ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನೃತ್ಯ ಸಂಭ್ರಮ, ಸಾಹಸ ವೈವಿಧ್ಯ...

Srinivasa Murthy VN
Updated On : 15 Oct 2013, 1:37 am

ಕ.ಪ್ರ.ವಾರ್ತೆ ಮೈಸೂರು ಅ. 14
ದಸರಾ ಜಂಬೂಸವಾರಿಯಲ್ಲಿ ರಾಜ್ಯದ ಕಲಾತಂಡಗಳೊಂದಿಗೆ ವಿವಿಧ ರಾಜ್ಯಗಳ ಕಲಾತಂಡಗಳು ಭಾಗವಹಿಸಿ ತಮ್ಮ ಪ್ರತಿಭೆ ಮೂಲಕ ಸಾರ್ವಜನಿಕರ ಗಮನ ಸೆಳೆದರು.
ಅಸ್ಸಾಂ ಕಲಾವಿದರು ಅಲ್ಲಿನ ಸಾಂಪ್ರದಾಯಿಕ ಉಡುಪು ತೊಟ್ಟು ಕುಸಾನು ಜಾನಪದ ನೃತ್ಯ ಪ್ರದರ್ಶಿಸಿದರು. ತಂಡದಲ್ಲಿ ಮಹಿಳಾ ಮತ್ತು ಪುರುಷ ಕಲಾವಿದರಿದ್ದರು. ನೃತ್ಯದ ಜತೆಗೆ ಕಲಾವಿದರು ಬಾಯಿಗೆ ಸೀಮೆಎಣ್ಣೆ ತುಂಬಿಕೊಂಡು ಬೆಂಕಿ ಹೊರಸೂಸುವ ಹಾಗೂ ಕೈಯಲ್ಲಿನ ಕಿರುಬೆರಳಿನ ಮೇಲೆ ದೀಪದ ತಟ್ಟೆ ತಿರುಗಿಸಿ ಗಮನ ಸೆಳೆದರು.
ಮಧ್ಯಪ್ರದೇಶದ ಕಲಾವಿದರು ಬಾದಯಿ ನೃತ್ಯವನ್ನೂ, ಪಂಜಾಬ್ ಕಲಾವಿದರು ಬಾಂಗ್ರಾ ನೃತ್ಯವನ್ನೂ, ಕೇರಳ ಕಲಾವಿದರು ಥೈಯಮ್ ನೃತ್ಯವನ್ನೂ ಹಾಗೂ ಪಟಿಯಾನಿ ನೃತ್ಯವನ್ನೂ, ಮಣಿಪುರದ ಕಲಾವಿದರು ಮಣಿಪುರಿ ನೃತ್ಯವನ್ನೂ ಹಾಗೂ ಪಿರಿಯಾಪಟ್ಟಣದ ಬೈಲುಕುಪ್ಪೆಯ ಪುನರ್ವಸತಿ ಕೇಂದ್ರದ ಕಲಾವಿದರು ಟಿಬೆಟಿಯನ್ ನೃತ್ಯವನ್ನೂ ಪ್ರದರ್ಶಿಸಿದರು. ಏಕತೆ ರಷ್ಯಾದೇಶದ ಕಲಾವಿದರು ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಕಾರ್ಯಕರ್ತರ ಜತೆಗೂಡಿ ವಿವಿಧತೆಯಲ್ಲಿ ಏಕತೆ ಎಂಬ ಶಾಂತಿ ಸಂದೇಶ ಸಾರಿದ್ದು ವಿಶೇಷ.
ನಂಜನಗೂಡು ತಾಲೂಕಿನ ತಾಯೂರಿನ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಜನಾಂಗ ಕ್ಷೇಮಾಭಿವೃದ್ಧಿ ಸಂಘದ ಸಿದ್ದರಾಜು ಮತ್ತು ತಂಡದವರು ಮರಗಾಲು ಕುಣಿತ ನಡೆಸಿಕೊಟ್ಟರು. ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರದ ಕನಕ ಯುವಕರ ಕಲಾ ಸಂಘದವರು ದೊಣ್ಣೆ ವರಸೆ ಪ್ರದರ್ಶಿಸಿದರು. ಅಲ್ಲದೆ ಮರಗಾಲಿನ ಮೇಲೆ ನಡೆಸುವ ದೊಣ್ಣೆ ವರಸೆ, ಮಲಗಿದ ವ್ಯಕ್ತಿಯ ಮೇಲೆ ಬಾಲೆಹಣ್ಣು ಕತ್ತರಿಸುವುದು ಹಾಗೂ ತಲೆಯ ಮೇಲೆ ಬಾಟಲಿಯಿಟ್ಟು ಅದರ ಮೇಲೆ ತೆಂಗಿನಕಾಯಿಯಿಟ್ಟು ಕತ್ತಿಯಿಂದ ಒಡೆಯುವ ಕಲೆ ನೋಡುಗರ ರೋಮಾಂಚನಗೊಳಿಸಿತು.
ಆದಿವಾಸಿಗಳ ಈ ಹಾಡು, ಈ ಕುಣಿತ... ದಸರಾ ಮೆರವಣಿಗೆಯಲ್ಲಿ ಸಾಗಿದ ಕಲಾತಂಡದಲ್ಲಿ ವಿವಿಧ ಆದಿವಾಸಿಗಳ ತಂಡದವರು ತಮ್ಮ ಸಾಂಪ್ರದಾಯಿಕ ನೃತ್ಯ ವೈಭವ ನಡೆಸಿಕೊಟ್ಟದ್ದು ವಿಶೇಷ. ಮರದ ಎಲೆಗಳು, ಪಕ್ಷಿಗಳ ಗರಿಗಳು ಹಾಗೂ ವಿವಿಧ ಪೋಷಾಕು ಹಾಗೂ ಬಣ್ಣಗಳಿಂದ ಶೃಂಗರಿಸಿಕೊಂಡು ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟದ ಪುಷುಮಾಲೆ ಕಲಾ ಸಂಘದವರು ಸೋಲಿಗರ ಕುಣಿತವನ್ನೂ, ಚಿತ್ರದುರ್ಗದ ಜಾನಪದ ಕಲಾ ತಂಡದವರು ಖಾಸಾ ಬೇಡರ ಪಡೆ ನೃತ್ಯವನ್ನೂ, ರಾಯಚೂರಿನ ಹುಲಿಗಮ್ಮದೇವಿ ಪರಿಶಿಷ್ಟ ಮಹಿಳಾ ಜಾನಪದ ಸಾಂಸ್ಕೃತಿಕ ಕಲಾ ಸಂಘದ ಸದಸ್ಯೆಯರು ಲಂಬಾಣಿ ನೃತ್ಯ ಪ್ರದರ್ಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement