಿದ್ದು ಗಮನ ಸೆಳೆಯಿತು.
ಕುಣಿತಗಳ ಕಮಾಲ್!: ಬೆಳಗಾವಿಯ ಬಸವೇಶ್ವರ ಯುವಕ ಮಂಡಳದ ಜಗ್ಗಲಿಗಿ ಮೇಳ, ಬೆಳಗಾವಿಯ ಓಂಕಾರ ಝೂಂಜ್ ಪಥಕ್ ತಂಡ, ಚಿಕ್ಕೊಡಿಯ ಝೂಂಜ್ ಪಥಕ್ ಸಂಘ, ಹಾವೇರಿಯ ಮಾರಿಕಾಂಬ ಕಲಾ ಮತ್ತು ಹವ್ಯಾಸಿ ಕಲಾ ಸಂಘದವರು ಝೂಂಜ್ ಪಥಕ್, ಕೊಪ್ಪಳದ ಬೀರಲಿಂಗೇಶ್ವರ ಜಾನಪದ ಕಲಾ ಸಂಘ ಹಾಗೂ ಬಾಗಲಕೋಟೆಯ ಗುಹೇಶ್ವರ ಕಲಾ ಸಂಘದವರು ಕರಡಿಮೇಳ, ಬಿಜಾಪುರದ ಮಲ್ಲಿಕಾರ್ಜುನ ಹೆಜ್ಜೆ ಮೇಳ ಸಂಘದವರ ಹೆಜ್ಜೆ ಮೇಳ, ಮಂಡ್ಯದ ಚಿಗುರು ಸಾಂಸ್ಕೃತಿಕ ಜಾನಪದ ಕಲಾ ಸಂಘ ಹಾಗೂ ತುಮಕೂರಿನ ಡಿ.ಎಸ್. ಗಂಗಾಧರ ಗೌಡ ತಂಡದ ಸೋಮನ ಕುಣಿತ ಹಾಗೂ ಕನಕಪುರದ ಶಿವಮಾದಯ್ಯ ತಂಡದ ಪಟದ ಕುಣಿತವಿತ್ತು.
ನೃತ್ಯ, ಕೋಲಾಟ: ಚಾಮರಾಜನಗರದ ಭಕ್ತ ಕನಕದಾಸ ಗೊರವರ ಕುಣಿತ ಕಲಾ ಸಂಘದ ಗೊರವರ ಕುಣಿತ, ಶಿವಮೊಗ್ಗದ ನವರಸ ಕಲಾತಂಡದ ಕೊರಗರ ನೃತ್ಯ, ಬೆಂಗಳೂರಿನ ಕೃಷ್ಣ ಜನಪದ ನವೀಲು ನೃತ್ಯ ಕಲಾತಂಡದ ನವೀಲು ನೃತ್ಯ, ಚಿಕ್ಕಮಗಳೂರಿನ ಖುಷಿ ನೃತ್ಯ ಮತ್ತು ಸಾಹಸ ಸಂಘ ಗೊಂಬೆ ಕುಣಿತ, ಮೈಸೂರಿನ ಕೃಷ್ಣವೇಣಿ ವೇಲುನೃತ್ಯ ಕಲಾಸಂಘ ಹಾಗೂ ಬೆಳಗಾವಿ ಸದಾಶಿವ ಭೀಮಪ್ಪ ತಂಡದ ಕೀಲುಕುದುರೆ, ಧಾರವಾಡದ ಸ್ವರ್ಣಮಯೂರಿ ಸಾಂಸ್ಕೃತಿಕ ಗೊಂಬೆ ತಂಡದ ಗಾರಡಿ ಗೊಂಬೆ, ದಕ್ಷಿಣ ಕನ್ನಡದ ಸುಗಿಪು ಕಲಾ ಕಂಗೀಲು ನೃತ್ಯ ತಂಡದ ಕಂಗೀಲು ನೃತ್ಯ, ಬಾಗಲಕೋಟೆ ಗಜಾನನ ಯುವಕ ಮಂಡಳಿ ಹೂವಿನ ನೃತ್ಯ, ಚಿತ್ರದುರ್ಗದ ಪಾಂಡುರಂಗ ಯುವ ಸಂಘ ಹಾಗೂ ಹಾಸನದ ಬಿ.ಟಿ. ಮಾನವ ತಂಡದ ಕೋಲಾಟ ಪ್ರೇಕ್ಷಕರಿಗೆ ಮುದ ನೀಡಿತು.
ರಾಮ, ಲಕ್ಷ್ಮಣ, ರಾವಣ, ಆಂಜನೇಯ ಮುಂತಾದ ವೇಷತೊಟ್ಟು ಮಕ್ಕಳ ರಂಜಿಸಿದ ಬಳ್ಳಾರಿಯ ಹಗಲುವೇಷ ಕಲಾಸಂಘದ ಹಗಲು ವೇಷ,  ಕೋಲಾರದ ಲಕ್ಷ್ಮೀನರಸಿಂಹ ನಾಟಕ ಮಂಡಳಿಯ ಹುಲಿಪಾಳೇಗಾರ ವೇಷ ಹಾಗೂ ಜತೆಯಲ್ಲಿ ಸಾಗಿದ ಜೂನಿಯರ್ ವಿಷ್ಣುವರ್ಧನ್, ಕೊಡಗಿನ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕ್ರೀಡಾ ಅಕಾಡೆಮಿಯ ಬೊಳಕಾಟ್ ಮತ್ತು ಉಮ್ಮತಾಟ್ ನೃತ್ಯ, ಉತ್ತರ ಕನ್ನಡದ ಸಂಕಲ್ಪ ಸೇವಾ ಸಂಘದ  ಯಕ್ಷಗಾನ, ದಾವಣಗರೆಯ ಬಸವಕಲಾ ಲೋಕ ತಂಡದ ನಂದೀಕೋಲು ಸಮ್ಮಾಳ, ಗದುಗಿನ ಶಾರದ ಶಹನಾಯಿ ಕಂಪನಿಯ ಶಹನಾಯಿ ವಾದನ ಹಾಗೂ ಬಿದರಿನ ಯಲ್ಲಮ್ಮ ಚಿಟಕಿ ಭಜನಾ ತಂಡದ ಚಿಟಕಿ ಭಜನೆ ಉದ್ದಕ್ಕೂ ಸಾಗಿತು.
ಮೈಸೂರು ಬಸವೇಶ್ವರ ವೀರಗಾಸೆ ಜನಪದ ಕಲಾತಂಡದ ವೀರಗಾಸೆ, ಜಯಪುರದ ವಾಲ್ಮೀಕಿ ಯುವಕರ ಸಂಘದ ನಂದೀಧ್ವಜ, ವಿದ್ವಾನ್ ವಿ. ನಟರಾಜ್ ಅವರ ನಾದಸ್ವರ, ಆನೆಗಾಡಿಯಲ್ಲಿ ಸಾಗಿದ ಕರ್ನಾಟಕ ವಾದ್ಯ ವಂೃದದೊಂದಿಗೆ ಕಲಾಮೇಳ ಅಂತ್ಯಗೊಂಡಿತು. ಸುಮಾರು 70 ಕಲಾತಂಡಗಳು ಭಾಗವಹಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement