ದಸರಾ ; ಡೊಳ್ಳು ಕುಣಿತ ಪ್ರಥಮ
ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ನಡೆದ ವಿಜಯದಶಮಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾಂಸ್ಕೃತಿಕ ಕಲಾತಂಡಗಳ ಪೈಕಿ 3 ತಂಡಗಳಿಗೆ ಬಹುಮಾನ ನೀಡಲಾಗಿದೆ. ಯಾದಗಿರಿ ಜಿಲ್ಲೆಯ ಕನಕದಾಸ ಯುವಕ ಮಂಡಳಿಯ ಜಟ್ಟಪ್ಪ, ಲಿಂಗರಾಯ ಡೊಳ್ಳಿನ ಸಂಘದ ಕಕ್ಕೇರಾ ತಂಡದ ಡೊಳ್ಳು ಕುಣಿತಕ್ಕೆ ಮೊದಲ ಬಹುಮಾನ ಲಭಿಸಿದೆ. ಹಾಗೆಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಇಟ್ಟಸಂದ್ರ ಗ್ರಾಮದ ಸ್ಫೂರ್ತಿ ಮಹಿಳಾ ತಮಟೆ ನೃತ್ಯ ಕಲಾ ತಂಡದ ಶಿವಮ್ಮ ತಂಡದ ಮಹಿಳಾ ತಮಟೆ ವಾದನಕ್ಕೆ ದ್ವಿತೀಯ ಬಹುಮಾನ ಹಾಗೂ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ತಾಯೂರು ಗ್ರಾಮದ ಮಹರ್ಷಿ ವಾಲ್ಮೀಕಿ ನಾಯಕ ಜನಾಂಗ ಕ್ಷೇಮಾಭಿವೃದ್ಧಿ ಸಂಘದ ಸಿದ್ದರಾಜು ತಂಡದ ಮರಗಾಲು ಕುಣಿತಕ್ಕೆ ತೃತೀಯ ಬಹುಮಾನ ನೀಡಲಾಗಿದೆ ಎಂದು ಮೆರವಣಿಗೆ ಉಪಸಮಿತಿ ಅಧ್ಯಕ್ಷರಾದ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ತಿಳಿಸಿದ್ದಾರೆ.
ಕೆ- ಸೆಟ್, ನೆಟ್ ಪರೀಕ್ಷಾ ತರಬೇತಿ
ಮೈಸೂರು: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಕೆ- ಸೆಟ್ ಮತ್ತು ಯುಜಿಸಿ ಆಯೋಜಿಸುವ ನೆಟ್ ಪರೀಕ್ಷಾ ತರಬೇತಿ ಶಿಬಿರವನ್ನು ಅ.17ರ ಬೆಳಗ್ಗೆ 10.30ಕ್ಕೆ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದೆ.ನಾಗರಹೊಳೆ ಅರಣ್ಯ ಸಂರಕ್ಷಣಾಧಿಕಾರಿ ಆರ್. ಗೋಕುಲ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಮುಕ್ತ ವಿವಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಅಧ್ಯಕ್ಷತೆ ವಹಿಸುವರು.
ವಾಲ್ಮೀಕಿ ಜಯಂತಿ; ಹಾಜರಾತಿ ಕಡ್ಡಾಯ
ಮೈಸೂರು: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅ.18ರ ಬೆಳಗ್ಗೆ 10ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಡಲಿದೆ. ಬಳಿಕ ಮಧ್ಯಾಹ್ನ 12ಕ್ಕೆ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಸರ್ಕಾರಿ ನೌಕರರೆಲ್ಲರೂ ಕಡ್ಡಾಯವಾಗಿ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ.
ಅವಿನಾಶ್ಗೆ ಪಿಎಚ್.ಡಿ ಪದವಿ
ಮೈಸೂರು: ಡಾ. ಎನ್.ಬಿ. ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎಂ.ವಿ. ಅವಿನಾಶ್ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ತಳಿಶಾಸ್ತ್ರ ವಿಷಯಕ್ಕೆ ಪಿಎಚ್.ಡಿ ಪದವಿ ನೀಡಿದೆ.
ನಾಳೆ ಚದುರಂಗ ಟೂರ್ನಿ
ಮೈಸೂರು ಚೆಸ್ ಕ್ಲಬ್ನಿಂದ 15 ವರ್ಷದೊಳಗಿನ ಶಾಲಾ ಬಾಲಕ- ಬಾಲಕಿಯರಿಗಾಗಿ ಮುಕ್ತ ಚದುರಂಗ ಪಂದ್ಯಾವಳಿಯನ್ನು ಅ.17ರ ಸಂಜೆ 6ಕ್ಕೆ ಸರಸ್ವತಿಪುರಂನ ಜ್ಞಾನೋದಯ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದು, ಆಸಕ್ತರು ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಬಹುದು. ಮೊ. 98805 47121 ಸಂಪರ್ಕಿಸಬಹುದು.
ಕ್ಯಾನ್ಸರ್ ತಪಾಸಣೆ ಶಿಬಿರ
ವಾಣಿವಿಲಾಸ ರಸ್ತೆಯಲ್ಲಿರುವ ಪ್ರೀತಿ ಕ್ಯಾನ್ಸರ್ ಸೆಂಟರ್ನಲ್ಲಿ ಅ.17ರಂದು ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದ್ದು, ಒಂದು ತಿಂಗಳಿಗೂ ಮೇಲ್ಪಟ್ಟು ವಾಸಿಯಾಗದ ಗಾಯ, ರಕ್ತಸ್ರಾವ, ಊತ, ಗಡಸುತನ, ನುಂಗುವಾಗಿನ ತೊಂದರೆ, ಗಂಟಲಲ್ಲಿ ಉರಿತ ಅಥವಾ ತಡೆತ, ಧ್ವನಿ ಬದಲಾವಣೆ ಇರುವ ರೋಗಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ವಿವರಕ್ಕೆ ದೂ. 0821- 4259259 ಸಂಪರ್ಕಿಸಬಹುದು.
ಬೆಳದಿಂಗಳ ಸಂಗೀತ
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಅ.18ರ ಸಂಜೆ 6ಕ್ಕೆ ಹಾರ್ಮೋನಿಯಂ ವಾದಕ ಸಿ. ರಾಮದಾಸ್ ಅವರು ಬೆಳದಿಂಗಳ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಸಿ.ಎನ್. ಚಂದ್ರಶೇಖರ್- ವಯೋಲಿನ್, ಸಿ. ಚೆಲುವರಾಜು- ಮೃದಂಗ, ಎನ್. ಗುರುಮೂರ್ತಿ- ಘಟ ನುಡಿಸುವರು.
ಸಂಗೀತ ಕಾರ್ಯಕ್ರಮ
ಕುವೆಂಪುನಗರದಲ್ಲಿರುವ ಗಾನಭಾರತಿಯಲ್ಲಿ ಅ.18ರ ಸಂಜೆ 6ಕ್ಕೆ ವೀಣಾ ಸುರೇಶ್ ಅವರು ವಯೋಲಿನ್ ಸಂಗೀತ ಕಚೇರಿ ನಡೆಸಲಿದ್ದು, ಎಚ್.ಎಲ್. ಶಿವಶಂಕರಸ್ವಾಮಿ ಮೃದಂಗ, ಎಚ್.ಎಲ್. ಅನಂತಕೃಷ್ಣ ಘಟ ನುಡಿಸಿ ಸಾಥ್ ನೀಡುವರು.
'ಮಿತ ಆಹಾರ ಸೇವನೆ ಅಗತ್ಯ'
ಹುಣಸೂರು: ಸಾರ್ವಜನಿಕರು ಸಕ್ಕರೆ ರೋಗ ನಿಯಂತ್ರಣ ಮಾಡಲು ಹಿತ-ಮಿತ ಆಹಾರ ಸೇವನೆ, ವ್ಯಾಯಾಮ, ಯೋಗಾಸನ ಮಾಡುವ ಮೂಲಕ ತಡೆಗಟ್ಟಬಹುದು ಎಂದು ಮಧುಮೇಹ ಹಾಗೂ ರಕ್ತದೊತ್ತಡ ತಜ್ಞ ಡಾ. ಬ್ರಿಜ್ ಮೋಹನ್ಕುಮಾರ್ ಹೇಳಿದರು. ರೋಟರಿ ಸಂಸ್ಥೆಯು ಆಯೋಜಿಸಿದ್ದ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಉಚಿತ ತಪಾಸಣಾ ಶಿಬಿರದಲ್ಲಿ ಮಾಹಿತಿ ನೀಡಿದ ಅವರು, ಸಕ್ಕರೆ ಕಾಯಿಲೆಯುಳ್ಳವರು ಬರೀ ರಾಗಿಯಿಂದ ಮಾಡಿದ ಆಹಾರ ಸೇವಿಸಬೇಕೆನ್ನುವುದು ಅವೈಜ್ಞಾನಿಕ. ಅನ್ನ, ಹಣ್ಣು ಸೇವಿಸಬಹುದು. ಆದರೆ, ಹಸಿವು ಹೆಚ್ಚಾಗದಂತೆ ನೋಡಿಕೊಳ್ಳಬೇಕು, ನಿತ್ಯ ನಡಿಗೆ ಮಾಡಬೇಕು, ಬೀಡಿ, ಸಿಗರೇಟು, ಮದ್ಯವನ್ನು ವರ್ಜಿಸಬೇಕು, ಶರೀರ, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಆಗ್ಗಾಗೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿ, ಮನೆಯಲ್ಲೇ ಇದ್ದು ಮಾಡಬಹುದಾದ ವ್ಯಾಯಾಮಗಳನ್ನು ತಿಳಿಸಿಕೊಟ್ಟರು. ಶಿಬಿರದಲ್ಲಿ ವೈದ್ಯರು ಆರೋಗ್ಯ ತಪಾಸಣೆ ಮಾಡಿ, ಅಗತ್ಯ ಸಲಹೆ ನೀಡಿದರು. ಬೆಂಗಳೂರು ಮೈಕೋ ಔಷಧಿ ಕಂಪನಿ ವತಿಯಿಂದ ಉಚಿತ ಔಷಧಿ ವಿತರಿಸಿದರು. ಶಿಬಿರವನ್ನು ರೋಟರಿ ಸಂಸ್ಥೆ ಅಧ್ಯಕ್ಷ ರಾಜಶೇಖರ್ ಉದ್ಘಾಟಿಸಿದರು. ಡಾ. ವೃಷಬೇಂದ್ರಪ್ಪ, ಆರ್. ಆನಂದ್, ಸ್ವಾಮಿಗೌಡ, ಪ್ರಶಾಂತ್, ಡಾ. ಸರೋಜಿವಿಕ್ರಂ, ಅನಂತರಾಜೇಅರಸ್, ಶಿವಕುಮಾರ್ ಇದ್ದರು.
ಮನೆತನದ ದೇವರುಗಳ ಉತ್ಸವ
ಹುಣಸೂರು: ವಿಜಯದಶಮಿ ಹಬ್ಬದ ಆಂಗವಾಗಿ ಗ್ರಾಮ ದೇವತೆ ಮುತ್ತುಮಾರಮ್ಮ ಹಾಗೂ ಕಾಳಮ್ಮ ದೇವರು ಸೇರಿದಂತೆ ಹಲವು ಮನೆತನದ ದೇವರುಗಳ ಉತ್ಸವ ನೆರವೇರಿತು. ಪಟ್ಟಣದ ಎಲ್ಲ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿತು. ಮನೆಗಳ ಮುಂದೆ ಶುಚಿಗೊಳಿಸಿ, ರಂಗೋಲಿ ಹಾಕಿ, ಪೂಜೆ ಪುರಸ್ಕಾರದ ಮೂಲಕ ಭಕ್ತಿಯನ್ನು ಮೆರೆದರು.
ನಾಳೆ ತಪಾಸಣೆ
ಟಿ. ನರಸೀಪುರ: ನಾರಾಯಣ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಯು ವಾಜಪೇಯಿ ಆರೋಗ್ಯಶ್ರೀಯವರ ಸಹಯೋಗದೊಂದಿಗೆ ಅ.17ರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಿದೆ. ಹೃದ್ರೋಗ, ಹೃದಯ ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ಮೂತ್ರರೋಗ, ಗ್ರಂಥಿ ಶಸ್ತ್ರಚಿಕಿತ್ಸೆ ಹಾಗೂ ವಿವಿಧ ದೈಹಿಕ ಆಘಾತಗಳಿಗೆ ಉಚಿತ ತಪಾಸಣೆ ಮಾಡುವರು. ವಿವರಕ್ಕೆ ಮೊ. 96206 25258 ಸಂಪರ್ಕಿಸಬಹುದು.
