ನಕಲಿ ಪಾಸ್ ಹಾವಳಿ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಸಂದರ್ಭದಲ್ಲಿ ವಿಶೇಷ ಅತಿಥಿಗಳಿಗೆ ನೀಡಿದ್ದ ಪಾಸ್ ನಕಲಿಯಾಗಿರುವುದು ಕಂಡುಬಂತು. ಪತ್ರಕರ್ತರಿಗಾಗಿ ಮೀಸಲಿಟ್ಟಿದ್ದ ಗ್ಯಾಲರಿಯ ಎದುರು ನಿಂತಿದ್ದ ವ್ಯಕ್ಯಿಯೊಬ್ಬ ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಆತನ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಆತ ತನ್ನ ಬಳಿ ಇದ್ದ ಪಾಸ್ ತೋರಿಸಿದ್ದಾನೆ. ಆದರೆ ಪಾಸ್ನಲ್ಲಿ ಬಾರ್ ಕೋಡ್ ಆಗಲಿ, ದಸರಾ ಎಂಬ್ಲಮ್ ಆಗಲಿ ಇರಲಿಲ್ಲ. ಕೂಡಲೆ ಆ ಎಲ್ಲಾ ಪಾಸ್ಗಳನ್ನು ವಶಕ್ಕೆ ಪಡೆದು ನಾಶಪಡಿಸಿದರು.
ಇದನ್ನು ನೀವೆ ಮುದ್ರಿಸಿಕೊಂಡಿದ್ದೀರಿ. ದಸರಾ ಅಂಗವಾಗಿ ಜಿಲ್ಲಾಡಳಿತ ಮುದ್ರಿಸಿದ ಪಾಸ್ ಅಲ್ಲ ಎಂದು ಪೊಲೀಸರು ಹೇಳುತ್ತಿದ್ದಂತೆಯೆ ಆತ ಸಚಿವ ಎಚ್.ಸಿ. ಮಹದೇವಪ್ಪ ಅವರ ಪಿಎಸ್ ಅವರ ಬಳಿ ಈ ಪಾಸ್ ಪಡೆದಿರುವುದಾಗಿ ತಿಳಿಸಿದ.
ಸ್ವಸ್ಥಾನಕ್ಕೆ ಮರಳಿ ಅಂಬಾರಿ
ಮೈಸೂರು: ನಾಡದೇವತೆ ತಾಯಿ ಚಾಮುಂಡೇಶ್ವರಿ ವಿಗ್ರಹವುಳ್ಳ ಚಿನ್ನದ ಅಂಬಾರಿಯು ಸೋಮವಾರ ಸಂಜೆ ಅರಮನೆಯ ಸ್ವಸ್ಥಾನದಲ್ಲಿ ಇರಿಸಲಾಗಿದೆ. 750 ಕೆ.ಜಿ. ತೂಕದ ಚಿನ್ನ ಅಂಬಾರಿಯನ್ನು ಅರ್ಜುನ ಆನೆಯು ಅರಮನೆಯಿಂದ ಬನ್ನಿಮಂಟಪದವರೆಗೆ ಹೊತ್ತುಕೊಂಡು ಸಾಗಿದನು. ಬನ್ನಿಮಂಟಪ ತಲುಪುತ್ತಿದ್ದಂತೆ ಅಂಬಾರಿಯನ್ನು ಬಿಚ್ಚಿ ಲಾರಿಯಲ್ಲಿ ಇರಿಸಿ ಅರಮನೆಗೆ ಕಳುಹಿಸಕೊಡಲಾಗಿದೆ. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಆನೆಗಳು ಅರಮನೆ ಆನೆ ಬಿಡಾರಕ್ಕೆ ಸುರಕ್ಷಿತವಾಗಿ ಬಂದು ತಲುಪಿ, ವಿಶ್ರಾಂತಿ ಪಡೆಯುತ್ತಿವೆ ಎಂದು ಆನೆ ವೈದ್ಯ ಡಾ. ನಾಗರಾಜ್ ತಿಳಿಸಿದರು.
ಶೂ ಹಾಕಿಕೊಂಡು ವೇದಿಕೆ ಏರಿದ ಸಲೀಂ
ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ವಿಗ್ರಹ ಅಲಂಕೃತಗೊಂಡ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಅರ್ಪಿಸಲು ವೇದಿಕೆ ಮೇಲೆರಿದ್ದ ನಗರ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ತಾವು ಶೂ ಹಾಕಿದ್ದೇನೆ ಎಂಬುದನ್ನೇ ಮರೆತು ಪೇಚಿಗೆ ಸಿಲುಕಿದರು. ಪುಷ್ಪಾರ್ಚನೆ ಸಲ್ಲಿಸಲು ವೇದಿಕೆ ಮೇಲೆ ಹತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಮೇಯರ್ ಎನ್.ಎಂ. ರಾಜೇಶ್ವರಿ, ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ, ಡಿಸಿ ಸಿ. ಶಿಖಾ ಅವರು ಬರಿಗಾಲಿನಲ್ಲಿ ವೇದಿಕೆ ಏರಿದರು. ಅವರೊಟ್ಟಿಗೆ ಗಾಬರಿಯಿಂದಲೇ ವೇದಿಕೆ ಏರಿದ ಸಲೀಂ ಶೂ ಹಾಕಿಕೊಂಡಿದ್ದರು. ಅಲ್ಲದೇ ಶೂನಿಂದ ಕಾಲು ಎಡವಿ ಬೀಳುವಂತೆಯೂ ಆಯಿತು. ಬಳಿಕ ವೇದಿಕೆ ಬಂದ ಕೂಡಲೇ ಅವರ ಸಹದ್ಯೋಗಿ ಶೂ ಕಳಚುವಂತೆ ತಿಳಿ ಹೇಳಿದರು. ಆನಂತರ ಶೂ ಕಳಚಿ ದೇವಿಗೆ ಪುಷ್ಪಾರ್ಚನೆ ಮಾಡಿದರು.
ನಿಲ್ದಾಣಗಳಲ್ಲಿ ಜನದಟ್ಟಣೆ
ದಸರಾ ಜಂಬೂಸವಾರಿ ಮುಗಿದ ಬಳಿಕ ನಗರ ಬಸ್ ನಿಲ್ದಾಣ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಾಯಿತು.ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ನಗರದ ಹೃದಯ ಭಾಗದಲ್ಲಿ ಜನಸಂಖ್ಯೆ ಅಧಿಕವಾಗಿತ್ತು. ಜಂಬೂಸವಾರಿ ಮುಗಿದ ಬಳಿಕ ಜನರು ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್ ನಿಲ್ದಾಣದತ್ತ ಮುಖ ಮಾಡಿದರು. ನಗರದ ವಿವಿಧ ಬಡಾವಣೆಗಳಿಗೆ ದಸರಾ ಮುಗಿದ ಬಳಿಕ ಬಸ್ ವ್ಯವಸ್ಥೆ ಕಲ್ಪಿಸಲಾಯಿತು. ಹೀಗಾಗಿ ಬಸ್ ನಿಲ್ದಾಣ ಪ್ರಯಾಣಿಕರಿಂದ ತುಂಬಿ ಹೋಗಿತ್ತು. ರಾತ್ರಿ 10ರವರೆಗೂ ಬಸ್ಸುಗಳು ಸಂಚರಿಸಿದವು. ಬೆಳಗ್ಗೆಯಿಂದ ನಗರದ ಹೃದಯ ಭಾಗಕ್ಕೆ ಭಾರಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ನಗರ ಬಸ್ ನಿಲ್ದಾಣದ ಬದಲು ನಗರದ ಹೊರವಲಯದ ನಾಲ್ಕು ಕಡೆಗಳಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ವ್ಯವಸ್ಥೆ ಮಾಡಲಾಗಿತ್ತು. ಊಟಿ ರಸ್ತೆಯಿಂದ ಬರುವ ವಾಹನಗಳಿಗೆ ಗುಂಡೂರಾವ್ ನಗರದಲ್ಲೆ ತಡೆವೊಡ್ಡಲಾಯಿತು. ಅಲ್ಲಿಂದ ಜನರು ಆಟೋ ಮೂಲಕ ನಗರಕ್ಕೆ ಆಗಮಿಸಿದರು.