ನಾಳೆ ಕಾವೇರಿ ಮಾತೆ ಪ್ರತಿಮೆ ಅನಾವರಣ
ಬೈಲಕುಪ್ಪೆ: ಕಾವೇರಿ ತುಲಾ ಸಂಕ್ರಮಣದ ಪ್ರಯುಕ್ತ ಅ.17ರಂದು ತಾಲೂಕಿನ ಗಡಿಭಾಗವಾದ ಕೊಪ್ಪ ಗ್ರಾಮದ ಕಾವೇರಿ ಸೇತುವೆ ಬಳಿಯ ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ಕಾವೇರಿ ಮಾತೆ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು ಎಂದು ಭಾರವಿ ರವಿಚಂದ್ರನ್ ಕನ್ನಡ ಸಂಘದ ಅಧ್ಯಕ್ಷ ಬಬೀಂದ್ರ ಪ್ರಸಾದ್ ಹೇಳಿದರು. ಕೊಪ್ಪ ಗ್ರಾಮದ ಕಾವೇರಿ ಸೇತುವೆ ಬಳಿ 50 ಲಕ್ಷ ವೆಚ್ಚದಲ್ಲಿ ಭಾರವಿ ರವಿಚಂದ್ರನ್ ಕನ್ನಡ ಸಂಘ ಹಾಗೂ ಎಸ್ಎಲ್ಎನ್ ಕಾಫಿ ವರ್ಕ್ಸ್ ಸಾತಪ್ಪನ್, ವಿಶ್ವನಾಥನ್, ನಾರಾಯಣನ್ ಇನ್ನಿತರೆ ದಾನಿಗಳಿಂದ ಕೊಡುಗೆಯಾಗಿ ಕಾವೇರಿ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಟ ವಿ. ರವಿಚಂದ್ರನ್, ಶಾಸಕರಾದ ಕೆ. ವೆಂಕಟೇಶ್, ಎಂ.ಪಿ. ಅಪ್ಪಚ್ಚು ರಂಜನ್, ವಾಸು, ಸಿ.ಎಚ್. ವಿಜಯಶಂಕರ್, ಮಾಜಿ ಶಾಸಕರಾದ ಎಸ್. ಬಾಲರಾಜು, ಮೇಯರ್ ರಾಜೇಶ್ವರಿ, ಮಾಜಿ ಉಪ ಮೇಯರ್ ಮಹದೇವು ಭಾಗವಹಿಸುವರು. ಈ ಕಾರ್ಯಕ್ರಮದ ಅಂಗವಾಗಿ ಅ.18ರ ಬೆಳಗ್ಗೆ 11ಕ್ಕೆ ಕಾವೇರಿ ತೀರ್ಥ ಮತ್ತು ಅನ್ನದಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜನ್ಮದಿನ ಆಚರಣೆ
ಕೆ.ಆರ್. ನಗರ: ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ತಾಲೂಕು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡರ 63ನೇ ವರ್ಷದ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರು ಕಚೇರಿಗೆ ಭೇಟಿ ನೀಡಿ ದೊಡ್ಡಸ್ವಾಮೇಗೌಡ ಅವರನ್ನು ಅಭಿನಂದಿಸಿ ಶುಭಕೋರಿದರು. ಕಾರ್ಯಕರ್ತರು ಬೃಹತ್ ಕೇಕ್ ಕತ್ತರಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು. ಕಾರ್ಯಕರ್ತರನ್ನು ಉದ್ದೇಶಿಸಿ ದೊಡ್ಡಸ್ವಾಮೇಗೌಡ ಮಾತನಾಡಿದರು. ಕಚೇರಿಗೆ ಭೇಟಿ ನೀಡಿದ ಕಾರ್ಯಕರ್ತರು ದೊಡ್ಡಸ್ವಾಮೇಗೌಡ ದಂಪತಿಗೆ ಹಾರ ಹಾಕಿ, ಕೇಕ್ ತಿನ್ನಿಸಿ ಸಂತಸ ಹಂಚಿಕೊಂಡರು.