ಭರ್ಜರಿ ವ್ಯಾಪಾರ: ಹೊಟೇಲ್ಗಳು, ಚಿಲ್ಲರೆ ಅಂಗಡಿಗಳಲ್ಲೂ ಭರ್ಜರಿ ವ್ಯಾಪಾರ ನಡೆಯಿತು. ಮೆರವಣಿಗೆ ವೀಕ್ಷಿಸಲು ಬಿಸಿಲಿನಲ್ಲಿ ಬೆಂದು ಬಸವಳಿದಿದ್ದ ಜನರು ಸೌತೆಕಾಯಿ, ಹಣ್ಣಿನ ಜ್ಯೂಸ್, ತಾಜಾ ಪಾನೀಯ ಸವಿಯಲು ಅಂಗಡಿ, ಬೇಕರಿಗಳತ್ತ ಮುಗಿಬಿದ್ದರು. ಹೀಗಾಗಿ ಎಲ್ಲಾ ಕಡೆಯೂ ವ್ಯಾಪಾರ ಭರ್ಜರಿಯಾಗಿಯೇ ನಡೆಯಿತು. ಫಾಸ್ಟ್ಫುಡ್ಗಳು ರಸ್ತೆಯ ಇಕ್ಕೆಲಗಳಲ್ಲಿ ತೆರೆದಿದ್ದರಿಂದ ಹೆಚ್ಚು ಜನರಿಗೆ ಊಟ ದೊರಕಿದಂತಾಯಿತು.
ಅರಮನೆ ಬೆಳಕಿನತ್ತ ಜನ: ಜಂಬೂಸವಾರಿ, ಪಂಜಿನ ಕವಾಯಿತು ನೋಡಿದ ಪ್ರವಾಸಿಗರು ನಂತರ ಅರಮನೆಯತ್ತ ಆಗಮಿಸಿದರು. ದೀಪಾಲಂಕಾರದಿಂದ ಬೆಳಗುತ್ತಿದ್ದ ಅರಮನೆಯನ್ನು ವೀಕ್ಷಿಸಿದರು. ಅಲ್ಲಿಯೇ ನಿಂತು ಫೋಟೋ ಕ್ಲಿಕ್ಕಿಸಿದರು. ಅರಮನೆ ಆವರಣದಲ್ಲಿ ಸುತ್ತಾಡಿದರು.
ಕೆಪಿಸಿಸಿಗೆ ನೇಮಕ
ಮೈಸೂರು: ಜಿಲ್ಲಾ ಕಾಂಗ್ರೆಸ್ ವ್ಯಾಪ್ತಿಗೆ ಬರುವ ಪಿರಿಯಾಪಟ್ಟಣ ಹಾಗೂ ಹುಣಸೂರು ತಾಲೂಕಿಗೆ ಕೆಪಿಸಿಸಿ ಸದಸ್ಯರಾಗಿ ಆರ್.ಡಿ. ಕೊಪ್ಪಲಿನ ಟಿ.ಡಿ. ಸ್ವಾಮಿ ಹಾಗೂ ಜಿಪಂ ಮಾಜಿ ಸದಸ್ಯ ಎನ್. ಮಂಜುನಾಥ್ ನೇಮಕವಾಗಿದ್ದಾರೆ.
ರಾಮು ನೇಮಕ
ಮೈಸೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ. ರಾಮು ಅವರು ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದ 2013-18ನೇ ಸಾಲಿಗೆ ಉಪಾಧ್ಯಕ್ಷರಾಗಿ ಎರಡನೇ ಬಾರಿಗೆ ನೇಮಕವಾಗಿದ್ದಾರೆ.